ದ.ಕ.ಜಿಲ್ಲೆಯಲ್ಲಿ ಗೂಂಡಾಗಳ ಅಟ್ಟಹಾಸ ಮೇರೆಮೀರಿದೆ; ನೆಪ ಮಾತ್ರಕ್ಕೆ ಬಂಧನ: ಅಬ್ದುಲ್ ಹಮೀದ್ ಬಜ್ಪೆ ಕಿಡಿ

Prasthutha|

► ಕರ್ನಾಟಕ ಮುಸ್ಲಿಂ ಜಮಾಅತ್ ವತಿಯಿಂದ ಬೃಹತ್ ಹಕ್ಕೊತ್ತಾಯ ಪ್ರತಿಭಟನೆ

- Advertisement -

ಮಂಗಳೂರು: ಸುರತ್ಕಲ್ ಕೃಷ್ಣಾಪುರ ನಿವಾಸಿ ಅಬ್ದುಲ್ ಜಲೀಲ್ ಹತ್ಯೆಯನ್ನು ಖಂಡಿಸಿ ನಗರದ ಮಿನಿವಿಧಾನ ಸೌಧ ಮುಂಭಾಗದಲ್ಲಿ  ಕರ್ನಾಟಕ ಮುಸ್ಲಿಂ ಜಮಾಅತ್ ವತಿಯಿಂದ ಬೃಹತ್ ಹಕ್ಕೊತ್ತಾಯ ಪ್ರತಿಭಟನೆ ನಡೆದಿದ್ದು, ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಸಾರ್ವಜನಿಕರು ಸರಕಾರದ ತಾರತಮ್ಯ ನೀತಿಯ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯ ಸಭೆಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ಮುಸ್ಲಿಂ ಜಮಾಅತ್ ಕಾರ್ಯದರ್ಶಿ ಅಬ್ದುಲ್ ಹಮೀದ್ ಬಜ್ಪೆ, ಜಿಲ್ಲೆಯಲ್ಲಿ ಗೂಂಡಾಗಳ ಅಟ್ಟಹಾಸ ಮೇರೆ ಮೀರಿದೆ. ನೆಪ ಮಾತ್ರಕ್ಕೆ ಅವರ ಬಂಧನವಾಗುತ್ತಿದೆ, ಬಂಧನವಾದಷ್ಟೇ ವೇಗದಲ್ಲಿ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗುತ್ತಿದೆ. ಇದರಿಂದ ಪ್ರೇರಣೆಗೊಂಡ ಅದೇ ಆರೋಪಿಗಳು ಮತ್ತೊಂದು ಕೊಲೆಗೆ ಸಂಚುಹಾಕಲು ಪ್ರಾರಂಭಿಸುತ್ತಾರೆ. ಆದ್ದರಿಂದ ಪೊಲೀಸ್ ಇಲಾಖೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು ಜೀವಾವಧಿ ಶಿಕ್ಷೆ ವಿಧಿಸುವಂತಹ ಕಾಯ್ದೆಗಳನ್ನು ಹಾಕಬೇಕು ಎಂದು ಹೇಳಿದರು.

