ಚೆನ್ನೈ : ಮಲಯಾಳಂ ಚಿತ್ರರಂಗದ ಖ್ಯಾತ ನಿರ್ದೇಶಕ ನರನಿಪುಳ ಶಾನವಾಸ್ (40) ಹೃದಯಾಘಾತದಿಂದ ಅಕಾಲಿಕ ಸಾವಿಗೀಡಾಗಿದ್ದಾರೆ. ಶೂಟಿಂಗ್ ವೇಳೆ ಹೃದಯಾಘಾತವಾಗಿ, ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಲ್ಲಿ ಬ್ರೈನ್ ಡೆಡ್ ಆಗಿ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು ಎಂದು ವರದಿಗಳು ತಿಳಿಸಿವೆ.
‘ಗಾಂಧಿರಾಜನ್’ ಸಿನೆಮಾ ನಿರ್ದೇಶನದ ವೇಳೆ ಮಂಗಳವಾರ ಅವರಿಗೆ ಹೃದಯಾಘಾತವಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ಕೊಚ್ಚಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬುಧವಾರ ರಾತ್ರಿ 10:20ರ ಸುಮಾರಿಗೆ ಅವರು ಮೃತಪಟ್ಟಿದ್ದಾರೆ.
ಅವರ ನಿರ್ದೇಶನದ ಈ ವರ್ಷ ತೆರೆಕಂಡ ‘ಸೂಫಿಯುಂ ಸುಜಾತಯುಂ’ ಸಿನೆಮಾ ಭಾರೀ ಜನಮನ್ನಣೆ ಗಳಿಸಿತ್ತು. ಆ ಮೂಲಕ ಅವರೂ ಚಿತ್ರರಂಗದಲ್ಲಿ ಶ್ರೇಷ್ಠ ನಿರ್ದೇಶಕರ ಸಾಲಿಗೆ ಸೇರಿಸಲ್ಪಟ್ಟಿದ್ದರು. ಶಾನವಾಸ್ ನಿಧನಕ್ಕೆ ಅನೇಕ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.