ಬೆಂಗಳೂರು: ಮುಸ್ಲಿಮರ ಮೀಸಲಾತಿಯನ್ನು ತೆಗೆದು ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡಲು ಬಿಜೆಪಿ ಮತ್ತು ಆರ್ ಎಸ್ ಎಸ್ ಸಂಚು ರೂಪಿಸುತ್ತಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಲಕ್ಷ್ಮಣ್ ಆರೋಪಿಸಿದ್ದಾರೆ.
ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯಕ್ಕೆ ಬಿಜೆಪಿ ಸರ್ಕಾರ ನೂರಕ್ಕೆ ನೂರು ಮೀಸಲಾತಿ ನೀಡುತ್ತದೆ. ಅದು ಹೇಗೆ ಎಂದರೆ ಅಲ್ಪಸಂಖ್ಯಾತ ಸಮುದಾಯದ ಶೇ.4ರಷ್ಟು ಮೀಸಲಾತಿಯನ್ನು ಶೇ.2ಕ್ಕೆ ಇಳಿಸಿ, ಆ ಶೇ.2ರಷ್ಟು ಮೀಸಲಾತಿಯನ್ನು ಪಂಚಮಸಾಲಿ ಅವರಿಗೆ ನೀಡುತ್ತಾರೆ. ನಾನು ಈ ಸಂದರ್ಭದಲ್ಲಿ ಪಂಚಮಸಾಲಿ ಲಿಂಗಾಯತರಲ್ಲಿ ಒಂದು ಮನವಿ ಮಾಡುತ್ತೇನೆ. ನೀವು ಬೇರೆಯವರ ತಟ್ಟೆಯಲ್ಲಿನ ಊಟವನ್ನು ಎತ್ತಿ ನಿಮ್ಮ ತಟ್ಟೆಗೆ ಹಾಕುವುದನ್ನು ನೀವು ಯಾವುದೇ ಕಾರಣಕ್ಕೂ ಒಪ್ಪಬೇಡಿ. ಈ ವಿಚಾರವಾಗಿ ಬಿಜೆಪಿ ಹೈಕಮಾಂಡ್ ಹಾಗೂ ಆರ್ ಎಸ್ಎಸ್ ಸೂಚನೆ ನೀಡಿ ಆಗಿದೆ. ನಿಮ್ಮ ಬೇಡಿಕೆ ನ್ಯಾಯಸಮ್ಮತವಾಗಿದೆ. ತಳ ಸಮುದಾಯದವರಿಗೆ ಮೀಸಲಾತಿ ನೀಡಿ ಅವರನ್ನು ಮೇಲೆತ್ತುವ ಬಗ್ಗೆ ನಾವು ಬೆಂಬಲಿಸುತ್ತೇವೆ. ಆದರೆ ಬೇರೆಯವರ ಹಕ್ಕನ್ನು ಕಿತ್ತು ನಿಮಗೆ ಕೊಡುವುದನ್ನು ಒಪ್ಪಬೇಡಿ ಎಂದು ಮನವಿ ಮಾಡುತ್ತೇನೆ ಎಂದು ಹೇಳಿದರು.
