ಕನ್ನಡ ನಾಡು ನುಡಿಯ ತಲ್ಲಣಗಳನ್ನು ಕಡೆಗಣಿಸಿರುವ ಕನ್ನಡ ಸಾಹಿತ್ಯ ಸಮ್ಮೇಳನ: ಸಿಪಿಐಎಂ

Prasthutha|

ಬೆಂಗಳೂರು: ಪ್ರಸ್ತುತ ಕನ್ನಡ ನಾಡು ಹಾಗೂ ನುಡಿಯ ಮೇಲೆ ಭಾರತದ ಒಕ್ಕೂಟ ಹಾಗೂ ರಾಜ್ಯ ಸರ್ಕಾರಗಳ ಲೂಟಿಕೋರ ಕಾರ್ಪೋರೇಟ್ ಕಂಪನಿಗಳ ಪರ ನೀತಿಗಳನ್ನು ಬಲವಂತವಾಗಿ ಹೇರುತ್ತಿರುವುದರಿಂದ ಕರ್ನಾಟಕ ಉಸಿರು ಕಟ್ಟಿದ ಗಂಭೀರ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಕೃಷಿ, ಕೈಗಾರಿಕಾ ಬಿಕ್ಕಟ್ಟು, ನೈಸರ್ಗಿಕ ಪ್ರಕೋಪಗಳಿಂದ ಜನತೆ ತತ್ತರಿಸುತ್ತಿದೆ, ಸೌಹಾರ್ದತೆ ಕದಡಿದೆ ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಯು.ಬಸವರಾಜ ಹೇಳಿದ್ದಾರೆ.

- Advertisement -


ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, `ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಶ್ವ ಜನ ಕವಿ ಪಾಬ್ಲೋ ನೆರೂದ’ನ ನೋವುಂಡು ಆಕ್ರೋಶಿಸಿದಂತೆ, “ನೋಡಿ ಬೀದಿಯ ಮೇಲೆ ರಕ್ತವಿದೆ ! ರಕ್ತವಿದೆ ಬೀದಿಯ ಮೇಲೆ’’ ಎಂಬಂತಹ ಗಂಭೀರ ಸನ್ನಿವೇಶದಲ್ಲಿ ಹಾವೇರಿ ನಗರದಲ್ಲಿ 86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಆದರೆ, ಇಂತಹ ಜ್ವಲಂತ ಪ್ರಶ್ನೆಗಳನ್ನು ಸಾಹಿತ್ಯ ಸಮ್ಮೇಳನ ಒಳಗೊಳ್ಳದಿರುವುದು ವಿಷಾಧಕರವಾಗಿದೆ ಎಂದು ತಿಳಿಸಿದ್ದಾರೆ.


ಒಕ್ಕೂಟ ಹಾಗೂ ರಾಜ್ಯ ಸರಕಾರಗಳು ನಮ್ಮ ನುಡಿಯ ಮೇಲೆ ಗಂಭೀರ ದಾಳಿಗಳನ್ನು ಹರಿಬಿಟ್ಟಿವೆ. ಶಿಕ್ಷಣದ ವ್ಯಾಪಾರೀಕರಣ, ಕೋಮುವಾದೀಕರಣದ ಮೂಲಕ ಸಾರ್ವಜನಿಕ ಶಿಕ್ಷಣ ಹಾಗೂ ಕನ್ನಡ ಮಾಧ್ಯಮ ಶಾಲೆಗಳನ್ನು ಕೊನೆಗೊಳಿಸುವ ಮತ್ತು ರಾಜ್ಯದ ಭವಿಷ್ಯವಾಗಿರುವ ಎಳೆಯ ಮನಸ್ಸುಗಳೊಳಗೆ, ಕರ್ನಾಟಕದ ಸಮಗ್ರತೆಗೆ ಭಂಗ ಉಂಟುಮಾಡುವ ವಿಷವನ್ನು ಬೆರೆಸುವ ಭೂಮಿಕೆಯನ್ನು ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯ ಮೂಲಕ ಮಾಡಲಾಗುತ್ತದೆ. ಕನ್ನಡ ಭಾಷೆಯನ್ನು ಒಂದು ರಾಷ್ಟ್ರೀಯ ಭಾಷೆಯೆಂದು ಸಂವಿಧಾನ ಒಪ್ಪಿಕೊಂಡಿರುವಾಗ ಕನ್ನಡ ಹಾಗೂ ಅದರ ಸೋದರ ಭಾಷೆಗಳ ಮೇಲೆ ಮತ್ತೊಂದು ರಾಷ್ಟ್ರೀಯ ಭಾಷೆಯಾದ ಹಿಂದಿ ಭಾಷೆಯನ್ನು ಹೇರಲಾಗುತ್ತಿದೆ. ಕಾರ್ಪೋರೇಟ್ ಕಂಪನಿಗಳಿಗೆ ಕನ್ನಡದ ಅನ್ನದಾತರನ್ನು ನಗ್ನ ಲೂಟಿಗೊಳಪಡಿಸಲು ಮತ್ತು ದೌರ್ಜನ್ಯದ ಮೂಲಕ ಭೂಕಬಳಿಕೆ ನಡೆಸಲು ಬಿಡಲಾಗಿದೆ. ಕಳೆದ ಒಂದು ಶತಮಾನದಿಂದ ಗಳಿಸಿದ ನಮ್ಮ ಶ್ರಮಿಕರ ಹಕ್ಕುಗಳನ್ನು ಕಿತ್ತುಕೊಂಡು ಅವರ ಮೇಲೆ ಗುಲಾಮಿತನವನ್ನು ಹೇರಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

