BJP ನಾಯಕರ ನಿರ್ದೇಶನದ ಮೇರೆಗೆ ಗಲಭೆ ಪ್ರಕರಣಗಳಲ್ಲಿ SDPI ನಾಯಕರನ್ನು ಸಿಲುಕಿಸುವ ಯತ್ನ: ಅಫ್ಸರ್ ಕೊಡ್ಲಿಪೇಟೆ

Prasthutha|

ಬೆಂಗಳೂರು : ಕೇಂದ್ರದ ಬಿಜೆಪಿ ಸರ್ಕಾರ ನಿರಂತರವಾಗಿ ಎನ್.ಐ.ಎ. ಮತ್ತು ಇತರ ತನಿಖಾ ಸಂಸ್ಥೆಗಳನ್ನು ಜನಪರ ಹೋರಾಟಗಾರರ ವಿರುದ್ಧ ನಿರಂತರ ದುರ್ಬಳಕೆ ಮಾಡುವುದನ್ನು ಕೂಡಲೇ ನಿಲ್ಲಿಸಬೇಕೆಂದು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್‌ ಇಂಡಿಯಾ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್‌ ಕೊಡ್ಲಿಪೇಟೆ ಹೇಳಿದ್ದಾರೆ. ಅವರು ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ್ದಾರೆ.

- Advertisement -

ಬೆಂಗಳೂರಿನ ಡಿ.ಜೆ. ಹಳ್ಳಿ ಹಾಗೂ ಕೆ.ಜಿ. ಹಳ್ಳಿಯಲ್ಲಿ ಕಳೆದ ಆಗಸ್ಟ್ ತಿಂಗಳಿನಲ್ಲಿ ಪ್ರವಾದಿ ನಿಂದನೆ ವಿರುದ್ಧ ಹಿಂಸಾಚಾರ ನಡೆದಿತ್ತು. ಈ ಹಿಂಸಾಚಾರ ರಾಜಕೀಯ ನಂಟಿನ ಭಾಗವಾಗಿರುತ್ತದೆ. ಇದರ ತನಿಖೆಯನ್ನು ಮೊದಲು ರಾಜ್ಯ ಪೊಲೀಸರು ನಂತರದಲ್ಲಿ ರಾಷ್ಟ್ರೀಯ ತನಿಖಾ ದಳವು ತನಿಖೆ ಮಾಡುತ್ತಿವೆ. ಈಗಾಗಲೇ ಸಾವಿರಾರು ಜನರ ವಿಚಾರಣೆಯನ್ನು ನಡೆಸಲಾಗಿದೆ. ಇದರ ಅಡಿಯಲ್ಲಿ ಕೇಂದ್ರ ಬಿ.ಜೆ.ಪಿ ನಾಯಕರ ನಿರ್ದೇಶನ ಮೇರೆಗೆ ಎಸ್.ಡಿ.ಪಿಐ. ಪಕ್ಷವನ್ನು ಸಿಲುಕಿಸುವ ಪ್ರಯತ್ನವು ರಾಜಕೀಯ ಪ್ರೇರಿತವಾಗಿರುತ್ತದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ನಿನ್ನೆ ಎಸ್.ಡಿ.ಪಿ.ಐ.ನ ಬೆಂಗಳೂರು ಜಿಲ್ಲಾಧ್ಯಕ್ಷರಾದ ಮಹಮ್ಮದ್ ಶರೀಫ್ ಹಾಗೂ ಕೆಲವು ಸ್ಥಳೀಯ ಕಾರ್ಯಕರ್ತನನ್ನು ಎನ್.ಐ.ಎ. ಬಂಧಿಸಿದೆ. ಎಸ್.ಡಿ.ಪಿ.ಐ. ಕಾರ್ಯಕರ್ತರು ನಿರಂತರವಾಗಿ ಎನ್.ಐ.ಎ. ಕಛೇರಿಗೆ ಭೇಟಿ ನೀಡಿ ತನಿಖಾಧಿಕಾರಿಗಳಿಗೆ ಸ್ಪಷ್ಟೀಕರಣ ನೀಡಿರುತ್ತಾರೆ. ಕೆಲವರ ಮೊಬೈಲ್ ಪರಿಶೀಲನೆ ನಡೆಸಿಯೂ, ಯಾವುದೇ ಸಾಕ್ಷಿಗಳು ಸಿಕ್ಕಿರುವುದಿಲ್ಲ. ಪಕ್ಷದ ಕೆಲವು ಕಛೇರಿಗಳಿಗೂ ದಾಳಿ ಮಾಡಲಾಗಿತ್ತು. ಎಲ್ಲಾ ಆಯಾಮಗಳಲ್ಲೂ ಈ ಗಲಭೆಯಲ್ಲಿ ಎಸ್.ಡಿ.ಪಿ.ಐ.ಯ ಯಾವುದೇ ಪಾತ್ರವಿಲ್ಲ ಎಂದು ಕಂಡು ಬಂದಿರುತ್ತದೆ ಎಂದು ಅವರು ತಿಳಿಸಿದ್ದಾರೆ.

