ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ ವಿಧಾನಸಭೆಯಲ್ಲಿ ಪ್ರಸ್ತಾಪ: ಆಡಳಿತ-ಪ್ರತಿಪಕ್ಷ ಸದಸ್ಯರಿಂದ ಮಾತಿನ ಚಕಮಕಿ

Prasthutha|

ಬೆಳಗಾವಿ: ಕಳೆದ ತಿಂಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ ಕುರಿತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ ಹೇಳಿಕೆಗೆ ಕುರಿತಂತೆ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಆರೋಪ-ಪ್ರತ್ಯಾರೋಪ ಮಾತಿನ ಚಕಮಕಿ ನಡೆಯಿತು.

- Advertisement -


ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕ ಸಿ.ಟಿ.ರವಿ ಅವರು ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಬಗ್ಗೆ ಈ ಸದನದ ಹಿರಿಯ ಸದಸ್ಯರೊಬ್ಬರು ಹಾಗೂ ರಾಷ್ಟ್ರೀಯ ಪಕ್ಷದ ಅಧ್ಯಕ್ಷರೊಬ್ಬರು ಲಘುವಾಗಿ ಮಾತನಾಡಿ ಭಯೋತ್ಪಾದಕರಿಗೆ ಕುಮ್ಮಕ್ಕು ನೀಡುವಂತಹ ಹೇಳಿಕೆಗಳನ್ನು ಕೊಟ್ಟಿದ್ದಾರೆ. ಇದು ಭಯೋತ್ಪಾದನೆ ಮತ್ತು ಭಯೋತ್ಪಾದಕರಿಗೆ ಬೆಂಬಲ ಕೊಡುವ ಕೃತ್ಯವಾಗಿದೆ ಎಂದು ಆರೋಪಿಸಿದರು.


ರವಿ ಅವರ ಈ ಆರೋಪಕ್ಕೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಉಪನಾಯಕ ಯು.ಟಿ.ಖಾದರ್, ಶಾಸಕರಾದ ಪ್ರಿಯಾಂಕ ಖರ್ಗೆ ಮತ್ತಿತರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಅವರು ಮಾತನಾಡುವಾಗ ಈ ಸದನದ ಸದಸ್ಯರು ಅಥವಾ ಪಕ್ಷದ ಅಧ್ಯಕ್ಷರು ಎಂದು ಹೇಳುವುದು ಸರಿಯಲ್ಲ. ಸದನದ ಹೊರಗಡೆ ಮಾತನಾಡುವುದಕ್ಕೂ, ಸದನದ ಒಳಗೆ ಮಾತನಾಡುವುದಕ್ಕೂ ವ್ಯತ್ಯಾಸವಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಈ ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಗದ್ದಲ ಉಂಟಾಯಿತು. ರವಿ ಅವರ ಬೆಂಬಲಕ್ಕೆ ಸಚಿವರಾದ ಆರಗ ಜ್ಞಾನೇಂದ್ರ, ಶಾಸಕರಾದ ಈಶ್ವರಪ್ಪ, ಅರವಿಂದ ಲಿಂಬಾವಳಿ ಮತ್ತಿತರರು ನಿಂತರು.