ಕಳೆದ ಒಂಬತ್ತು ವರ್ಷಗಳಿಂದ ಕೇಂದ್ರ ಸರ್ಕಾರ ಸಿಬಿಐ, ಐಟಿ ಹಾಗೂ ಇಡಿ ಸಂಸ್ಥೆಗಳನ್ನು ದ್ವೇಷದ ರಾಜಕಾರಣಕ್ಕೆ ಬಳಸಿಕೊಳ್ಳಲಾಗುತ್ತಿದೆ. ಈ ವಿಚಾರವಾಗಿ ಸಂಸತ್ತಿನಲ್ಲಿ ಕೇಂದ್ರ ಸರ್ಕಾರದ ಸಚಿವರು ನೀಡಿರುವ ಮಾಹಿತಿ ಸ್ಪಷ್ಟವಾಗಿ ತಿಳಿಸುತ್ತದೆ. ಕೇಂದ್ರ ಸರ್ಕಾರ ತನ್ನ ವಿರೋಧ ಪಕ್ಷಗಳ ಪ್ರಬಲ ನಾಯಕರನ್ನು ನಿಯಂತ್ರಿಸಲು ಬಿಜೆಪಿ ಆರ್ ಎಸ್ಎಸ್ ಮೂಲದ ನಾಯಕರನ್ನು ಕಳುಹಿಸಿ, ಸಂಧಾನ ಮಾಡಿಸಿ ಪಕ್ಷ ಸೇರುವಂತೆ ಆಹ್ವಾನ ನೀಡುತ್ತಾರೆ. ಅದಕ್ಕೆ ಒಪ್ಪದಿದ್ದರೆ ಈ ಸಂಸ್ಥೆಗಳ ಮೂಲಕ ದಾಳಿ ಮಾಡಿಸಲಾಗುವುದು ಎಂದು ಹೇಳುತ್ತಾರೆ ಎಂದು ಲಕ್ಷ್ಮಣ್ ದೂರಿದರು.
ಇತ್ತೀಚೆಗೆ ನಡೆದ ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಚುನಾವಣೆಗಳಲ್ಲಿ ಅದನ್ನೇ ಮಾಡಿದ್ದಾರೆ. ಈ ಎರಡು ರಾಜ್ಯಗಳಲ್ಲಿ 25 ದಿನಗಳ ಅವಧಿಲ್ಲಿ 107 ದಾಳಿಗಳು ನಡೆದಿವೆ. ಚುನಾವಣಾ ಫಲಿತಾಂಶ ಬಂದ ಯಾವುದೇ ದಾಳಿ ನಡೆದಿಲ್ಲ. ಇದೇ ಸೂತ್ರವನ್ನೇ ಕರ್ನಾಟಕ ರಾಜ್ಯದಲ್ಲಿ ಜನವರಿ ಮದಲ ವಾರದಿಂದ ಆರಂಭಿಸಲಿದ್ದಾರೆ ಎಂದು ಅವರು ಆರೋಪಿಸಿದರು.
ಡಿ.ಕೆ. ಶಿವಕುಮಾರ್ ಅವರ ಮೇಲೆ 17 ಬಾರಿ ಐಟಿ ಮತ್ತು ಇಡಿ ಅಧಿಕಾರಿಗಳು ನೊಟೀಸ್ ನೀಡಿದ್ದಾರೆ. ಇತ್ತೀಚೆಗೆ ಅವರ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ಮಾಡಿರುವುದು ಟಿ.ಜೆ ಅಬ್ರಾಹಂ ಎಂಬುವವರು ಮೂರುವರೆ ವರ್ಷಗಳ ಹಿಂದೆ ಲೋಕಾಯುಕ್ತಕ್ಕೆ ನೀಡಿದ್ದ ದೂರನ್ನು ಯಡಿಯೂರಪ್ಪನವರ ಮೂಲಕ ಸಿಬಿಐಗೆ ತನಿಖೆಗಾಗಿ ವರ್ಗಾವಣೆ ಮಾಡಿಸಿದ್ದರು. ಈಗ ಇದ್ದಕ್ಕಿದ್ದಂತೆ ಮತ್ತೆ ಆರಂಭಿಸಿದ್ದಾರೆ. ಮುಂದಿನ ದಿನಗಳಲ್ಲಿ ಶಿವಕುಮಾರ್ ಅವರ ಮೇಲೆ ನಿರಂತರವಾಗಿ ದಾಳಿ ನಡೆಯಲಿದೆ. ಇಡಿ, ಐಟಿ, ಸಿಬಿಐ ಹಾಗೂ ಎನ್’ಐಎ ಕಾರ್ಯವ್ಯಾಪ್ತಿಯೇ ಬೇರೆ. ಆದರೂ ಒಂದೇ ಪ್ರಕರಣದಲ್ಲಿ ಈ ಮೂರು ಸಂಸ್ಥೆಗಳು ಪದೇ ಪದೆ ದಾಳಿ ಮಾಡುತ್ತಲೇ ಇವೆ ಎಂದು ಅವರು ಟೀಕಿಸಿದರು.