- Advertisement -


ನೊಂದು, ನಾಡು-ನುಡಿಯ ದುಸ್ಥಿತಿಯ ಕುರಿತು ತೆರೆದುಕೊಂಡ ಕಾವ್ಯ ಹಾಗೂ ಸಾಹಿತ್ಯವನ್ನು ಮತ್ತು ತೆರೆದುಕೊಂಡ ಬಾಯಿಗಳನ್ನು ಮುಚ್ಚಿಸಲಾಗುತ್ತಿದೆ. ಕೋಮು ದ್ವೇಷವನ್ನೇ ಜೀವನವನ್ನಾಗಿಸುತ್ತಾ, ಬೀದಿಗಿಳಿದ ಜನ ಚಳುವಳಿಗಳ ದಿಕ್ಕು ತಪ್ಪಿಸುವ, ಅವರ ಧ್ವನಿಯನ್ನಡಗಿಸುವ ಕೆಲಸವನ್ನೇ ದಾರಿ ತಪ್ಪಿದ ಯುವಜನರ ಪ್ರಧಾನ ವೃತ್ತಿಯನ್ನಾಗಿಸಲಾಗುತ್ತಿದೆ. ಜಾತಿ ತಾರತಮ್ಯ, ಅಸ್ಪೃಶ್ಯಾಚರಣೆ, ಕೋಮುವಾದ ಕೋರೆ ದಾಡಿಗಳಿಗೆ ಕಾನೂನಿನ ರಕ್ಷಣೆ ನೀಡಿ ಮೊನಚು ಮಾಡಲಾಗಿದೆ. ʻಕುರುಡು ಕಾಂಚಾಣದ ಕ್ರೌರ್ಯದ ಕುಣಿತʼ ಕ್ಕೆ ಬೆಂಬಲ ನೀಡಲಾಗುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತು ಇಂತಹ ಎಲ್ಲ ಜ್ವಲಂತ ಪ್ರಶ್ನೆಗಳಿಗೆ ಕಿವಿಯಾಗಿ ಸಮ್ಮೇಳನದ ಧ್ವನಿಯಾಗಿಸಬೇಕಿತ್ತು. ಕನ್ನಡ ನಾಡು, ನುಡಿಗಾಗಿ ನೈಜ ಕಾಳಜಿಯಿಂದ ಶ್ರಮಿಸುತ್ತಿರುವ ಬಹುತೇಕ ಪ್ರಮುಖ ಧ್ವನಿಗಳನ್ನು ಒಳಗೊಳ್ಳಬೇಕಿತ್ತು. ಕನ್ನಡಕ್ಕೆ ಜಾತಿ ಧರ್ಮಗಳ ತಾರತಮ್ಯವಿಲ್ಲ. ಇದಕ್ಕೆ ಕಳಂಕ ಬಾರದಂತೆ ಕ್ರಮ ವಹಿಸಬೇಕಿತ್ತು ಮತ್ತು ಸಂಕುಚಿತ ರಾಜಕಾರಣದ ಪೊರೆಯನ್ನೊದ್ದಿದೆ ಎಂಬ ಆಪಾದನೆಯಿಂದ ಕನ್ನಡ ಸಾಹಿತ್ಯ ಮುಕ್ತಗೊಳ್ಳಗೊಳ್ಳಬೇಕು ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ) ಅಭಿಪ್ರಾಯ ವ್ಯಕ್ತಪಡಿಸಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.



Join Whatsapp