- Advertisement -

ಬಿ.ಜೆ.ಪಿ. ಪರವಾಗಿ ನಿರಂತರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರಮಾಡುತ್ತಿದ್ದ ನವೀನ್ ಪ್ರವಾದಿ ನಿಂದನೆ ಪೋಸ್ಟ್ ಮಾಡಿದ ಮೇಲೆ ಸ್ಥಳೀಯರು ಭಾವೊದ್ರಿಕ್ತರಾಗಿದ್ದರು. ತನಿಖಾ ಸಂಸ್ಥೆಗಳು ಹಿಂಸೆಗೆ ಮೂಲ ಪ್ರಚೋದನೆ ನೀಡಿದ ನವೀನ್ ಮೇಲೆ ಸಾಮಾನ್ಯ ಕೇಸುಗಳನ್ನು ಹಾಕಿದ ಕಾರಣ ಜಾಮೀನು ಸಹ ಸಿಕ್ಕಿ ಬೀಡುಗಡೆಗೊಂಡಿದ್ದಾನೆ. ಆದರೆ ಬೆಂಗಳೂರಿನ ನೂರಾರು ಅಮಾಯಕ ಮುಸ್ಲಿಂ ಯುವಕರನ್ನು ಕರಾಳ ಕಾನೂನಿನಡಿ ಬಂಧಿಸಲಾಗಿದ್ದು ಜಾಮೀನು ಸಿಗದಂತೆ ಮಾಡಿ, ತನಿಖಾ ಸಂಸ್ಥೆಗಳೂ ತಾರತಮ್ಯ ನೀತಿಗಳನ್ನು ಅನುಸರಿಸಲಾಗುತ್ತಿವೆ. ಈ ಕಾರಣ ಅಮಾಯಕ ಯುವಕರ ನೂರಾರು ಕುಟುಂಬಗಳು ದುಃಖತಪ್ತರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಕೊರೊನ ಸಂತ್ರಸ್ಥರಿಗೆ ವಿವಿಧ ರೀತಿಯಲ್ಲಿ ಸೇವೆಸಲ್ಲಿಸಿ ದೇಶದಾದ್ಯಂತ ಎಲ್ಲಾ ಧರ್ಮೀಯರಿಂದ ಪ್ರಶಂಸೆಗೆ ಪಾತ್ರವಾಗಿದ್ದ ಎಸ್.ಡಿ.ಪಿ.ಐ. ಆಗಸ್ಟ್ ತಿಂಗಳಿನಲ್ಲಿ ಈ ಸೇವಾಕಾರ್ಯಗಳನ್ನು ಮುಂದುವರಿಸಲು ಹಾಗೂ ಸ್ವಾತಂತ್ರ್ಯ ದಿನಾಚರಣೆಯ ಸಂಬಂಧ ಬೆಂಗಳೂರು ಜಿಲ್ಲೆಯ ಎಲ್ಲಾ ಹಂತದ ಸಭೆಗಳನ್ನು ನಿರಂತರ ನಡೆಸಿದ್ದು, ಇಂತಹ ಸಭೆಗಳು ಎಲ್ಲಾ ಪಕ್ಷಗಳಲ್ಲೂ ಸರ್ವೇಸಾಮಾನ್ಯ. ಆದರೆ ಈ ರೀತಿಯ ಸಾಮಾನ್ಯ ಸಭೆಗಳನ್ನು ಎನ್.ಐ.ಎ. ಕೆ.ಜೆ. ಹಳ್ಳಿ ಹಾಗೂ ಡಿ.ಜೆ ಹಳ್ಳಿ ಗಲಭೆಯ ಸಂಚಿಗಾಗಿ ನಡೆಸಿದ ಸಭೆಗಳೆಂದು ಸುಳ್ಳು ಸಾಕ್ಷಿ ಸೃಷ್ಠಿಸುವ ಪ್ರಯತ್ನ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.

