ಬೆಂಗಳೂರು: ಕಾರಿನಲ್ಲಿ ತಲೆಗೆ ಗುಂಡು ಹಾರಿಸಿಕೊಂಡು ಬೆಳ್ಳಂದೂರಿನ ಅಂಬಲಿಪುರ ನಿವಾಸಿ ಪ್ರದೀಪ್ ಅವರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಸಂಬಂಧ ಶಾಸಕ ಹಾಗೂ ಮಾಜಿ ಸಚಿವ ಅರವಿಂದ್ ಲಿಂಬಾವಳಿ ವಿರುದ್ಧ ಎಫ್’ಐಆರ್ ದಾಖಲಾಗಿದೆ.
ಬಿಜೆಪಿಯ ಪ್ರಭಾವಿ ಮುಖಂಡ ಅರವಿಂದ ಲಿಂಬಾವಳಿ ಸಹಿತ ಆರು ಜನರ ಹೆಸರು ಡೆತ್ ನೋಟ್ ನಲ್ಲಿ ಬರೆದಿಟ್ಟು ಪ್ರದೀಪ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ತಕ್ಷಣವೇ ಸ್ಥಳಕ್ಕೆ ಧಾವಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿ ಪ್ರಕರಣದಲ್ಲಿ ಶೋಧ ನಡೆಸಲು ಸೂಚನೆ ನೀಡಿದ್ದು, ಎಫ್ ಎಸ್ ಎಲ್ ತಂಡ ಬಂದು ಸಾಕ್ಷ್ಯ ಕಲೆ ಹಾಕಿದೆ.
ಸಾವಿಗೂ ಮುನ್ನ ಶಾಸಕ ಅರವಿಂದ ಲಿಂಬಾವಳಿ, ಗೋಪಿ.ಕೆ, ಸೋಮಯ್ಯ, ಜಿ.ರಮೇಶ್ ರೆಡ್ಡಿ, ಜಯರಾಮ್ ರೆಡ್ಡಿ, ರಾಘವ್ ಭಟ್ ಹೆಸರುಗಳನ್ನು ಉಲ್ಲೇಖಿಸಿ ಪ್ರದೀಪ್ಎಂಟು ಪುಟಗಳ ಡೆತ್ ನೋಟ್ ಬರೆದಿಟ್ಟಿದ್ದಾರೆ.
ಡೆತ್ ನೋಟ್ ಪ್ರಕಾರ 2 ಕೋಟಿ 20 ಲಕ್ಷ ಬರಬೇಕಿದ್ದು, ಕ್ಲಬ್ ಪ್ರಾರಂಭಿಸಲು ಮಾಡಿಕೊಂಡಿದ್ದ ಸಾಲಕ್ಕೆ ಬಡ್ಡಿ ಹಣ ಕಟ್ಟಲು ಪತ್ನಿ ಕೂಡಾ ಸಾಲ ಮಾಡಿಕೊಟ್ಟಿದ್ದಾರೆ. ಈ ಎಲ್ಲ ಹಣವೂ ಪತ್ನಿ ಮತ್ತು ಮಗಳಿಗೆ ಕೊಡಿಸಬೇಕು ಎಂದು ಉಲ್ಲೇಖಿಸಿ ಪ್ರದೀಪ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇನ್ನು ಘಟನೆ ಸಂಬಂಧ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರದೀಪ್ ಮತ್ತು ಆತನ ಪತ್ನಿಯ ನಡುವೆ ಕೌಟುಂಬಿಕ ಕಲಹ ಕೂಡ ಇದ್ದು, ಪ್ರಕರಣ ಬೆಳ್ಳಂದೂರು ಪೊಲೀಸ್ ಠಾಣೆ ಮೆಟ್ಟಿಲು ಕೂಡ ಏರಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪ್ರದೀಪ್ ಸಾವಿನ ಕೇಸ್ ನಲ್ಲಿ ಪ್ರಭಾವಿಗಳ ಪಾತ್ರ ಏನು ಎನ್ನುವುದರ ಪತ್ತೆ ಹಚ್ಚುತ್ತಿದ್ದಾರೆ.