ಕೊಲ್ಕತ್ತಾ: ಹೌರಾದಿಂದ ಹೊಸದಾಗಿ ಪ್ರಾರಂಭಿಸಲಾದ ವಂದೇ ಭಾರತ್ ಎಕ್ಸ್’ಪ್ರೆಸ್ ರೈಲಿಗೆ ಕೆಲವು ಸಮಾಜಘಾತುಕರು ಕಲ್ಲು ತೂರಾಟ ನಡೆಸಿದ ಪರಿಣಾಮ ರೈಲಿನ ಕಿಟಕಿ ಗಾಜುಗಳು ಹುಡಿಯಾದ ಘಟನೆ ಪಶ್ಚಿಮ ಬಂಗಾಳದ ಮಾಲ್ಡಾದ ಕುಮಾರ್ ಗಂಜ್’ನಲ್ಲಿ ನಡೆದಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಹೌರಾದಿಂದ ನ್ಯೂ ಜಲ್ಪೈಗುರಿ ಜಂಕ್ಷನ್ ಗೆ ಭಾರತದ 7 ನೇ ವಂದೇ ಭಾರತ್ ಎಕ್ಸ್’ಪ್ರೆಸ್ ಹಸಿರು ನಿಶಾನೆ ತೋರಿದ ನಾಲ್ಕು ದಿನಗಳ ನಂತರ ಈ ಘಟನೆ ನಡೆದಿದೆ.
ದಕ್ಷಿಣ ಬಂಗಾಳದಿಂದ ಉತ್ತರ ಬಂಗಾಳಕ್ಕೆ ಸಂಪರ್ಕ ಕಲ್ಪಿಸುವ ಎಕ್ಸ್’ಪ್ರೆಸ್ ರೈಲನ್ನು ಡಿಸೆಂಬರ್ 30, 2022 ರಂದು ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರ ಸಮ್ಮುಖದಲ್ಲಿ ಹೌರಾದಿಂದ ಔಪಚಾರಿಕವಾಗಿ ಚಾಲನೆ ನೀಡಲಾಗಿತ್ತು.
ವಂದೇ ಭಾರತ್ ಎಕ್ಸ್’ಪ್ರೆಸ್ 7.45 ನಿಮಿಷಗಳಲ್ಲಿ 564 ಕಿಲೋ ಮೀಟರ್ ದೂರ ಕ್ರಮಿಸುತ್ತದೆ. ಈ ಮಾರ್ಗದಲ್ಲಿನ ಇತರ ರೈಲುಗಳಿಗೆ ಹೋಲಿಸಿದರೆ ಇದು ಮೂರು ಗಂಟೆಗಳ ಪ್ರಯಾಣದ ಸಮಯವನ್ನು ಕಡಿಮೆ ಇದೆ. ಮೂರು ಕಡೆ ಮಾತ್ರ ಇದು ನಿಲ್ಲಲಿದೆ. ದೇಶಾದ್ಯಂತ ಆರಂಭಿಸಲಾಗುತ್ತಿರುವ ವಂದೇ ಭಾರತ್ ರೈಲಿನ ಮೇಲೆ ಕಿಡಿಗೇಡಿ ಕೃತ್ಯ ನಡೆಯುತ್ತಲೇ ಇವೆ.
ಕಲ್ಲು ತೂರಾಟದಿಂದ 2 ಬೋಗಿಯ ಬಾಗಿಲು ಮತ್ತು ಕಿಟಕಿಗಳಿಗೆ ಹಾನಿಯಾಗಿದೆ. ಕಿಟಿಕಿಯ ಗಾಜು ಒಡೆದು ಹೋಗಿದೆ. ಯಾರಿಗೂ ಗಾಯಗಳಾಗಿಲ್ಲ. ರೈಲ್ವೆ ಸಂರಕ್ಷಣಾ ಪಡೆ ಈ ಕುರಿತು ತನಿಖೆ ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೈಲ್ವೆ ಕಾಯ್ದೆಯ ಸೆಕ್ಷನ್ 154 ರ ಅಡಿಯಲ್ಲಿ ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅಪರಾಧ ಸಾಬೀತಾದರೆ ವ್ಯಕ್ತಿಯು 1 ವರ್ಷದವರೆಗೆ ಜೈಲು ಶಿಕ್ಷೆ, ದಂಡ ಅಥವಾ ಎರಡಕ್ಕೂ ಒಳಪಡಬಹುದಾಗಿದೆ.