ಯುವತಿ ಮೇಲೆ ಅತ್ಯಾಚಾರ, ಬಲವಂತದ ವಿವಾಹ, ಜಾತಿ ನಿಂದನೆ; ಸ್ಯಾಂಟ್ರೋ ರವಿ ವಿರುದ್ಧ ಪ್ರಕರಣ ದಾಖಲು

Prasthutha|

ಮೈಸೂರು: ಪದವೀಧರ ಯುವತಿಯೊಬ್ಬಳಿಗೆ ಕೆಲಸ ನೀಡುವ ಭರವಸೆ ನೀಡಿ, ಅತ್ಯಾಚಾರವೆಸಗಿ ಬಲವಂತದಿಂದ ಮದುವೆಯಾದ ನಂತರ ಜಾತಿ ನಿಂದನೆ ಮಾಡಿರುವ ಬಗ್ಗೆ ಕೆ.ಎಸ್. ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ ವಿರುದ್ಧ ಪ್ರಕರಣ ದಾಖಲಾಗಿದೆ.

- Advertisement -


ಒಡನಾಡಿ ಸೇವಾಸಂಸ್ಥೆಯ ಆಶ್ರಯದಲ್ಲಿರುವ ಯುವತಿಯು ಸ್ಯಾಂಟ್ರೋ ರವಿ ವಿರುದ್ಧ ದೂರು ನೀಡಿದ್ದು, ಫೈನಾನ್ಶಿಯಲ್ ಅಸಿಸ್ಟೆಂಟ್ ಹುದ್ದೆಗೆ ಸಂಬಂಧಿಸಿದ ಜಾಹೀರಾತು ನೋಡಿ ಕೆಲಸಕ್ಕೆ ಬಂದ ತನ್ನನ್ನು ಔಷಧ ಬೆರೆಸಿದ ಜ್ಯೂಸ್ ನೀಡಿ, ಅತ್ಯಾಚಾರ ನಡೆಸಿ, ಚಿತ್ರಗಳನ್ನು ಸೆರೆ ಹಿಡಿದು ಬ್ಲಾಕ್ ಮೇಲ್ ಮಾಡಿದ್ದಾನೆ. ಈ ಬಗ್ಗೆ ಯಾರಿಗೂ ಹೇಳದಂತೆ ಜೀವ ಬೆದರಿಕೆಯೊಡ್ಡಿ ಬಲವಂತವಾಗಿ ಮದುವೆಯಾಗಿದ್ದ. ಮದುವೆಯಾದ ಒಂದು ದಿನದಲ್ಲೇ ನಾನು ತವರು ಮನೆಗೆ ತೆರಳಿದ್ದೆ. ಆ ಸಂದರ್ಭದಲ್ಲಿ ತವರು ಮನೆಗೆ ಬಂದು ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ್ದಾನೆ. ವಿಜಯನಗರ ಮನೆಯಿಂದ ಹೊರಹಾಕಿದ ಕೆಲ ದಿನಗಳ ನಂತರ ಹೋಟೆಲ್’ಗೆ ಕರೆಯಿಸಿಕೊಂಡು ಅತ್ಯಾಚಾರ ನಡೆಸಿದ್ದಾನೆ. ಬಳಿಕ ಕುವೆಂಪುನಗರದ ಅಪಾರ್ಟ್’ಮೆಂಟ್ ನಲ್ಲಿ 2020 ಮಾರ್ಚ್ ನಿಂದ ಒಟ್ಟಿಗೆ ಜೀವನ ನಡೆಸಲು ಪ್ರಾರಂಭಿಸಿದಾಗ ವರದಕ್ಷಿಣೆ ನೀಡುವಂತೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾಳೆ.


ಸ್ಯಾಂಟ್ರೋ ರವಿಗೆ ಲೈಂಗಿಕ ಸೋಂಕು ಇತ್ತು. ಆದರೆ, ಆ ವಿಚಾರವನ್ನು ಮರೆಮಾಚಿ ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಅಲ್ಲದೆ ಬಲವಂತವಾಗಿ ನನಗೆ ಗರ್ಭಪಾತ ಮಾಡಿಸಿದ್ದಾರೆ. ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಯುವತಿ ದೂರಿನಲ್ಲಿ ಒತ್ತಾಯಿಸಿದ್ದಾರೆ.

- Advertisement -


ಯುವತಿ ನೀಡಿದ ದೂರಿನ ಮೇರೆಗೆ ವರದಕ್ಷಿಣೆ ಕಿರುಕುಳ, ಎಸ್’ಸಿ, ಎಸ್’ಟಿ ದೌರ್ಜನ್ಯ ತಡೆ ಕಾಯಿದೆ, ಐಪಿಸಿ 506, 498ಎ, 504, 376, 270, 313, 323ರಡಿ ಪ್ರಕರಣ ದಾಖಲಿಸಿಕೊಂಡಿರುವ ವಿಜಯನಗರ ಠಾಣಾ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.


ದಲಿತ ಯುವತಿಯ ಮೇಲೆ ದೌರ್ಜನ್ಯ ಎಸಗಿರುವ ಸ್ಯಾಂಟ್ರೋ ರವಿ ವಿರುದ್ದ ಕ್ರಮ ಜರುಗಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ಒತ್ತಾಯಿಸಿದೆ.


ರವಿಗೆ ರಾಜಕಾರಣಿಗಳು ಮತ್ತು ಅಧಿಕಾರಿಗಳೊಂದಿಗೆ ಸಂಪರ್ಕ ಇದ್ದು, ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಆರೋಪಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಸರ್ಕಾರವನ್ನೇ ಹೊಣೆ ಮಾಡಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.



Join Whatsapp