ನವದೆಹಲಿ: ಈ ಬಾರಿಯ ಸಂಸತ್ತಿನ ಚಳಿಗಾಲದ ಅಧಿವೇಶನ ಆರು ದಿನ ಮುಂಚಿತವಾಗಿ ಮುಕ್ತಾಯವಾಗಿದೆ.
ಡಿಸೆಂಬರ್ 7 ರಂದು ಆರಂಭವಾಗಿದ್ದ ಅಧಿವೇಶನ ಡಿಸೆಂಬರ್ 29 ರಂದು ಕೊನೆಗೊಳ್ಳಬೇಕಾಗಿತ್ತು. ಆದರೆ, ಆರು ದಿನ ಮುಂಚಿತವಾಗಿ ಮುಕ್ತಾಯವಾಗಿದ್ದು, ಲೋಕಸಭೆ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.
ಸ್ಪೀಕರ್ ಓಂ ಬಿರ್ಲಾ ಹಾಗೂ ಸರ್ಕಾರದ ಪ್ರತಿನಿಧಿಗಳು, ವಿವಿಧ ಪಕ್ಷಗಳ ಪ್ರತಿನಿಧಿಗಳನ್ನೊಳಗೊಂಡ ಲೋಕಸಭೆಯ ಕಲಾಪ ಸಲಹಾ ಮಂಡಳಿ (ಬಿಎಸಿ) ಸಭೆಯಲ್ಲಿ, ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲು ಸರ್ವಾನುಮತದಿಂದ ನಿರ್ಧರಿಸಲಾಯಿತು ಮೂಲಗಳು ತಿಳಿಸಿವೆ.
ಸದನ ಅನಿರ್ದಿಷ್ಟಾವಧಿಗೆ ಮುಂದೂಡುವ ಮುನ್ನಾ ಮಾತನಾಡಿದ ಸ್ಪೀಕರ್ ಓಂ ಬಿರ್ಲಾ ಚಳಿಗಾಲದ ಅಧಿವೇಶನ ಶೇ. 97 ರಷ್ಟು ಫಲಪ್ರಧವಾಗಿದೆ ಎಂದು ತಿಳಿಸಿದ್ದಾರೆ.
ಸದನವು ಒಟ್ಟು 62 ಗಂಟೆ 42 ನಿಮಿಷಗಳ ಕಾಲ 13 ಸಭೆಗಳನ್ನು ನಡೆಸಿತು.
ಅರುಣಾಚಲ ಪ್ರದೇಶದ ವಾಸ್ತವಿಕ ನಿಯಂತ್ರಣ ರೇಖೆಯ ಉದ್ದಕ್ಕೂ ಭಾರತ ಮತ್ತು ಚೀನಾ ಪಡೆಗಳ ನಡುವಿನ ಗಡಿ ಸಂಘರ್ಷದ ಬಗ್ಗೆ ಚರ್ಚಿಸುವಂತೆ ಒತ್ತಾಯಿಸಿ ವಿರೋಧ ಪಕ್ಷಗಳು ಪದೇ ಪದೇ ಸದನದ ಕಲಾಪಗಳಿಗೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗಿದೆ.