‘ಕನ್ನಡಿಗರ ಎಟಿಎಂ ಲೂಟಿ ಮಾಡಿದವರು ಬಿಜೆಪಿಗರು’: ಶಾ ಎಟಿಎಂ ಟೀಕೆಗೆ ತಿರುಗೇಟು ಕೊಟ್ಟ HDK

Prasthutha|

ಮೈಸೂರು: ದೇವೇಗೌಡರ ಬಗ್ಗೆ ಮಾತನಾಡುವ ನೈತಿಕತೆ ಅಮಿತ್ ಶಾಗೆ ಇಲ್ಲ. ಆದರೂ ಸುಖಾಸುಮ್ಮನೆ ನಮ್ಮ ಕುರಿತು ಮಾತನಾಡುತ್ತಿದ್ದಾರೆ ಎಂದ ಅವರು, ಬಿಜೆಪಿಯವರು ಕನ್ನಡಿಗರ ಎಟಿಎಂ ಅನ್ನು ಲೂಟಿ ಮಾಡಿದ್ದಾರೆ. ಅದರ ಬಗ್ಗೆ ಅಮಿತ್ ಶಾ ಮಾತನಾಡಲಿ ಎಂದು ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ತಿರುಗೇಟು ನೀಡಿದ್ದಾರೆ.

- Advertisement -

ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಅವರು, ಮಂಡ್ಯ ಭೇಟಿ ವೇಳೆ ಜೆಡಿಎಸ್ ಪಕ್ಷ ಹಾಗೂ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ವಿರುದ್ಧ ಮಾತನಾಡಿದ್ದ ಅಮಿತ್ ಶಾ ವಿರುದ್ಧ ತೀವ್ರ ಟೀಕಾ ಪ್ರಹಾರ ನಡೆಸಿದರು.

ಜೆಡಿಎಸ್ ಗೆದ್ದರೆ ಕುಟುಂಬದ ಎಟಿಎಂ ಆಗುತ್ತದೆ ಎನ್ನುವ ಶಾ ಹೇಳಿಕೆ ಬಗ್ಗೆ ಕಿಡಿಕಾರಿದ ಮಾಜಿ ಮುಖ್ಯಮಂತ್ರಿ ಅವರು, ಗೃಹ ಸಚಿವರ ಹೇಳಿಕೆಗೆ ಉತ್ತರ ನೀಡಿದ್ದೇನೆ. ಆದರೆ ನಾನು ಕೇಳಿದ್ದ ಪ್ರಶ್ನೆಗಳಿಗೆ ಉತ್ತರ ಕೊಡಲಿಲ್ಲ. ಯಾವುದಾದರೂ ಒಂದು ಪ್ರಕರಣದಲ್ಲಿ ನಾಡಿನ ಸಂಪತ್ತುನ್ನು ಎಟಿಎಂ ಆಗಿ ದುರ್ಬಳಕೆ ಮಾಡಿಕೊಂಡಿದ್ದರೆ ರಾಜ್ಯದ ಜನತೆ ಮುಂದಿಡಿ ಎಂದು ಅವರು ಸವಾಲು ಹಾಕಿದರು.

- Advertisement -

ಬಿಜೆಪಿಗೆ ಇಡೀ ಕರ್ನಾಟಕವೇ ಎಟಿಎಂ ಆಗಿದೆ. ಎಲ್ಲೆಲ್ಲೂ ಪರ್ಸಂಟೇಜ್ ವ್ಯವಹಾರ ನಡೆಯುತ್ತಿದೆ. 40% ಪರ್ಸಂಟ್ ವ್ಯವಹಾರ ಇಡೀ ಜಗತ್ತಿಗೆ ಗೊತ್ತಿರುವ ಸಂಗತಿ. ಇದು ಅಮಿತ್ ಶಾ ಅವರಿಗೆ ಗೊತ್ತಿಲ್ಲವೆ? ಎಂದು ಮಾಜಿ ಮುಖ್ಯಮಂತ್ರಿಗಳು ಕುಟುಕಿದರು.

