ಕಡಬ: ಕಾಣಿಯೂರು, ಮೂಲ್ಕಿ, ರಾಯಿ ಘಟನೆಗಳು ಮಾಸುವ ಮುನ್ನವೇ ಮತ್ತೋರ್ವ ಮುಸ್ಲಿಮ್ ಯುವಕನ ಮೇಲೆ ಸಂಘಪರಿವಾರದ ಕಾರ್ಯಕರ್ತರು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಸುಬ್ರಮಣ್ಯದಲ್ಲಿ ನಡೆದಿದೆ.
ಹಿಂದೂ ಯುವತಿಯನ್ನು ಭೇಟಿಯಾಗಿದ್ದಾನೆ ಎಂದು ಆರೋಪಿಸಿ ಸಂಘಪರಿವಾರದ ಕಾರ್ಯಕರ್ತರು ಯುವಕನ ಮೇಲೆ ಕ್ರೂರವಾಗಿ ಥಳಿಸಿ, ಮೃಗೀಯವಾಗಿ ವರ್ತಿಸಿ ಹಲ್ಲೆ ನಡೆಸಿದ್ದಾರೆ.
ಹಲ್ಲೆಗೊಳಗಾದ ಯುವಕನನ್ನು ಕಲ್ಲುಗುಂಡಿ ನಿವಾಸಿ ಅಫೀದ್ (20) ಹಲ್ಲೆಗೊಳಗಾದ ಯುವಕ. ಈತನನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಅಫೀದ್ ಸುಬ್ರಹ್ಮಣ್ಯ ಬಸ್ ಸ್ಟಾಂಡ್’ನಲ್ಲಿ ನಿಂತಿದ್ದಾಗ ಅಲ್ಲಿಗೆ ಬಂದ ಗುಂಪೊಂದು ಏಕಾಏಕಿ ಆತನ ಮೇಲೆ ದೊಣ್ಣೆ, ಕಬ್ಬಿಣದ ರಾಡ್’ನಿಂದ ಕ್ರೂರವಾಗಿ ಥಳಿಸಿದೆ ಎಂದು ತಿಳಿದು ಬಂದಿದೆ.
ಪರಿಣಾಮ ಯುವಕನ ತಲೆ, ಬೆನ್ನು, ಕೈ ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು, ಆತನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಹಲ್ಲೆ ನಡೆಸಿದ ಗುಂಪು ಯುವಕನ ಮೊಬೈಲ್ ತೆಗೆದುಕೊಂಡು ಅದರಲ್ಲಿ “ನನ್ನನ್ನು ಕ್ಷಮಿಸಿ, ನಾನು ಇನ್ನು ಮುಂದೆ ಲವ್ ಜಿಹಾದ್ ವಿಷಯಕ್ಕೆ ಬರುವುದಿಲ್ಲ” ಎಂದು ಸ್ಟೇಟಸ್ ಹಾಕಿದ್ದಾರೆ ಎನ್ನಲಾಗಿದೆ.
ಬಳಿಕ ಯುವಕ ‘ನನ್ನ ಫೋನ್ ಕಳವಾಗಿದೆ” ಎಂದು ಇನ್ ಸ್ಟಾಗ್ರಾಮ್ ನಲ್ಲಿ ಸ್ಟೇಟಸ್ ಹಾಕಿದ್ದ ಎಂದು ತಿಳಿದುಬಂದಿದೆ.
ಯುವತಿ ಮತ್ತು ಯುವಕನಿಗೆ ಇನ್ ಸ್ಟಾಗ್ರಾಮ್ ನಲ್ಲಿ ಪರಿಚಯವಾಗಿತ್ತು. ಆಕೆ ಹಿಂಜಾವೇ ಮುಖಂಡನ ಸಂಬಂಧಿ. ವಿಷಯ ಆಕೆಯ ಮನೆಯವರಿಗೆ ತಿಳಿದ ಬಳಿಕ ಆಕೆಯಿಂದಲೇ ಯುವಕನಿಗೆ ಕರೆ ಮಾಡಿ ಕರೆಸಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.