ಬಸವರಾಜ ಬೊಮ್ಮಾಯಿಯ ದೆಹಲಿ ಯಾತ್ರೆ ವಿಫಲ; ಸಂಪುಟ ವಿಸ್ತರಣೆಗೆ ಸಿಗದ ಅನುಮತಿ

Prasthutha|

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಮತ್ತು ಪಂಚಮಸಾಲಿಗಳ ಮೀಸಲಾತಿ ಬೇಡಿಕೆಯನ್ನು ಮುಂದಿಟ್ಟುಕೊಂಡು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಡೆಸಿದ ದಿಲ್ಲಿ ದಂಡಯಾತ್ರೆ ವಿಫಲವಾಗಿದೆ.

- Advertisement -

ಸೋಮವಾರ ದಿಲ್ಲಿಗೆ ದೌಡಾಯಿಸಿದ್ದ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಗೃಹ ಸಚಿವ  ಅಮಿತ್ ಷಾ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಜತೆ ಸುದೀರ್ಘ ಚರ್ಚೆ ನಡೆಸಿದರಾದರೂ ಯಾವ ಫಲವೂ ಸಿಗಲಿಲ್ಲ. ಬದಲಿಗೆ,ರಾಜ್ಯ ಸಚಿವ ಸಂಪುಟವನ್ನು ವಿಸ್ತರಿಸುವ ಕುರಿತು ಮತ್ತೊಮ್ಮೆ ಮಾತುಕತೆ ನಡೆಸೋಣ  ಎಂದ ಅಮಿತ್ ಷಾ ಮತ್ತು ನಡ್ಡಾ ಅವರು, ಪಂಚಮಸಾಲಿಗಳಿಗೆ ಮೀಸಲಾತಿ ಒದಗಿಸಿಕೊಡುವ ಪ್ರಸ್ತಾಪದ ಬಗ್ಗೆಯೂ ಒಲವು ವ್ಯಕ್ತಪಡಿಸಲಿಲ್ಲ.

ಪಂಚಮಸಾಲಿ ಲಿಂಗಾಯತರನ್ನು ಪ್ರವರ್ಗ 2 ಎ ಅಡಿಯಲ್ಲಿ ತರುವ ಕುರಿತು ಮುಖ್ಯಮಂತ್ರಿಗಳು ನೀಡಿದ ವಿವರಣೆ ಅಮಿತ್ ಷಾ ಅವರಿಗೆ ಸಮಾಧಾನ ತರಲಿಲ್ಲ ಎಂದು ಉನ್ನತ ಮೂಲಗಳು ವಿವರಿಸಿವೆ.

- Advertisement -

ಪಂಚಮಸಾಲಿ ಲಿಂಗಾಯತರನ್ನು ಪ್ರವರ್ಗ 2 ಎ ಅಡಿ ಸೇರಿಸಿದರೆ ಈಗಾಗಲೇ ಈ ಪಟ್ಟಿಯಲ್ಲಿರುವ ನೂರಕ್ಕೂ ಹೆಚ್ಚು ಜಾತಿಗಳು ದಂಗೆ ಏಳುತ್ತವೆ ಎಂಬ ಬಗ್ಗೆ ತಮಗಿರುವ ಮಾಹಿತಿಯ ಕುರಿತು ಅಮಿತ್ ಷಾ ಅವರು ವಿವರಿಸಿದಾಗ ಬೊಮ್ಮಾಯಿ ಅವರು ಹೆಚ್ಚು ಮಾತನಾಡಲು ಸಾಧ್ಯವಾಗಲಿಲ್ಲ.

ಪಂಚಮಸಾಲಿ ಲಿಂಗಾಯತರನ್ನು ಪ್ರವರ್ಗ 2 ಎ ಪಟ್ಟಿಗೆ ಸೇರಿಸಿದರೆ ಕುರುಬ,ಈಡಿಗ ಸೇರಿದಂತೆ ನೂರಕ್ಕೂ ಹೆಚ್ಚು ಜಾತಿಗಳಿಗೆ ಈಗಿರುವ ರಾಜಕೀಯ ಮೀಸಲಾತಿಯಲ್ಲಿ ಕೊರತೆಯಾಗುತ್ತದೆ ಮತ್ತು ಪಂಚಮಸಾಲಿ ಲಿಂಗಾಯತರು ತಮಗಿರುವ ಬಲದಿಂದ ಹೆಚ್ಚೆಚ್ಚು ಸ್ಥಾನಗಳನ್ನು ವಶಪಡಿಸಿಕೊಂಡರೆ ಉಳಿದ ಜಾತಿಗಳು ಅಸಮಾಧಾನಗೊಳ್ಳುತ್ತವೆ.