ಈ ಅಧಿಕಾರಿಗಳು ಅಧಿಕೃತವಾಗಿ ಎಲ್ಲಿಯೂ ಮಾಹಿತಿ ನೀಡುವುದಿಲ್ಲ. ಆದರೂ ಮೂಲಗಳ ಮಾಹಿತಿ ಎಂಬ ಹೆಸರಲ್ಲಿ ಏನೂ ಇಲ್ಲದಿದ್ದರೂ ಅವರು ಮಧ್ಯಮಗಳ ಸುಳ್ಳು ಸುದ್ದಿ ಮೂಲಕ ಅಪಪ್ರಚಾರ ಮಾಡುತ್ತಿದ್ದಾರೆ. ಬಹಳ ಪ್ರಮುಖ ದಾಖಲೆ ವಶಪಡಿಸಿಕೊಂಡಿದ್ದಾರೆ ಎಂದು ಹೇಳುತ್ತಾರೆ. ಬಿಜೆಪಿಯ ಕುತಂತ್ರದ ಬಗ್ಗೆ ಅವರೇ ನೀಡಿರುವ ಮಾಹಿತಿ ಪ್ರಕಾರ 2014ರಿಂದ 2022ರ ಅವಧಿಯಲ್ಲಿ ಒಟ್ಟು 124 ರಾಜಕೀಯ ನಾಯಕರು ಸಿಬಿಐ ದಾಳಿ, ತನಿಖೆಗೆ ಒಳಗಾಗಿದ್ದಾರೆ. ಇದರಲ್ಲಿ 118 ನಾಯಕರು ವಿರೋಧ ಪಕ್ಷದ ನಾಯಕರು. ಇಬ್ಬರು ಬಿಜೆಪಿಯೇತರ, ಇಬ್ಬರು ಬಿಜೆಪಿಯಲ್ಲಿ ಗುರುತಿಸಿಕೊಂಡವರು. ಬಿಜೆಪಿಯ ಯಾವುದೇ ಪ್ರಮುಖ ನಾಯಕರ ಮೇಲೆ ದಾಳಿ ನಡೆದಿಲ್ಲ ಎಂದು ಲಕ್ಷ್ಮಣ್ ಹೇಳಿದರು.
ಇಲ್ಲಿ ದಾಳಿಯ ಶೇಕಡಾವಾರು ಪ್ರಮಾಣ ನೋಡುವುದಾದರೆ, 96%ರಷ್ಟು ವಿರೋಧ ಪಕ್ಷದವರಾಗಿದ್ದಾರೆ. ಕಾಂಗ್ರೆಸ್ 35, ಬಿಎಸ್ ಪಿ 5, ಟಿಎಂಸಿ 4, ಎಸ್ ಪಿ 3, ಐಎನ್ ಆರ್ ಡಿ 3, ಬಿಜೆಡಿ 2 ಹಾಗೂ ಇತರೆ 4, ಬಿಜೆಪಿ 3 ನಾಯಕರ ಮೇಲೆ ಸಿಬಿಐ ದಾಳಿ ಮಾಹಿತಿ. 2004ರಿಂದ 2014ರವರೆಗೆ ಯುಪಿಎ ಅವಧಿಯಲ್ಲಿ ಆಗಿರುವ ದಾಳಿಗಳ ಪೈಕಿ ಕಾಂಗ್ರೆಸ್ 33, ಬಿಜೆಪಿ 10, ಬಿಎಸ್ ಪಿ 5, ಟಿಎಂಸಿ 4, ಎಸ್ ಪಿ 4, ಜೆಡಿಯು 3, ಐಎನ್ ಆರ್ ಡಿ 