ಜೈ ಶಾ ಅರ್ಹತೆ ಏನು?:

ಅಮಿತ್ ಶಾ ಮಗ ಜೈ ಶಾಗೆ ಭಾರತೀಯ ಕ್ರಿಕೆಟ್ ಮಂಡಳಿಯಲ್ಲಿ ಇದ್ದಾರೆ. ಕ್ರಿಕೆಟ್ ಗೆ ಅವರ ಕೊಡುಗೆ ಏನು? ಎಂದು ಪ್ರಶ್ನಿಸಿದ ಕುಮಾರಸ್ವಾಮಿ ಅವರು, ಬಿಸಿಸಿಐನಲ್ಲಿ ಬಂದು ಕೂರಲು ಜೈ ಶಾಗೆ ಏನು ಅರ್ಹತೆ ಇದೆ ಎನ್ನುವುದನ್ನು ಎಟಿಎಂ ಆರೋಪ ಮಾಡಿರುವ ಅಮಿತ್ ಶಾ ದೇಶಕ್ಕೆ ಹೇಳಬೇಕು ಎಂದು ಒತ್ತಾಯ ಮಾಡಿದರು.

ಬಿಜೆಪಿ ಜತೆ ಸರಕಾರ ಮಾಡಲು ನಾನೇನು ಅರ್ಜಿ ಹಾಕಿಕೊಂಡು ಇವರ ಮನೆ ಮುಂದೆ ಹೋಗಿದ್ದೇನಾ? ಹೊಂದಾಣಿಕೆ ಮಾಡಿಕೊಳ್ಳಿ ಅಂತ ಕಾಂಗ್ರೆಸ್ ಮತ್ತು ಬಿಜೆಪಿ ಮನೆ ಬಾಗಿಲಿಗೆ ಹೋಗಿದ್ದೇನಾ? ಇವರೇ ಬಂದರು, ಸರಕಾರ ಮಾಡೋಣ ಎಂದು ದುಂಬಾಲು ಬಿದ್ದರು ಎಂದು ಕುಮಾರಸ್ವಾಮಿ ಅವರು ಟೀಕಾಪ್ರಹಾರ ನಡೆಸಿದರು.

ನನ್ನ ಗುರಿ ಸ್ಪಷ್ಟವಾಗಿದೆ. 123 ಸಂಖ್ಯೆ ದಾಟಲು ದಿನದ 20 ಗಂಟೆ ದುಡಿಯುತ್ತೇನೆ. ನನ್ನ ಪಂಚರತ್ನ ರಥಯಾತ್ರೆ ಹೇಗೆ ಆಗುತ್ತಿದೆ ಎನ್ನುವುದು ಬಿಜೆಪಿಗೆ ಗೊತ್ತಾಗಿದೆ. ಜೆಡಿಎಸ್ ಪಕ್ಷದ ಬಗ್ಗೆ ಅವರಿಗೆ ಹೆದರಿಕೆ ಆರಂಭವಾಗಿದೆ. ಅದಕ್ಕೆ ಹೀಗೆ ಮಾತನಾಡುತ್ತಿದ್ದಾರೆ. ಅವರು ವಿನಾಕಾರಣ ಕಂಠ ಶೋಷಣೆ ಮಾಡಿಕೊಂಡರೆ ನನಗೇನು? ಎಂದು ಅವರು ಹೇಳಿದರು.