ಹೀಗಾಗಿ ಈ ವಿಷಯದ ಕುರಿತು ಮತ್ತಷ್ಟು ಚರ್ಚೆ ನಡೆಯಲಿ. ಯಾವ ಮಾದರಿಯಲ್ಲಿ ಪಂಚಮಸಾಲಿ ಲಿಂಗಾಯತರಿಗೆ ಮೀಸಲಾತಿಯ ಸೌಲಭ್ಯ ದೊರಕಿಸಿಕೊಡಬಹುದು? ಎಂಬ ಬಗ್ಗೆ ನಿಖರ ಧೋರಣೆ ತಳೆಯುವ ಅಗತ್ಯವಿದೆ ಎಂದು ಅಮಿತ್ ಷಾ ಅವರು ಹೇಳಿದಾಗ, ಆರ್ಥಿಕ ದುರ್ಬಲರಿಗೆ ಶೇಕಡಾ ಹತ್ತರಷ್ಟು ಮೀಸಲಾತಿ ನೀಡಿರುವ ಕೇಂದ್ರ ಸರ್ಕಾರದ ನಿಲುವಿನ  ವ್ಯಾಪ್ತಿಯಲ್ಲೇ ಪಂಚಮಸಾಲಿಗಳಿಗೆ ಅವಕಾಶ ಸೃಷ್ಟಿಸಬಹುದೇ? ಎಂಬ ಬಗ್ಗೆ ಬೊಮ್ಮಾಯಿ ಪ್ರಸ್ತಾಪಿಸಿದರಾದರೂ, ಸದ್ಯಕ್ಕೆ ಈ ಕುರಿತು ಯಾವ ತೀರ್ಮಾನವೂ ಬೇಡ ಎಂದು ಅಮಿತ್ ಷಾ ಹೇಳಿದರೆನ್ನಲಾಗಿದೆ.

ಕರ್ನಾಟಕದಲ್ಲಿ ಮೀಸಲಾತಿ ಕೋರಿ ಹಲವು ಜಾತಿಗಳು ಮೇಲೆದ್ದು ನಿಂತಿದ್ದು, ಈ ಹಿನ್ನೆಲೆಯಲ್ಲಿ ನಾವು ಕೈಗೊಳ್ಳುವ ತೀರ್ಮಾನ ದೂರಗಾಮಿ ನೆಲೆಯಲ್ಲಿ ನಮಗೆ ಸಂಕಷ್ಟ ತರಬಾರದು.ಹೀಗಾಗಿ ಮೀಸಲಾತಿ ವಿಷಯದಲ್ಲಿ ತರಾತುರಿ ಬೇಡ ಎಂದು ಅಮಿತ್ ಷಾ ವಿವರಿಸಿದರು.

ಪಂಚಮಸಾಲಿಗಳ ಮೀಸಲಾತಿ ವಿಷಯದಲ್ಲಿ ಈ ತಿಂಗಳ 29 ರ ವೇಳೆಗ ಒಂದು ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಲಾಗಿರುವ ಕುರಿತು ಬೊಮ್ಮಾಯಿ ವಿವರಿಸಿದಾಗ, ಈ ವಿಷಯದಲ್ಲಿ ಇನ್ನಷ್ಟು ಕಾಲ ಕಾಯ್ದರೆ ಒಳ್ಳೆಯದು ಎಂದು ಅಮಿತ್ ಷಾ ಸೂಚ್ಯವಾಗಿ ಹೇಳಿದರು ಎಂದು ಮೂಲಗಳು ಹೇಳಿವೆ.