3, ಬಿಜೆಡಿ 2. ಇನ್ನು ಇಡಿ ದಾಳಿ ಪ್ರಕಾರ ಇದುವರೆಗೂ ಈ ಸಂಸ್ಥೆಯಲ್ಲಿ 5400 ಪ್ರಕರಣ ದಾಖಲಾಗಿದ್ದು, ಇದುವರೆಗೂ ಅಪರಾಧಿಗಳು ಎಂದು ಘೋಷಣೆ ಮಾಡಿರುವವರು ಕೇವಲ 23. ಆಮೂಲಕ ಶೇ. 0.3ಗಿಂತ ಕಡಿಮೆ ಪ್ರಮಾಣದಲ್ಲಿ ಅಪರಾಧಿಗಳ ಘೋಷಣೆಯಾಗಿದೆ. ಅಂದರೆ ನೀವು ಇಡಿಯನ್ನು ಯಾವ ಕಾರಣಕ್ಕೆ ಬಳಸಿಕೊಳ್ಳುತ್ತಿದ್ದೀರಿ. ಉಳಿದ ಪ್ರಕರಣಗಳನ್ನು ಬ್ಲಾಕ್ ಮೇಲೆ ಮಾಡಲು ಉಳಿಸಿಕೊಂಡಿದ್ದಾರೆ. ಇನ್ನು ಇಡಿ ದಾಳಿಗೆ ಒಳಗಾಗಿರುವ ನಾಯಕರ ಸಂಖ್ಯೆ ಕಾಂಗ್ರೆಸ್ 30, ಟಿಎಂಸಿ 19, ಎನ್ ಸಿಪಿ 11, ಶಿವಸೇನಾ 08, ಡಿಎಂಕೆ 6, ಬಿಎಸ್ ಪಿ 6, ಆರ್ ಜೆಡಿ 5, ಎಸ್ ಪಿ5, ಬಿಜೆಪಿ 5, ಆಪ್ 3, ವೈಎಸ್ ಆರ್ ಪಿ 3, ಸಿಪಿಎಂ 2, ಟಿಡಿಪಿ 2ಹಾಗೂ ಇತರರು ಸೇರಿ 194 ಪ್ರಮುಖ ರಾಜಕಾರಣಿಗಳ ಮೇಲೆ ಇಡಿ ದಾಳಿ ಆಗಿದೆ ಎಂದು ಲಕ್ಷ್ಮಣ್ ಅಂಕಿ ಅಂಶಗಳನ್ನು ನೀಡಿದರು.
ನಮ್ಮ ಮಾಹಿತಿ ಪ್ರಕಾರ ಇವರು ಕೆಲವು ಸ್ವಾಮೀಜಿಗಳಿಗೂ ಬ್ಲಾಕ್ ಮೇಲೆ ಮಾಡುತ್ತಿದ್ದಾರೆ. ಅವರನ್ನು ತಮ್ಮ ಕಡೆ ಸೆಳೆದು ಬಿಜೆಪಿ ಪರ ಪ್ರಚಾರ ಮಾಡಲು ಪ್ರಯತ್ನಿಸುತ್ತಿದ್ದಾರೆ. ಪ್ರಬಲ ಸಮುದಾಯದ ಸ್ವಾಮೀಜಿಗಳ ಮೇಲೆ ಪ್ರಯೋಗ ನಡೆದಿದೆ ಎಂಬುದು ನನ್ನ ಆರೋಪ. ಜನವರಿ ನಂತರ ರಾಜ್ಯಕ್ಕೆ ಸುಮಾರು 300ಕ್ಕೂ ಹೆಚ್ಚು ಐಟಿ ಅಧಿಕಾರಿಗಳು