- Advertisement -


ಯಾರು ಏನು ಹೇಳಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಮತಗಳ ಓಲೈಕೆಗೆ ಈ ರೀತಿ ತುಷ್ಟೀಕರಣ ಮಾಡುವುದು ಸರಿಯಲ್ಲ. ಒಂದು ಧರ್ಮವನ್ನು ಓಲೈಕೆ ಮಾಡಿಕೊಂಡರೆ ನಮಗೆ ನಾಲ್ಕು ಮತಗಳು ಬರಬಹುದೆಂದು ಭಾವಿಸಿದ್ದಾರೆ. ಭಯೋತ್ಪಾದನೆ ಚಟುವಟಿಕೆ ನಡೆಸಿದವನಿಗೆ ಇವರು ಕ್ಲೀನ್ ಚಿಟ್ ಕೊಟ್ಟರೆ ಹೇಗೆ ಎಂದು ಈಶ್ವರಪ್ಪ ಪ್ರಶ್ನೆ ಮಾಡಿದರು.
ಇವರ ಪ್ರಕಾರ ಡಿಜಿ ಕೂಡ ಹೇಳಿಕೆ ಕೊಡಬಾರದು. ಇವರು ಹೇಳಿದಂತೆ ಅವರು ಕೇಳಬೇಕೇ? ಹೀಗೆ ಹೇಳಲು ಇವರಿಗೇನು ಅಧಿಕಾರ ಇದೆ ಎಂದು ಪರೋಕ್ಷವಾಗಿ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.


ಈ ಹಂತದಲ್ಲೂ ಮತ್ತೆ ಜಟಾಪಟಿ ನಡೆಯಿತು. ಆಗ ಮಧ್ಯಪ್ರವೇಶಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಯೊಂದನ್ನು ರಾಜಕೀಯ ಮಾಡಬೇಕಾದ ಅಗತ್ಯವಿಲ್ಲ. ಭಯೋತ್ಪಾದಕ ದುಷ್ಕೃತ್ಯವನ್ನು ಯಾರೇ ನಡೆಸಿದರೂ ಅದನ್ನು ಉಗ್ರವಾಗಿ ಖಂಡಿಸಬೇಕು. ಪ್ರತಿಯೊಂದರಲ್ಲೂ ರಾಜಕೀಯ ಮಾಡುವುದನ್ನು ಬಿಡಬೇಕು. ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಮಾಹಿತಿ ಇಲ್ಲದೆ ಸುಖಾಸುಮ್ಮನೆ ಹೇಳುವುದಿಲ್ಲ. ಅವರು ಸಂಪೂರ್ಣ ಮಾಹಿತಿ ಇಟ್ಟುಕೊಂಡೇ ಟ್ವೀಟ್ ಮಾಡಿದ್ದರು. ಅವರಿಗೆ ಮಾಹಿತಿ ಇಲ್ಲದೆ ಯಾವುದನ್ನು ಹೇಳುವುದಿಲ್ಲ ಎಂದು ಸಮರ್ಥಿಸಿಕೊಂಡರು.


ನಮಗೆ ಇತ್ತೀಚೆಗೆ ಎಲ್ಲದರಲ್ಲೂ ರಾಜಕಾರಣ ಮಾಡುವುದು ಅಭ್ಯಾಸವಾಗಿಬಿಟ್ಟಿದೆ. ಈಗ ಸಿಕ್ಕಿಬಿದ್ದಿರುವ ಶಂಕಿತ ಉಗ್ರ ಎಂಥ ಅನಾಹುತ ಮಾಡಲು ಹೊರಟಿದ್ದ ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಚುನಾವಣೆಯಲ್ಲಿ ಮತ ಗಳಿಕೆಗಾಗಿ ಹೇಳಿಕೆಗಳನ್ನು ಕೊಡಬಾರದು. ಭಯೋತ್ಪಾದನೆ ಮಾಡುವವರು ಯಾರೇ ಇರಲಿ ಅದನ್ನು ಉಗ್ರವಾಗಿ ಖಂಡಿಸಬೇಕು ಎಂದು ಹೇಳಿದರು.
ಆಗ ಸಿದ್ದರಾಮಯ್ಯ ಅವರು ಭಯೋತ್ಪಾದಕರು ಯಾರೇ ಇರಲಿ, ಯಾವ ಜಾತಿ, ಧರ್ಮ ಇರಲಿ ಇದು ಸಂಪೂರ್ಣವಾಗಿ ನಿರ್ಮೂಲನೆಯಾಗಬೇಕು. ಇದರಲ್ಲಿ ರಾಜೀಯಾಗುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.



Join Whatsapp