ಈ ಮಧ್ಯೆ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ, ರಮೇಶ್ ಜಾರಕಿಹೊಳಿ ಸೇರಿದಂತೆ ನಾಲ್ಕು ಮಂದಿಯನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ಕುರಿತು ಮುಖ್ಯಮಂತ್ರಿಗಳು ಮುಂದಿಟ್ಟ ಪ್ರಸ್ತಾಪಕ್ಕೆ ಅಮಿತ್ ಷಾ ಸಹಮತ ವ್ಯಕ್ತಪಡಿಸಲಿಲ್ಲ.

ಈ ನಾಯಕರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳದಿದ್ದರೆ ಪಕ್ಷದಲ್ಲಿ ಅಸಮಾಧಾನ ಹೆಚ್ಚಾಗುತ್ತದೆ ಎಂದು ಮುಖ್ಯಮಂತ್ರಿಗಳು ಹೇಳಿದರೆ, ಅವರೆಲ್ಲ ಪಕ್ಷ ನಿಷ್ಠರು, ಯಾವ ಕಾರಣಕ್ಕೂ ಬಂಡಾಯದಂತಹ ಕೆಲಸಕ್ಕೆ ಕೈ ಹಾಕುವುದಿಲ್ಲ ಎಂದು ಅಮಿತ್ ಷಾ ಹೇಳಿದರೆನ್ನಲಾಗಿದೆ.

ಆದರೆ ಈ ಎರಡು ವಿಷಯಗಳನ್ನು ಹೊರತುಪಡಿಸಿದರೆ, ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ಮಾಡಿಕೊಂಡ ತಯಾರಿಯ ಬಗ್ಗೆ ಬೊಮ್ಮಾಯಿಯವರು ವಿವರಿಸಿದಾಗ,ಅಮಿತ್ ಷಾ ಅವರು ಇನ್ನಷ್ಟು ಅಂಶಗಳ ಕುರಿತು ಬೊಮ್ಮಾಯಿ ಅವರಿಗೆ ಸೂಚನೆ ನೀಡಿದರು.

ಪ್ರಮುಖ ಎದುರಾಳಿ ಕಾಂಗ್ರೆಸ್ ಪಕ್ಷವನ್ನು ಮಣಿಸಲು ರೂಪಿಸಲಾಗಿರುವ ಮತ್ತು ರೂಪಿಸಿರುವ ಕಾರ್ಯತಂತ್ರಗಳ ಬಗ್ಗೆಯೂ ಅಮಿತ್ ಷಾ ಅವರು ಮುಖ್ಯಮಂತ್ರಿಗಳ ಬಳಿ ಚರ್ಚೆ ನಡೆಸಿದ್ದಲ್ಲದೆ, ಈ ವಿಷಯದಲ್ಲಿ ಹೈಕಮಾಂಡ್ ಸೂಚನೆಯನ್ನು ಚಾಚೂ ತಪ್ಪದೆ ಪಾಲಿಸಿ ಎಂದರು.

ಅಮಿತ್ ಷಾ ಅವರ ಜತೆ ನಡೆಸಿದ ಚರ್ಚೆಯ ನಂತರ ಬೊಮ್ಮಾಯಿ ಅವರು ರಾಜ್ಯಕ್ಕೆ ಮರಳಿ ಬಂದಿದ್ದು, ಈಶ್ವರಪ್ಪ ಮತ್ತು ಜಾರಕಿಹೊಳಿ ಅವರಿಗೆ,ಕೆಲವೇ ದಿನಗಳಲ್ಲಿ ಸಂಪುಟ ವಿಸ್ತರಣೆಯಾಗುತ್ತದೆ ಎಂದು ಪುನ: ಭರವಸೆ ನೀಡಿದ್ದಾರೆನ್ನಲಾಗಿದೆ.

ಆದರೆ ಪಂಚಮಸಾಲಿ ಲಿಂಗಾಯತರನ್ನು ಪ್ರವರ್ಗ 2 ಎ ಪಟ್ಟಿಗೆ ಸೇರ್ಪಡೆ ಮಾಡುವ ಕುರಿತು ಹಿರಿಯ ನಾಯಕ ಬಸವನಗೌಡ ಪಾಟೀಲ್ ಯತ್ನಾಳ್ ಅವರ ಬಳಿ ಏನು ಹೇಳಿದ್ದಾರೆ ಎಂಬ ಮಾಹಿತಿ ಇದುವರೆಗೆ ಬಹಿರಂಗಗೊಂಡಿಲ್ಲ.



Join Whatsapp