ಗೋವಾ, ಮುಂಬೈ ಹಾಗೂ ಚೆನ್ನೈನಿಂದ ಹೆಚ್ಚುವರಿಯಾಗಿ ಬರುತ್ತಿದ್ದಾರೆ. ಯಾಕೆ ಎಂಬುದನ್ನು ಆದಾಯ ತೆರಿಗೆ ಇಲಾಖೆಯೇ ಸ್ಪಷ್ಟನೆ ನೀಡಬೇಕು. ಇವರು ಈ ವರ್ಷ, ಕಳೆದ ವರ್ಷ ಯಾಕೆ ಬರಲಿಲ್ಲ? ಇನ್ನು ಸುಮಾರು 1 ಸಾವಿರ ಹೆಚ್ಚುವರಿ ಆರ್ ಎಸ್ಎಸ್ ಕಾರ್ಯಕರ್ತರು ಬೇರೆ ಬೇರೆ ರಾಜ್ಯಗಳಿಂದ ಬರುತ್ತಿದ್ದಾರೆ. ಇವರನ್ನು ಸೇರಿದಂತೆ ಇತ್ತೀಚೆಗೆ ಸಂತೋಷ್ ಅವರು ಅರಮನೆ ಮೈದಾನದಲ್ಲಿ ತರಬೇತಿ ಕಾರ್ಯಕ್ರಮ ಮಾಡಿದ್ದಾರೆ. ಕಾಂಗ್ರೆಸ್ ವಿರುದ್ಧ ಹೇಗೆ ಅಭಿಪ್ರಾಯ ಸೃಷ್ಟಿಸುವ ತರಬೇತಿ ನೀಡಿದ್ದಾರೆ. ಮತದಾರರನ್ನು ಗೊಂದಲಕ್ಕೆ ಸಿಲುಕಿಸಿದರೆ, ಅತಂತ್ರ ವಿಧಾನಸಭೆ ಎದುರಾದರೆ ನಾವು ಆಪರೇಷನ್ ಕಮಲ ಮಾಡುತ್ತೇವೆ ಎಂಬ ತಂತ್ರಗಾರಿಕೆ ರೂಪಿಸಿದ್ದಾರೆ ಎಂದು ಅವರು ನೇರ ಆರೋಪ ಮಾಡಿದರು.
ಐಟಿ, ಇಡಿ ಹಾಗೂ ಸಿಬಿಐ ಮೂಲಕ ಒಂದು ಆಪರೇಶನ್, ಎರಡನೆಯದು ದಾಳಿ ಮೂಲಕ, ಮೂರನೇಯದಾಗಿ ಫಲಿತಾಂಶದ ನಂತರ ಶಾಸಕರ ಖರೀದಿ ಮಾಡುವುದು. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದನ್ನು ತಪ್ಪಿಸಲೇ ಬೇಕು ಎಂದು ಪಣತೊಟ್ಟಿದ್ದಾರೆ. ಆದರೆ ಜನ ಇವರನ್ನು ಕಿತ್ತಾಕಿ ಕಾಂಗ್ರೆಸ್ ಸರ್ಕಾರ ತರಲು ನಿರ್ಧಾರ ಮಾಡಿದ್ದಾರೆ. ಇವರ ಪ್ರಯತ್ನ ನಡೆಯುವುದಿಲ್ಲ ಎಂದು ಅವರು ಹೇಳಿದರು.