- Advertisement -

ವಿಧಾನಸಭೆಯ ಅಧಿವೇಶನದಲ್ಲಿ ಇತ್ತೀಚೆಗೆ ಕರಾವಳಿ ಜಿಲ್ಲೆಗಳಲ್ಲಿ ಕೊಲೆಯಾದವರನ್ನು ಕಾನೂನು ಸಚಿವ ಮಾಧುಸ್ವಾಮಿ ಕ್ರಿಮಿನಲ್’ಗಳು ಎಂದು ಹೇಳಿದ್ದಾರೆ. ಕೊಲೆಯಾದ ಮೂವರ ಮೇಲೆ ಯಾವ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ ಎಂದು ಕಾನೂನು ಸಚಿವರು ಬಹಿರಂಗಪಡಿಸಬೇಕು ಎಂದು ಸವಾಲು ಹಾಕಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ವಿದ್ವಾಂಸ ಹಾಗೂ ಸುನ್ನೀ ಮುಖಂಡ ಯಾಕೂಬ್ ಸಅದಿ ನಾವೂರು, ಸರ್ಕಾರ , ಪೊಲೀಸ್ ಇಲಾಖೆ ಮಾತ್ರವಲ್ಲ ಇಲ್ಲಿನ ಕೆಲವು ಮಾಧ್ಯಮಗಳು ಕೂಡಾ ಮತಾಂಧರಂತೆ ವರ್ತಿಸುತ್ತಿವೆ. ನಿರಂತರವಾಗಿ ನೈತಿಕ ಪೊಲೀಸ್ ಗಿರಿ, ಗಲಭೆ, ಕೊಲೆಗಳು ನಡೆಯುತ್ತಿದ್ದರೂ ಒಂದು ಸಮುದಾಯವನ್ನು ಮಾತ್ರ ಗುರಿಯಾಗಿಸಿ ಕ್ರಮ ಕೈಗೊಳ್ಳಲಾಗುತ್ತಿದೆ. ರಾಜ್ಯದ ಮುಖ್ಯಮಂತ್ರಿ ಕ್ರಿಯೆಗೆ ಪ್ರತಿಕ್ರಿಯೆ ಎನ್ನುತ್ತಾರೆ. ನಿಮ್ಮ ಈ ತಾರತಮ್ಯದ ಕ್ರಿಯೆಗೆ ನಾವು ಚುನಾವಣೆಯಲ್ಲಿ ಪ್ರತಿಕ್ರಿಯೆ ನೀಡುತ್ತೇವೆ. ನಿಮ್ಮನ್ನು ಅಧಿಕಾರದಿಂದ ಕೆಳಗಿಳಿಸುತ್ತೇವೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಎಸ್ ವೈಸ್ ಎಸ್ ಅಧ್ಯಕ್ಷ ಅಶ್ರಫ್ ಸಖಾಫಿ, ದ.ಕ ಜಿಲ್ಲೆ ವೆಸ್ಟ್ ಎಸ್ ಎಸ್ ಎಫ್ ಅಧ್ಯಕ್ಷ ನವಾಝ್ ಸಖಾಫಿ, ಸುನ್ನೀ ಮುಖಂಡರಾದ ಸುಫ್ಯಾನ್ ಸಖಾಫಿ, ಕೆ.ಎಂ. ಸಿದ್ದೀಖ್ ಮೋಂಟುಗೋಳಿ, ಅಲಿ ತುರ್ಕಳಿಕೆ ಮುಂತಾದವರು ಮಾತನಾಡಿದರು.

ಕೆಪಿಸಿಸಿ ಕಾರ್ಯದರ್ಶಿ ಇನಾಯತ್ ಅಲಿ, ಮಾಜಿ ಶಾಸಕ ಮೊಯ್ದಿನ್ ಬಾವಾ, ಎಸ್’ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ, ಸುಹೈಲ್ ಖಂದಕ್, ಮಮ್ತಾಝ್ ಅಲಿ ಮುಂತಾದವರು ಪಾಲ್ಗೊಂಡಿದ್ದರು.

ಪ್ರತಿಭಟನೆಯ ಕೊನೆಯಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ ವೈ ಎಸ್, ಎಸ್ ಎಸ್ ಎಫ್ ಮುಖಂಡರು ಸೇರಿ ಮಂಗಳೂರು ಪೊಲೀಸ್ ಆಯುಕ್ತರ ಮೂಲಕ ಮುಖ್ಯಮಂತ್ರಿ, ರಾಜ್ಯಪಾಲ ಮತ್ತು ಕರ್ನಾಟಕ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದರು.

 ಈ ಸಂಧರ್ಭದಲ್ಲಿ ಮಾತನಾಡಿದ ಮಂಗಳೂರು ಕಮಿಷನರ್ ಶಶಿಕುಮಾರ್, ನಾವು ಈ ಹಿಂದೆ ನಡೆದ ಎಲ್ಲಾ ಪ್ರಕರಣಗಳಲ್ಲಿ ಪ್ರಾಮಾಣಿಕ ತನಿಖೆ ನಡೆಸಿದ್ದೇವೆ. ಈ ಪ್ರಕರಣವನ್ನೂ ಯಾವುದೇ ಒತ್ತಡಕ್ಕೆ ಮಣಿಯದೆ ಮುಗಿಸುತ್ತೇವೆ. ಇವತ್ತು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದೇವೆ ಎಂದು ಹೇಳಿದರು. ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೆಕ್ಷನ್ 144 ಹಾಕಲಾಗಿದೆ, ಸಾರ್ವಜನಿಕರು ಶಾಂತಿ ಕಾಪಾಡಲು ನಮ್ಮೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.



Join Whatsapp