ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಹೆಣ ರಾಜಕೀಯದ ಮೂಲಕ ಚುನಾವಣಾ ಪೂರ್ವ ತಯಾರಿ ಆರಂಭಿಸಿದೆ ಎಂದು ಎಸ್’ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಆರೋಪಿಸಿದ್ದಾರೆ.
ಅಬ್ದುಲ್ ಜಲೀಲ್ ಹತ್ಯೆಯನ್ನು ಖಂಡಿಸಿ ಎಸ್’ಡಿಪಿಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಕೆಲವು ಅಹಿತಕರ ಘಟನೆಗಳನ್ನು ನೋಡುವಾಗ ಬಿಜೆಪಿ ಚುನಾವಣಾ ಸಿದ್ಧತೆ ನಡೆಸಿದೆ ಎಂಬುದು ಸ್ಪಷ್ಟವಾಗಿದೆ. ಹಿಂದೆಲ್ಲಾ ಅರ್ಧಕ್ಕೆ ನಿಂತ ಕಾಮಗಾರಿಗಳು ಪುನಾರಂಭಗೊಂಡಾಗ, ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ಮಾಡಿದಾಗ ಚುನಾವಣಾ ಸಿದ್ಧತೆ ಆರಂಭಗೊಂಡಿದೆ ಎಂದು ಜನರು ಭಾವಿಸುತ್ತಿದ್ದರು. ಆದರೆ ಇದೀಗ ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ಹಲ್ಲೆ ನಡೆಸುವುದು, ನೈತಿಕ ಪೊಲೀಸ್’ಗಿರಿ ನಡೆಸುವುದು, ಹತ್ಯೆ ನಡೆಸುವುದು ಮುಂತಾದ ಕೃತ್ಯಗಳ ಮೂಲಕ ಚುನಾವಣೆಗೆ ಸಿದ್ಧತೆ ನಡೆಸುವ ಕೆಟ್ಟ ಚಾಳಿಯನ್ನು ಬಿಜೆಪಿ ಅನುಸರಿಸುತ್ತಿದೆ. ಇವರು ಗುಜರಾತ್ ಮತ್ತು ಉತ್ತರ ಪ್ರದೇಶಗಳಲ್ಲೂ ಇದೇ ಮಾದರಿಯನ್ನು ಅನುಸರಿಸಿ ಅಧಿಕಾರಕ್ಕೆ ಬಂದಿದ್ದಾರೆ. ಅದನ್ನೇ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಜಾರಿಗೊಳಿಸಲು ನಿರಂತರ ಪ್ರಯತ್ನ ನಡೆಯುತ್ತಿದೆ. ಜಿಲ್ಲೆಯ ಪ್ರಜ್ಞಾವಂತರು ಬಿಜೆಪಿಯ ಈ ಅಮಾನವೀಯ ಕೃತ್ಯವನ್ನು ವಿಫಲಗೊಳಿಸಬೇಕು ಎಂದು ಹೇಳಿದರು.
ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದ ಸರ್ಕಾರವನ್ನು 2023ರಲ್ಲಿಯೂ ಉಳಿಸಿಕೊಳ್ಳಬೇಕು ಎಂಬ ದುರುದ್ದೇಶದಿಂದ ಹಿಂದುತ್ವ ತೀವ್ರ ಪ್ರತಿಪಾದಕರಾದ ಸಾದ್ವಿ ಪ್ರಜ್ಞಾಸಿಂಗ್, ಯೋಗಿ ಆದಿತ್ಯನಾಥ್ ಮುಂತಾದ ಉಗ್ರ ಭಾಷಣಕಾರರನ್ನು ರಾಜ್ಯಕ್ಕೆ ಕರೆಸಿ ಪ್ರಚೋದನಾಕಾರಿ ಭಾಷಣ ಮಾಡಿಸಲಾಗುತ್ತಿದೆ. ಧರ್ಮ ಧರ್ಮಗಳ ನಡುವೆ ಕಂದಕ ಸೃಷ್ಟಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಯುವಕರಿಗೆ ಪ್ರಚೋದನೆ ನೀಡಿ ಅಮಾಯಕ ಮುಸ್ಲಿಮರನ್ನು ಹತ್ಯೆ ಮಾಡಿಸಲಾಗುತ್ತಿದೆ. ಇವುಗಳನ್ನು ಬಗ್ಗುಬಡಿಯಬೇಕಾದ ಪೊಲೀಸ್ ಇಲಾಖೆ ಸಂಘಪರಿವಾರದವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ. ಇದರಿಂದಾಗಿ ಆರೋಪಿಗಳ ವಿರುದ್ಧ ದುರ್ಬಲ ಕಲಂಗಳಡಿ ಪ್ರಕರಣ ದಾಖಲಿಸಿ ಬಂಧನವಾದ ದಿನದಂದೇ ಬಿಡುಗಡೆ ಕೂಡ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಪ್ರಜಾಪ್ರಭುತ್ವವನ್ನು ಉಳಿಸಲು ಮತ್ತು ಸಂವಿಧಾನವನ್ನು ರಕ್ಷಿಸಲು ನಾವು ನಮ್ಮೆಲ್ಲಾ ಭಿನ್ನಾಭಿಪ್ರಾಯ, ಆಶಯಗಳನ್ನು ಬದಿಗಿಟ್ಟು ಒಗ್ಗಟ್ಟಿನಿಂದ ಹೋರಾಟ ನಡೆಸಬೇಕಾಗಿದೆ. ನಿನ್ನೆ ಮಂಗಳೂರಿನಲ್ಲಿ ಉಲೆಮಾಗಳು ಒಗ್ಗೂಡಿ ಬೀದಿಗಿಳಿದಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಅನ್ಯಾಯ ಉಂಟಾದಾಗ ಉಲೆಮಾಗಳು ಕೂಡ ಬೀದಿಗಿಳಿಯಲಿದ್ದಾರೆ ಎಂಬುದನ್ನು ಜಿಲ್ಲೆಯ ವಿದ್ವಾಂಸರು ತೋರಿಸಿಕೊಟ್ಟಿದ್ದಾರೆ. ಸಂಘಪರಿವಾರದ ಫ್ಯಾಶಿಸ್ಟ್ ಸಿದ್ಧಾಂತವನ್ನು ಬಗ್ಗುಬಡಿಯಲು ಮಹಿಳೆಯರು, ವಿದ್ಯಾರ್ಥಿಗಳು, ವಿದ್ವಾಂಸರು, ಉಲೆಮಾಗಳು ಬೀದಿಗಿಳಿದು, ಸಂವಿಧಾನಬದ್ಧ ಹೋರಾಟ ನಡೆಸುವ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದರು.
ಎಸ್’ಡಿಪಿಐ ರಾಜ್ಯ ಸಮಿತಿ ಸದಸ್ಯ ರಿಯಾಝ್ ಕಡಂಬು ಮಾತನಾಡಿ, ಬಿಜೆಪಿ ಅಧಿಕಾರಾವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ 8 ಜೀವಗಳನ್ನು ಕಳೆದುಕೊಂಡಿದೆ. ಎನ್’ಆರ್’ಸಿ ವಿರುದ್ಧದ ಪ್ರತಿಭಟನೆಯಲ್ಲಿ ಜಲೀಲ್ ಮತ್ತು ನೌಶೀನ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಯಿತು. ಅವರಿಗೆ ಪರಿಹಾರ ನಿರಾಕರಿಸಲಾಯಿತು. ದಿನೇಶ್ ಕನ್ಯಾಡಿಯನ್ನು ಥಳಿಸಿ ಹತ್ಯೆ ಮಾಡಿದಾಗ ಹಿಂದೂ ಪರ ಎನ್ನುವ ಸರ್ಕಾರ ಸಮರ್ಪಕ ಪರಿಹಾರ ವಿತರಿಸಲಿಲ್ಲ. ಸರ್ಕಾರವೇ ಸಂತ್ರಸ್ತ ಕುಟುಂಬಗಳ ಮಧ್ಯೆ ತಾರತಮ್ಯವೆಸಗಿತು ಎಂದು ಆರೋಪಿಸಿದರು.
ಜನರು ಕಾನೂನಿನ ಮೇಲಿನ ವಿಶ್ವಾಸ ಕಳೆದುಕೊಳ್ಳುವಂತೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ವರ್ತಿಸಬಾರದು. ಜಿಲ್ಲೆಯಲ್ಲಿ ಶಾಂತಿ, ಸೌಹಾರ್ದತೆ ಕಾಪಾಡಲು ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರಾದ ಕಲಂದರ್ ಪರ್ತಿಪ್ಪಾಡಿ, ಅಕ್ಬರಲಿ, ಮೊನಿಶ್ ಅಲಿ, ಶಾಹುಲ್ ಹಮೀದ್, ಶರೀಫ್ ಮತ್ತಿತರರು ಭಾಗವಹಿಸಿದ್ದರು.