ಇನ್ನು ಸಿ.ಟಿ ರವಿ ಎಂಬ 420 ವ್ಯಕ್ತಿ ರಾಜ್ಯದ ದುರಂತ. ಈತ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನು ನಾಯಿಗೆ ಹೋಲಿಸಿ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಖರ್ಗೆ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿ ನಾಯಕರಷ್ಟೇ ಅಲ್ಲ, ಅವರ ಮನೆಯ ನಾಯಿ ಕೂಡ ಸತ್ತಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಅದರಲ್ಲಿ ತಪ್ಪೇನಿಲ್ಲ, ಸತ್ಯದ ವಿಚಾರ. ಬಿಜೆಪಿಯವರಿಗೆ ಸತ್ಯ ಹೇಳಿದರೆ ಉರಿ ಹತ್ತಿಕೊಳ್ಳುತ್ತದೆ. ಇದು ನಮ್ಮ ರಾಜ್ಯದ ಮಾನ ಮರ್ಯಾದೆ ತೆಗೆಯುವ ವಿಚಾರವಾಗಿದೆ. ಬಿಜೆಪಿಯವರು ಸಿ.ಟಿ ರವಿ, ಪ್ರತಾಪ್ ಸಿಂಹ, ಸುಧಾಕರ್, ಅಶ್ವತ್ಥ್ ನಾರಾಯಣ್ ಅವರ ಮೂಲಕ ವಿರೋಧ ಪಕ್ಷದ ನಾಯಕರ ವಿರುದ್ಧ ಕೇವಲವಾಗಿ ಮಾತನಾಡಿಸುತ್ತಿದ್ದಾರೆ ಎಂದು ಲಕ್ಷ್ಮಣ್ ಹೇಳಿದರು.
ಸಿ.ಟಿ ರವಿ ಮಾತೆತ್ತಿದರೆ ಡಿ.ಕೆ. ಶಿವಕುಮಾರ್ ಅಕ್ರಮ ಆಸ್ತಿ ಮಾಡಿಲ್ಲವೇ? ಅಷ್ಟೊಂದು ಆಸ್ತಿ ಹೇಗೆ ಬಂತು ಎಂದು ಕೇಳುತ್ತಾರೆ. ಡಿ.ಕೆ. ಶಿವಕುಮಾರ್ ಅವರು ನಿಮ್ಮಂತೆ ಲೂಟಿ ಮಾಡಿ ದುಡ್ಡು ಮಾಡುವ ವ್ಯಕ್ತಿಯಲ್ಲ. ಅವರು ಉದ್ಯಮಿ, ಶಿಕ್ಷಣ ಸಂಸ್ಥೆ, ರಿಯಲ್ ಎಸ್ಟೇಟ್ ವ್ಯಪಾರವನ್ನು 40 ವರ್ಷಗಳಿಂದ ಮಾಡಿಕೊಂಡು ಬಂದಿದ್ದಾರೆ. ಆದಾಯ ತೆರಿಗೆ ಪಾವತಿಸುತ್ತಾ ಎಲ್ಲದಕ್ಕೂ ಲೆಕ್ಕ ಕೊಟ್ಟಿದ್ದಾರೆ. 2014ರಲ್ಲಿ ಕೇವಲ 14 ಸಾವಿರ ಕೋಟಿ ವಹಿವಾಟು ಇದ್ದ ಅದಾನಿ ಅವರು ಇಂದು ಪ್ರಪಂಚದಲ್ಲೇ 2ನೇ ಶ್ರೀಮಂತ ಹೇಗಾದರು? ಈಗ 15 ಲಕ್ಷ ಕೋಟಿ ಆಸ್ತಿ ಹೊಂದಿದ್ದು ಹೇಗೆ? ಅಮಿತ್ ಶಾ ಸುಪುತ್ರ ಜೈ ಶಾ, ಟೆಂಪಲ್ ಎಂಟರ್ ಪ್ರೈಸಸ್ ಎಂಬ ಕಂಪನಿ ನಡೆಸುತ್ತಿದ್ದು, ಅದರ ವಹಿವಾಟು 2014ರಲ್ಲಿ 6365 ರೂ. ಮಾತ್ರ. ಇಂದು 1300 ಕೋಟಿ ವಹಿವಾಟಿ ಹೇಗಾಯಿತು? ಸಿಬಿಐ ತನಿಖೆ ಮಾಡಿಸಿ ಎಂದು ಅವರು ಸವಾಲು ಹಾಕಿದರು.
