ಮುಂಬೈ: ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು ಬರುವವರೆಗೂ ಎರಡು ರಾಜ್ಯಗಳ ನಡುವಿನ ವಿವಾದಿತ ಪ್ರದೇಶಗಳನ್ನು “ಕೇಂದ್ರಾಡಳಿತ ಪ್ರದೇಶ” ಎಂದು ಘೋಷಿಸುವಂತೆ ಶಿವಸೇನ ನಾಯಕ ಉದ್ಧವ್ ಠಾಕ್ರೆ ಆಗ್ರಹಿಸಿದ್ದಾರೆ.
ಸೋಮವಾರ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮಾತನಾಡಿದ ಅವರು, ನಮಗೆ ಕರ್ನಾಟಕದ ಒಂದೇ ಒಂದು ಇಂಚು ಭೂಮಿ ಬೇಕಾಗಿಲ್ಲ. ಆದರೆ ನಮ್ಮ ಭೂಮಿಯನ್ನು ಹಿಂಪಡೆಯಲು ನಾವು ಬಯಸುತ್ತೇವೆ. ಕರ್ನಾಟಕದ ಮುಖ್ಯಮಂತ್ರಿ ಆಕ್ರಮಣಕಾರಿಯಾಗಿದ್ದು, ಮಹಾರಾಷ್ಟ್ರ ಸಿಎಂ ಶಿಂಧೆ ಮೌನವಾಗಿದ್ದಾರೆ. ಸರ್ವೋಚ್ಚ ನ್ಯಾಯಾಲಯವು ಈ ವಿಷಯವನ್ನು ನಿರ್ಧರಿಸುವವರೆಗೆ, ಬೆಳಗಾವಿ, ಕಾರವಾರ ಮತ್ತು ನಿಪ್ಪಾಣಿಯನ್ನು ಕೇಂದ್ರಾಡಳಿತ ಪ್ರದೇಶಗಳೆಂದು ಘೋಷಿಸಬೇಕು. ಪ್ರಸ್ತಾವನೆಯಲ್ಲಿ ಇದನ್ನು ಸೇರಿಸಿ ಸದನ ಅಂಗೀಕರಿಸಬೇಕು ಎಂದು ಹೇಳಿದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಏಕನಾಥ್ ಶಿಂಧೆ, ಸುಪ್ರೀಂ ಕೋರ್ಟ್ ನಲ್ಲಾಗಲೀ ಅಥವಾ ಕೇಂದ್ರದ ಬಳಿಯಾಗಲೀ, ಪ್ರತಿ ಇಂಚು ಭೂಮಿಗಾಗಿ ಹೋರಾಡುತ್ತೇವೆ. ಗಡಿಯಲ್ಲಿ ವಾಸಿಸುವವರ ಮೇಲಿನ ಅನ್ಯಾಯದ ವಿರುದ್ಧ ಹೋರಾಡುತ್ತೇವೆ ಎಂದು ಹೇಳಿದ್ದಾರೆ.