ಮಂಗಳೂರು: ದುಷ್ಕರ್ಮಿಗಳ ಚಾಕು ಇರಿತದಿಂದ ಹತ್ಯೆಗೀಡಾದ ಸುರತ್ಕಲ್ ಕೃಷ್ಣಾಪುರದ ನಿವಾಸಿ ಜಲೀಲ್ ಅವರ ಹತ್ಯೆ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿ ಸಾವಿರಾರು ಸಾರ್ವಜನಿಕರು ಭಾನುವಾರ ಜಲೀಲ್ ಅವರ ಮೃತದೇಹ ಕೊಂಡೊಯ್ಯುತ್ತಿದ್ದ ಆಂಬುಲೆನ್ಸ್ ಅನ್ನು ರಸ್ತೆಯಲ್ಲೇ ನಿಲ್ಲಿಸಿ ಪ್ರತಿಭಟನೆ ನಡೆಸಿದರು.
ಜಲೀಲ್ ಅವರ ಪಾರ್ಥೀವ ಶರೀರದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕೃಷ್ಣಾಪುರ 9ನೇ ಬ್ಲಾಕ್’ನ ಅವರ ಮನೆಗೆ ತಂದು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಬಳಿಕ ಮೃತದೇಹವನ್ನು ಕೃಷ್ಣಾಪುರ ಮಸೀದಿಗೆ ಆಂಬುಲೆನ್ಸ್ ಮೂಲಕ ತರಲಾಯಿತು. ಈ ವೇಳೆ ಆಕ್ರೋಶಿತ ಸಾರ್ವಜನಿಕರು ಆಂಬುಲೆನ್ಸ್ ಅನ್ನು ರಸ್ತೆಯಲ್ಲೇ ನಿಲ್ಲಿಸಿ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.
ಜಿಲ್ಲೆಯಲ್ಲಿ ಮುಸ್ಲಿಮ್ ಯುವಕರ ಹತ್ಯೆ ನಿರಂತರವಾಗಿ ನಡೆಯುತ್ತಿದ್ದರೂ ಸರ್ಕಾರ ಮತ್ತು ಜನಪ್ರತಿನಿಧಿಗಳು ಮೌನವಾಗಿದ್ದಾರೆ. ಮುಸ್ಲಿಮ್ ಯುವಕರ ಜೀವಕ್ಕೆ ಯಾವುದೇ ಬೆಲೆ ಇಲ್ಲದಾಗಿದೆ. ಪ್ರತಿ ಬಾರಿ ಹತ್ಯೆ ನಡೆದಾಗಲೂ ಶಾಂತಿ ಕಾಪಾಡಿ, ಆರೋಪಿಗಳನ್ನು ಬಂಧಿಸುತ್ತೇವೆ ಎಂಬ ಭರವಸೆ ನೀಡಲಾಗುತ್ತದೆ. ಆದರೆ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಬದಲು ಸಣ್ಣ ಪುಟ್ಟ ಕೇಸುಗಳನ್ನು ದಾಖಲಿಸಿ ಜೈಲಿನಿಂದ ಬಿಡುಗಡೆ ಮಾಡಲಾಗುತ್ತಿದೆ. ಆದ್ದರಿಂದ ಆರೋಪಿಗಳ ವಿರುದ್ಧ ಯುಎಪಿಎಯಂತಹ ಕಾಯ್ದೆಯನ್ನು ಹಾಕಿ ಜೈಲಿಗಟ್ಟಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.
ಮುಖಂಡರಾದ ಮಾಜಿ ಮೇಯರ್ ಕೆ.ಅಶ್ರಫ್, ಸುಹೈಲ್ ಕಂದಕ್, ಮೊಯ್ದೀನ್ ಬಾವ ಮುಂತಾದವರು ಪ್ರತಿಭಟನಕಾರರನ್ನು ಸಮಾಧಾನ ಪಡಿಸಲು ಯತ್ನಿಸಿದರು.