ಮೈಸೂರಿನಲ್ಲಿ ಶ್ರೀನಿವಾಸ್ ಪ್ರಸಾದ್ ಅವರು ಹೆಚ್.ವಿಶ್ವನಾಥ್ ಅವರ ವಿರುದ್ಧ ನೇರ ಆರೋಪ ಮಾಡಿ ಚುನಾವಣೆ ಸಮಯದಲ್ಲಿ ನಿಮಗೆ 15 ಕೋಟಿ ನೀಡಲಾಗಿತ್ತು. ಅದರಲ್ಲಿ ಕೇವಲ 4-5 ಕೋಟಿ ಖರ್ಚು ಮಾಡಿದ್ದೀರಿ ಎಂದು ಹೇಳಿದ್ದಾರೆ. 17 ಬಂಡಾಯ ಶಾಸಕರಿಗೆ ತಲಾ 15 ಕೋಟಿ ಎಂದು ಲೆಕ್ಕ ಹಾಕಿದರೂ 350 ಕೋಟಿ ಹಣವನ್ನು ಬಳಸಿಕೊಳ್ಳಲಾಗಿದೆ. ಈ ಬಗ್ಗೆ ಐಟಿ, ಇಡಿ ಸುಮೋಟೋ ಪ್ರಕರಣ ಯಾಕೆ ದಾಖಲಿಸಿಲ್ಲ? ಈ ಸಂಸ್ಥೆಗಳು ಬಿಜೆಪಿ ಏಜೆಂಟರಂತೆ ವರ್ತಿಸುತ್ತಿವೆ ಎಂದು ಅವರು ಹರಿಹಾಯ್ದರು.
ಕೆಲ ದಿನಗಳ ಹಿಂದೆ ಪ್ರತಾಪ್ ಸಿಂಹ ಅವರು ನೀಡಿರುವ ಹೇಳಿಕೆ ಬಗ್ಗೆ ಯಾಕೆ ಸುಮೋಟೋ ಪ್ರಕರಣ ದಾಖಲಿಸುತ್ತಿಲ್ಲ? ಈ ವಿಚಾರವಾಗಿ ಪರಿಷತ್ ನಲ್ಲಿ ಚರ್ಚೆ ಮಾಡಲು ಅವಕಾಶ ನೀಡುತ್ತಿಲ್ಲ ಯಾಕೆ? ಉಪಕುಲಪತಿಗಳ ನೇಮಕಾತಿ ವಿಚಾರವಾಗಿ ರಾಜ್ಯದಲ್ಲಿ 35 ವಿವಿಗಳಿದ್ದು ಒಂದೊಂದು ವಿವಿಯ ಉಪಕುಲಪತಿ ನೇಮಕಾತಿ ವಿಚಾರವಾಗಿ ಅವರದೇ ಪಕ್ಷದ ನಾಯಕರೇ ಹೇಳುತ್ತಿದ್ದಾರೆ. ಇವರ ನೇಮಕ ಮಾಡುವವರು ರಾಜ್ಯಪಾಲರು. ಕೆ ಸೆಟ್ ಸೇರಿದಂತೆ ಪ್ರತಿ ನೇಮಕಾತಿಯಲ್ಲೂ ಅಕ್ರಮ ನಡೆದಿದೆ. ನಾವು ಇದನ್ನೇ ಹೇಳುತ್ತಿದ್ದೇವೆ. ಕಮಿಷನ್ ಇಲ್ಲದೇ ಏನೂ ನಡೆಯಲ್ಲ ಎಂದು ಅವರೇ ಒಪ್ಪಿಕೊಂಡಿದ್ದಾರೆ. ಈ ವಿಚಾರವಾಗಿ ನಾನು ಹಾಗೂ ರಮೇಶ್ ಬಾಬು ಅವರು ಲೋಕಾಯುಕ್ತ ಹಾಗೂ ಇಡಿಗೆ ಮುಂದಿನ ಒಂದೆರಡು ದಿನಗಳಲ್ಲಿ ದೂರು ನೀಡುತ್ತೇವೆ. ಇದರ ಹಿಂದೆ ಯಾರೆಲ್ಲ ಇದ್ದಾರೆ ಯಾರಿಗೆ ಎಷ್ಟು ಹಣ ಸಲ್ಲಿಕೆಯಾಗಿದೆ ಎಂಬುದು ಗೊತ್ತಾಗಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಲಕ್ಷ್ಮಣ್ ಹೇಳಿದರು.
