►1 ಕೋಟಿ ಪರಿಹಾರಕ್ಕೆ ಮನವಿ; ನಾಳೆ ನಗರದಲ್ಲಿ ಬೃಹತ್ ಹಕ್ಕೊತ್ತಾಯ ಸಭೆ
ಮಂಗಳೂರು: ಕಾಟಿಪಳ್ಳ 4 ನೇ ಬ್ಲಾಕಿನಲ್ಲಿ ನಡೆದ ಜಲೀಲ್ ಹತ್ಯೆ ಒಳಗೊಂಡಂತೆ ನಗರದಲ್ಲಿ ನಡೆಯುತ್ತಿರುವ ಕೊಲೆಸರಣಿಯನ್ನು ಮಟ್ಟ ಹಾಕುವಂತೆ ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಘಟಕದ ಪದಾಧಿಕಾರಿಗಳು ದ.ಕ. ಜಿಲ್ಲಾಧಿಕಾರಿ ರವಿಕುಮಾರ್ ಅವರ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಮನವಿ ಸಲ್ಲಿಸಿದ್ದಾರೆ.
ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ ಕರ್ನಾಟಕ ಮುಸ್ಲಿಂ ಜಮಾಅತ್ ನಿಯೋಗವು, ಕೊಲೆಗಡುಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದರ ಜೊತೆಗೆ ಮೃತರ ಕುಟುಂಬಕ್ಕೆ ಮುಖ್ಯಮಂತ್ರಿ ಒಂದು ಕೋಟಿ ಪರಿಹಾರ ನೀಡಬೇಕೆಂದು ಆಗ್ರಹಿಸಿದೆ.
ಜಿಲ್ಲಾಧಿಕಾರಿ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕರ್ನಾಟಕ ಮುಸ್ಲಿಂ ಜಮಾಅತ್ ಪ್ರ. ಕಾರ್ಯದರ್ಶಿ ಮೌಲಾನಾ ಅಬೂಸುಫ್ಯಾನ್ ಮದನಿ, ಈ ಹಿಂದೆ ದ. ಕ ಜಿಲ್ಲೆಯಲ್ಲಿ ಕೊಲೆ ನಡೆದಾಗ ಮುಖ್ಯಮಂತ್ರಿಯವರು ತಾರತಮ್ಯ ನೀತಿ ತೋರಿದ್ದು ಸಹಜವಾಗಿ ಸಾರ್ವಜನಿಕರಲ್ಲಿ ಅಸಮಾಧಾನ ಉಂಟುಮಾಡಿದೆ. ಚುನಾವಣೆ ಹತ್ತಿರ ಬಂದಾಗ ಕರಾವಳಿಯಲ್ಲಿ ಕೊಲೆಯಾಗುವುದು ಸಹಜವಾಗಿಬಿಟ್ಟಿದೆ. ಕೊಲೆಗೆ ಧರ್ಮದ ಬಣ್ಣ ಬಳಿಯದೆ ಫಾಝಿಲ್, ಮಸೂದ್, ಜಲೀಲ್ ಮೂವರ ಮನೆಗೂ ಮುಖ್ಯಮಂತ್ರಿಯವರು ಭೇಟಿ ನೀಡಿ ತಕ್ಷಣ ಪರಿಹಾರ ಘೋಷಣೆ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಮುಸ್ಲಿಂ ಜಮಾಅತ್ ಕಾರ್ಯದರ್ಶಿ ಅಬ್ದುಲ್ ಹಮೀದ್ ಬಜ್ಪೆ, ಕೊಲೆ ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಅಪರಾಧಿಗಳು ಬಂಧನವಾದ ಕೆಲವೇ ದಿನಗಳಲ್ಲಿ ಜಾಮೀನು ಪಡೆದು ರಾಜಾರೋಷವಾಗಿ ಸುತ್ತಾಡುವುದು ಕಂಡುಬರುತ್ತಿದೆ. ಈ ವಿಷಯದಲ್ಲಿ ಹಾಗಾಗದೆ ಅರೋಪಿಗಳಿಗೆ ಕಠಿಣ ಕಲಂನಡಿಯಲ್ಲಿ ಕೇಸು ದಾಖಲಿಸಬೇಕು. ಪೊಲೀಸ್ ಇಲಾಖೆ, ಕಾನೂನು ಸುವ್ಯವಸ್ಥೆಯ ಮೇಲೆ ಜನರು ಇಟ್ಟಿರುವ ನಂಬಿಕೆಯನ್ನು ಕುಸಿಯುವಂತೆ ಮಾಡುವ ಹತ್ಯಾ ಸರಣಿಗಳಿಗೆ ಕೊನೆ ಹಾಡಬೇಕು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ಉಪಾಧ್ಯಕ್ಷ ಪಿಪಿ ಅಹ್ಮದ್ ಸಖಾಫಿ ಕಾಶಿಪಟ್ನ, ರಾಜ್ಯ ಸಮಿತಿ ಸದಸ್ಯ ಅಶ್ರಫ್ ಕಿನಾರ, ದ.ಕ ಜಿಲ್ಲಾ ಸಮಿತಿ ಸದಸ್ಯ ಮುಹಮ್ಮದ್ ಹನೀಫ್ ಬಜ್ಪೆ, ಮಂಗಳೂರು ತಾಲೂಕು ಸದಸ್ಯ ಇಕ್ಬಾಲ್ ಕೃಷ್ಣಾಪುರ ಮುಂತಾದವರು ಉಪಸ್ಥಿತರಿದ್ದರು.