ಮಂಗಳೂರು: ದುಷ್ಕರ್ಮಿಗಳ ಚೂರಿ ಇರಿತಕ್ಕೆ ಬಲಿಯಾದ ಮಂಗಳೂರು ನಗರದ ಹೊರವಲಯದ ಕಾಟಿಪಳ್ಳ ನಾಲ್ಕನೇ ಬ್ಲಾಕಿನ ಲತೀಫಾ ಸ್ಟೋರ್ ಮಾಲಕ ಅಬ್ದುಲ್ ಜಲೀಲ್ ಅವರ ಮೃತದೇಹ ಕಾಟಿಪಳ್ಳದ ಸ್ವಗೃಹಕ್ಕೆ ತಲುಪಿದೆ.
ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ನಡೆದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಮೃತದೇಹ ನೋಡಲು ಜನಸಾಗರವೇ ಹರಿದು ಬಂದಿದೆ.
ಹತ್ಯೆ ಹಿನ್ನೆಲೆಯಲ್ಲಿ ಸುರತ್ಕಲ್, ಕಾಟಿಪಳ್ಳ ಪ್ರದೇಶದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಮುಂಜಾಗ್ರತಾ ಕ್ರಮವಾಗಿ ಇಂದು ಬೆಳಗ್ಗೆ 6 ರಿಂದ ಡಿ.27ರ ಬೆಳಗ್ಗೆ 6 ರವರೆಗೆ ಸುರತ್ಕಲ್, ಪಣಂಬೂರು, ಬಜಪೆ, ಕಾವೂರು ಠಾಣಾ ವ್ಯಾಪ್ತಿಗಳಲ್ಲಿ ಸೆಕ್ಷನ್ 144 ನಂತೆ ನಿಷೇಧಾಜ್ಞೆ ಜಾರಿ ಮಾಡಿ ಆದೇಶಿಸಲಾಗಿದೆ.
ಅಲ್ಲದೇ ನಗರದ ಸೂಕ್ಷ್ಮ ಅತಿಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಿ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು ಪೊಲೀಸ್ ಹಿರಿಯ ಪೊಲೀಸ್ ಅಧಿಕಾರಿಗಳು ಗಸ್ತು ತಿರುಗುತ್ತಾ ಪರಿಸ್ಥಿತಿಯ ಹದ್ದಿನ ಕಣ್ಣಿಟ್ಟಿದ್ದಾರೆ.
ಅಲ್ಲದೇ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಅವರು ಸುರತ್ಕಲ್’ನಲ್ಲೇ ಬೀಡು ಬಿಟ್ಟಿದ್ದು, ಪೊಲೀಸ್ ಭದ್ರತೆಯ ಮೇಲ್ವಿಚಾರಣೆ ನಡೆಸಿದ್ದಾರೆ.
ನಿಷೇಧಾಜ್ಞೆ ಸಮಯದಲ್ಲಿ ನಗರ ಕಮಿಷನರೇಟ್ ವ್ಯಾಪ್ತಿಯ ಸುರತ್ಕಲ್, ಬಜಪೆ, ಕಾವೂರು ಮತ್ತು ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ.
ಐದಾರು ಮಂದಿ ಒಂದೆಡೆ ಗುಂಪು ಸೇರದಂತೆ ಪೊಲೀಸರು ನಿಗಾ ವಹಿಸಿದ್ದು ದೇವಾಲಯ ಚರ್ಚ್ ಪ್ರಾರ್ಥನಾ ಮಂದಿರಗಳ ಬಳಿ ಕಟ್ಟೆಚ್ಚರ ವಹಿಸಲಾಗಿದೆ.
ರಾತ್ರಿ ಸಂಚಾರ ನಿಷೇಧ: ಮುಂಜಾಗೃತಾ ಕ್ರಮವಾಗಿ ಇಂದಿನಿಂದ ಎರಡು ದಿನಗಳ ಕಾಲ ಸುರತ್ಕಲ್, ಬಜಪೆ, ಕಾವೂರು ಮತ್ತು ಪಣಂಬೂರು ಠಾಣಾ ವ್ಯಾಪ್ತಿಯ ಎಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಸಂಕೀರ್ಣಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗಳ ಕರ್ತವ್ಯದ ಪಾಳಿಯನ್ನು ಸಂಜೆ 6 ಗಂಟೆಯ ಒಳಗಾಗಿ ಬದಲಾಯಿಸುವಂತೆ ಮತ್ತು ಸಂಜೆ 6ರಿಂದ ಬೆಳಗ್ಗೆ 6ರವರೆಗೆ ಸಿಬ್ಬಂದಿಯವರು ರಸ್ತೆಯಲ್ಲಿ ಸಂಚರಿಸಬಾರದು ಎಂದು ಪೊಲೀಸ್ ಆಯುಕ್ತರು ಸೂಚಿಸಿದ್ದಾರೆ.