ಹಾವೇರಿ: 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮುಸ್ಲಿಂ ಸಮುದಾಯದ 13 ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ ಎಂದು ಕಸಾಪ ಅಧ್ಯಕ್ಷ ಮಹೇಶ ಜೋಶಿ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಆಮಂತ್ರಣ ಪತ್ರಿಕೆಯ ಮುಖಪುಟದಲ್ಲಿಯೇ ಕನ್ನಡ ಸಾಹಿತ್ಯ ಪರಿಷತ್ತಿನ ಆಧಾರ ಸ್ತಂಭಗಳಲ್ಲಿ ಒಬ್ಬರಾದ ಸರ್ ಮಿರ್ಜಾ ಇಸ್ಮಾಯಿಲ್ ಅವರ ಭಾವಚಿತ್ರವನ್ನು ಪ್ರಕಟಿಸಿದ್ದೇವೆ. ಸಮ್ಮೇಳನದ ಪ್ರಧಾನ ವೇದಿಕೆಗೆ ಶಿಶುನಾಳ ಷರೀಫರ ಹೆಸರಿಟ್ಟಿದ್ದೇವೆ. ಅಷ್ಟೇ ಏಕೆ ‘ಕನ್ನಡ ರಥ’ವನ್ನು ಸಿದ್ಧಪಡಿಸಿದವರು ಷಹಜಹಾನ್ ಮುದಕವಿ ಮತ್ತು ರಾಜ್ಯಾದ್ಯಂತ ರಥವನ್ನು ಮುನ್ನಡೆಸುತ್ತಿರುವವರು ನಬಿಸಾಬ್ ಕುಷ್ಟಗಿ. ಇವರೆಲ್ಲ ಮುಸ್ಲಿಮರಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಹಿಂದಿನ ಏಳು ಕನ್ನಡ ಸಾಹಿತ್ಯ ಸಮ್ಮೇಳನಗಳಿಗಿಂತ ಈ ಸಮ್ಮೇಳನದಲ್ಲೇ ಮುಸ್ಲಿಮರಿಗೆ ಅತಿ ಹೆಚ್ಚು ಪ್ರಾಧಾನ್ಯತೆ ನೀಡಿದ್ದೇವೆ. ಮುಸ್ಲಿಂ ಸಮುದಾಯವನ್ನು ಕಡೆಗಣಿಸಿದ್ದಾರೆ ಎಂದು ಆರೋಪವು ಪೂರ್ವನಿಯೋಜಿತ ಕುತಂತ್ರ’ ಎಂದು ಹೇಳಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಸಲೀಂ ಅಹಮದ್, ಕವಿಗೋಷ್ಠಿ ನಿರ್ವಹಣೆಗೆ ಮೆಹಬೂಬ್ ಹುಸೇನ್, ಸ್ಪರ್ಧಾತ್ಮಕ ಪರೀಕ್ಷೆಯ ಗೋಷ್ಠಿಯಲ್ಲಿ ಮುಹಮ್ಮದ್ ರಫಿ ಪಾಶಾ ಇದ್ದಾರೆ. ನಿರ್ವಹಣೆ, ನಿರೂಪಣೆ, ಸ್ವಾಗತ, ವಂದನಾರ್ಪಣೆಗಳಲ್ಲಿ ಮಹೆಬೂಬ್ ಹುಸೇನ್, ಹಾಸಿಂ ಪೀರ್ ವಾಲೀಕಾರ್, ರಂಜಾನ್ ಕಿಲ್ಲೇದಾರ, ನಬೀಸಾಬ್ ಕುಷ್ಟಗಿ, ಎಂ.ಖಾಸಿಂ ಮುಂತಾದವರು ಇದ್ದಾರೆ ಎಂದು ವಿವರ ನೀಡಿದರು.