ಅಮಿತ್ ಶಾ ಏನು ಎನ್ನುವುದು ಕನ್ನಡಿಗರಿಗೆ ಮಾತ್ರವಲ್ಲ, ಇಡೀ ದೇಶಕ್ಕೆ ಅರ್ಥವಾಗಿದೆ. ಈ ತನಕ 800 ಶಾಸಕರು, ನಾಯಕರನ್ನು ಆಪರೇಷನ್ ಕಮಲ ಮಾಡಿದ್ದಾರೆ. ಐಟಿ, ಇಡಿ ಗುಮ್ಮನ್ನು ಬಿಟ್ಟು ಹೆದರಿಸುತ್ತಾರೆ. ಹೀಗೆ ನನ್ನನ್ನು ಹೆದರಿಸಲು ಅವರಿಗೆ ಸಾಧ್ಯ ಇಲ್ಲ. ನಾನು ಹಾಗೆ ಹೆದರುವ ಪೈಕಿ ಅಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ಅಮಿತ್ ಶಾ ಅವರು ಐಟಿ, ಇಡಿ ತೆಗೆದುಕೊಂಡು ಬರಲಿ, ಐಟಿ, ಇಡಿ ಗದಾಪ್ರಹಾರದೊಂದಿಗೆ ಕರೆದುಕೊಂಡು ಬರಲಿ, ನಾನು ಹೆದರಲ್ಲ, ಏಕೆಂದರೆ ನಾನು ಸ್ವಚ್ಛವಾಗಿದ್ದೇನೆ. ಮನೀಷ್ ಸಿಸೋಡಿಯಾ, ಕೆ.ಚಂದ್ರಶೇಖರ ರಾವ್ ಮುಂತಾದವರ ಮೇಲೆ ಇದೇ ಗದಾಪ್ರಹಾರ ಮಾಡುತ್ತಿದ್ದಾರೆ. ಇಲ್ಲಿಗೂ ಬರಲಿ, ನಾನೇನು ಹೆದರಲ್ಲ. ಭ್ರಷ್ಟ ಕುಟುಂಬ ಅಂತ ಹೇಳೋದಿಕ್ಕೆ ಯಾವುದಾದರೂ ನಿದರ್ಶನ ನೀಡಲಿ. ಬಿಜೆಪಿಯಲ್ಲಿ ಎಷ್ಟು ಕುಟುಂಬಗಳಿವೆ, ಎಷ್ಟು ಎಟಿಎಂ ಗಳಿವೆ ಎನ್ನುವುದು ನನಗಿಂತ ಜನರಿಗೆ ಚೆನ್ನಾಗಿ ಗೊತ್ತಿದೆ ಎಂದರು.

ನಮ್ಮ ಎಟಿಎಂ ಜನತೆಯ ಕಷ್ಟಕ್ಕೆ ಕೊಟ್ಟಿದ್ದೇವೆ. ಅದು ಅಮಿತ್ ಶಾ ತಿಳಿದುಕೊಳ್ಳಲಿ. ಬಿಜೆಪಿಯವರ ಎಟಿಎಂ ಕ್ರಿಪ್ಟೊ ಕರೆನ್ಸಿ, ಡಾಲರ್ ಆಗಿದೆ. ಅವರು ಏನೆಲ್ಲಾ ಮಾಡುತ್ತಿದ್ದಾರೆ ಎನ್ನುವುದು ನನಗೂ ಗೊತ್ತಿದೆ ಎಂದು ಅವರು ತಿರುಗೇಟು ನೀಡಿದರು.

ಅಮಿತ್ ಶಾ ಅವರು ನನ್ನ ಪಕ್ಷವನ್ನು ಕೆಣಕಿದ್ದಾರೆ. ಉತ್ತರ ಕೊಡದೆ ಬಿಡುವುದಿಲ್ಲ. 2018ರಲ್ಲಿ ಕಾಂಗ್ರೆಸ್ ಜತೆ ಸೇರಿ ಸರಕಾರ ಮಾಡಿದ್ದಾಗ, ಕಾಂಗ್ರೆಸ್ ಜತೆ ಸರಕಾರ ಮಾಡುವುದು ಬೇಡ. ಹೊಸದಾಗಿ ಚುನಾವಣೆಗೆ ಹೋಗಿ ಎಂದು ಪ್ರಧಾನಿ ಮೋದಿ ಹೇಳಿದ್ದರು. ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಜೆಡಿಎಸ್ ಮನೆ ಬಾಗಿಲು ತಟ್ಟಿದ್ದರು ಎಂದು ಮಾಜಿ ಮುಖ್ಯಮಂತ್ರಿ ಅವರು ಅಮಿತ್ ಶಾ ಅವರಿಗೆ ಹಳೆಯದನ್ನು ನೆನಪು ಮಾಡಿಕೊಟ್ಟರು.



Join Whatsapp