ಬಂಟ್ವಾಳ: ಅಡಿಕೆ ಕಳವುಗೈದ ಆರೋಪಿಯನ್ನು ಕೃತ್ಯಕ್ಕೆ ಉಪಯೋಗಿಸಿದ ಸ್ಕೂಟರ್ ಹಾಗೂ ನಗದು ಸಹಿತ ಬಂಧಿಸಿದ ಘಟನೆ ಬಂಟ್ವಾಳದಲ್ಲಿ ನಡೆದಿದೆ.
ಬಂಟ್ವಾಳ ಬಾಳ್ತಿಲ ಗ್ರಾಮದ ಕಸೆಕೋಡಿಯ ಮಂಜುನಾಥ ನಾಗರಾಜ್ ಭೋವಿ ಬಂಧಿತ ಆರೋಪಿ. ಕಳವು ಮಾಡಿದ 105 ಕೆ.ಜಿ ಅಡಿಕೆಯನ್ನು ಬಂಟ್ವಾಳ ಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಐವನ್ ತೋರಸ್ ಎಂಬವರು ತಮ್ಮ ಅಡಿಕೆ ತೋಟದ ಮಧ್ಯದಲ್ಲಿರುವ ಅಂಗಳದಲ್ಲಿ ಅಡಿಕೆಯನ್ನು ಒಣಗಲು ಹಾಕಿದ್ದರು. ಡಿಸೆಂಬರ್ 24ರ ಸಂಜೆ 6 ಗಂಟೆಯ ನಂತರ ಹಾಗೂ ಡಿಸೆಂಬರ್ 29ರ ಸಂಜೆ 6.30ರ ಒಳಗೆ 100-120 ಕೆ.ಜಿ ಅಡಿಕೆಯನ್ನು ಕಳ್ಳರು ಕದ್ದೊಯ್ದಿದ್ದರು. ಈ ಸಂಬಂಧ ಡಿಸೆಂಬರ್ 30ರಂದು ಐವನ್ ತೋರಸ್ ಅವರು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯು ಮಂಗಳೂರು ನಗರದ ಕೊಣಾಜೆ, ಉಳ್ಳಾಲ ಪೊಲೀಸ್ ಠಾಣೆಗಳಲ್ಲಿ ಮಾತ್ರವಲ್ಲದೆ, ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ, ಕಾರವಾರ, ಹೊನ್ನಾವರ ಠಾಣಾ ವ್ಯಾಪ್ತಿಯಲ್ಲಿ ಕಳವು ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಆರೋಪಿಯನ್ನು ನ್ಯಾಯಾಲದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.