81 ಕೋಟಿ ಫಲಾನುಭವಿಗಳಿಗೆ ಒಂದು ವರ್ಷದವರೆಗೆ ಉಚಿತ ಆಹಾರ ಧಾನ್ಯ ವಿತರಣೆಗೆ ನಿರ್ಧಾರ

Prasthutha|

ನವದೆಹಲಿ: ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್’ಎಫ್’ಎಸ್’ಎ) ಅಡಿಯಲ್ಲಿ ಬರುವ ಎಲ್ಲಾ 81 ಕೋಟಿ ಫಲಾನುಭವಿಗಳಿಗೆ ಒಂದು ವರ್ಷದವರೆಗೆ ಉಚಿತ ಆಹಾರ ಧಾನ್ಯಗಳನ್ನು ಒದಗಿಸಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ.

- Advertisement -

ಈ ನಿರ್ಧಾರದ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಕೇಂದ್ರ ಆಹಾರ ಸಚಿವ ಪಿಯೂಷ್ ಗೋಯಲ್ , ಎನ್’ಎಫ್’ಎಸ್’ಎ ಅಡಿಯಲ್ಲಿ ಉಚಿತ ಆಹಾರ ಧಾನ್ಯಗಳನ್ನು ಒದಗಿಸುವ ಸಂಪೂರ್ಣ ಹೊರೆಯನ್ನು ಕೇಂದ್ರವು ಭರಿಸಲಿದೆ. ಇದರಿಂದ ಬೊಕ್ಕಸಕ್ಕೆ ವಾರ್ಷಿಕವಾಗಿ 2 ಲಕ್ಷ ಕೋಟಿ ವೆಚ್ಚವಾಗಲಿದೆ ಎಂದು ಹೇಳಿದ್ದಾರೆ.

ಎನ್ಎಫ್ಎಸ್ಎ ಅಡಿಯಲ್ಲಿ ಸರ್ಕಾರವು ಪ್ರಸ್ತುತ ಪ್ರತಿ ವ್ಯಕ್ತಿಗೆ ಕೆ.ಜಿ.ಗೆ  2ರಿಂದ 3ರಂತೆ 5 ಕೆ.ಜಿ.ಯಷ್ಟು ಆಹಾರ ಧಾನ್ಯವನ್ನು ಒದಗಿಸುತ್ತಿದೆ. ಅಂತ್ಯೋದಯ ಅನ್ನ ಯೋಜನೆ (ಎಎವೈ) ಅಡಿಯಲ್ಲಿ ಬರುವ ಕುಟುಂಬಗಳು ತಿಂಗಳಿಗೆ 35 ಕೆ.ಜಿ. ಆಹಾರ ಧಾನ್ಯಗಳನ್ನು ಪಡೆಯುತ್ತಿವೆ. ಅಂತೆಯೇ ಬಡವರಿಗೆ ಪ್ರತಿ ಕೆ.ಜಿಗೆ 3ರಂತೆ ಅಕ್ಕಿಯನ್ನು ಹಾಗೂ ಪ್ರತಿ ಕೆ.ಜಿ.ಗೆ 2ರಂತೆ ಗೋಧಿಯನ್ನು ನೀಡಲಾಗುತ್ತಿದೆ.

- Advertisement -

ಈ ಮಧ್ಯೆ, ಇದೇ ಡಿ. 31ಕ್ಕೆ ಮುಕ್ತಾಯವಾಗಲಿರುವ ಉಚಿತ ಪಡಿತರವನ್ನೊದಗಿಸುವ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು (ಪಿಎಂಜಿಕೆಎವೈ) ವಿಸ್ತರಿಸದಿರಲು ಕೇಂದ್ರ ಸರ್ಕಾರವು ನಿರ್ಧರಿಸಿದೆ ಎಂದು  ಪಿಯೂಷ್ ಗೋಯಲ್ ತಿಳಿಸಿದರು.



Join Whatsapp