ಈ ಬಗ್ಗೆ ಯಾಕೆ ಚರ್ಚೆಗೆ ಅವಕಾಶ ನೀಡುತ್ತಿಲ್ಲ. ಈ ರೀತಿ ನಮ್ಮ ಪಕ್ಷದವರು ಹೇಳಿಕೆ ನೀಡಿದ್ದರೆ ರಾಜ್ಯದಿಂದ ದೇಶದಾದ್ಯಂತ ಬೊಬ್ಬೆ ಹಾಕುತ್ತಿದ್ದಿರಿ. ಹಾಲಿ ಸಂಸದರು, ಮೂಲ ಆರ್ ಎಸ್ಎಸ್ ವ್ಯಕ್ತಿಯೇ ಈ ಹೇಳಿಕೆ ನೀಡಿದ್ದಾರೆ. ಪ್ರತಾಪ್ ಸಿಂಹ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಈ ಮಧ್ಯೆ ಅಶ್ವತ್ಥ್ ನಾರಾಯಣ ಅವರು ಪ್ರತಾಪ್ ಸಿಂಹ ಕಾಂಗ್ರೆಸ್ ಸರ್ಕಾರದ ಅವಧಿಯ ಅಕ್ರಮದ ಬಗ್ಗೆ ಮಾತನಾಡಿದ್ದಾರೆ ಎಂದು ಹೇಳಿದ್ದಾರೆ. ಅವರಿಗೆ ನಾಚಿಕೆಯಾಗಬೇಕು.ನಿಮ್ಮ ಯೋಗ್ಯತೆ ಏನು ಎಂಬುದು ಗೊತ್ತಿದೆ. ನೀವು ಎಷ್ಟು ಕೋಟಿ ಸಂಪಾದಿಸಿದ್ದೀರಿ ಎಂಬುದು ಗೊತ್ತಿದೆ. ಯತ್ನಾಳ್ ಅವರು ಹೇಳಿರುವಂತೆ ಮುಖ್ಯಮಂತ್ರಿ ಹುದ್ದೆಗೆ 2500 ಕೋಟಿ, ಮಂತ್ರಿಗಿರಿಗೆ 150 ಕೋಟಿ ನೀಡಬೇಕು ಎಂದು ಹೇಳಿದ ಬಗ್ಗೆ ಯಾಕೆ ತನಿಖೆ ನಡೆಯುತ್ತಿಲ್ಲ. ಇವರಿಗೆ ಕೇವಲ ಡಿ.ಕೆ.ಶಿವಕುಮಾರ್ ಅವರು ಮಾತ್ರ ಕಾಣುತ್ತಿದ್ದಾರಾ? ಎಂದು ಪ್ರಶ್ನಿಸಿದರು.
ಸಿ.ಟಿ ರವಿ ಅವರು ಬೇನಾಮಿ ಹೆಸರಲ್ಲಿ 2500 ಕೋಟಿಗೂ ಹೆಚ್ಚು ಆಸ್ತಿ ಸಂಪಾದಿಸಿದ್ದಾರೆ. ನಾವು ದೂರು ನೀಡುತ್ತೇವೆ ಅವರ ವಿರುದ್ಧ ತನಿಖೆ ಮಾಡಿಸಿ ಎಂದು ಅವರು ಆಗ್ರಹಿಸಿದರು.
ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷರಾದ ರಮೇಶ್ ಬಾಬು ಉಪಸ್ಥಿತರಿದ್ದರು.