ಕೇಂದ್ರ ಬಿ.ಜೆ.ಪಿ. ಸರ್ಕಾರವು ಭೀಮಾಕೊರೆಗಾಂವ್ ಪ್ರತಿಭಟನೆ, ದೆಹಲಿ ಗಲಭೆ ಮತ್ತು ಕೆ.ಜಿ. ಹಳ್ಳಿ ಮತ್ತು ಡಿ.ಜೆ. ಹಳ್ಳಿ ಹಿಂಸಾಚಾರದ ಹೆಸರಲ್ಲಿ ನಿರಂತರವಾಗಿ ಸಾಮಾಜಿಕ ಹೋರಾಟಗಾರರನ್ನು, ರಾಜಕೀಯ ವಿರೋಧ ಪಕ್ಷದವರನ್ನು, ಎಡಪಂಥೀಯರನ್ನು ಹಾಗೂ ಮುಸ್ಲಿಮರನ್ನು ಸುಳ್ಳು ಕೇಸುಗಳಿಗೆ ಈಡು ಮಾಡಿ ಬಂಧಿಸುವುದು ಕೂಡಲೇ ನಿಲ್ಲಿಸಬೇಕು. ನೈಜ ಅಪರಾಧಿಗಳಾದ ಬಿಜೆಪಿ ಮತ್ತು ಸಂಘ ಪರಿವಾರದ ತಪ್ಪಿತಸ್ಥರನ್ನುರಕ್ಷಣೆ ಮಾಡದೆ ಕೂಡಲೇ ಬಂಧಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ನಿಪಕ್ಷಪಾತ ತನಿಖೆ ಮಾಡಿ ಪಕ್ಷ ಮತ್ತು ಧರ್ಮ ಭೇದಭಾವ ಮಾಡದೆ ನೈಜ ಅಪರಾಧಿಗಳನ್ನು ಶಿಕ್ಷಿಸಬೇಕು. ಅಮಾಯಕರನ್ನುಕೂಡಲೇ ಬಿಡುಗಡೆ ಮಾಡಬೇಕು. ಯು.ಎ.ಪಿ.ಎಯಂತಹಾ ಕರಾಳ ಕಾನೂನನ್ನು ದುರ್ಬಳಕೆ ಮಾಡಬಾರದು. ತನಿಖಾಧಿಕಾರಿಗಳು ಯಾವುದೇ ರಾಜಕೀಯ ಒತ್ತಡಗಳಿಗೆ ಬಗ್ಗಬಾರದು ಎಂದು ಅವರು ಆಗ್ರಹಿಸಿದ್ದಾರೆ.

ರಾಜ್ಯಉಪಾಧ್ಯಕ್ಷ ಅಬ್ದುಲ್ ಮಜೀದ್‌ಖಾನ್, ರಾಜ್ಯ ಪ್ರಧಾನಕಾರ್ಯದರ್ಶಿ ಮುಜಾಹಿದ್ ಪಾಷಾ, ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಅಕ್ರಂ ಹಸನ್, ರಾಜ್ಯ ಸಮಿತಿ ಸದಸ್ಯ ಪಯಾಝ್ ಬೆಂಗಳೂರು, ಬೆಂಗಳೂರು ಜಿಲ್ಲಾ ಉಪಾಧ್ಯಕ್ಷ ಹೆಚ್.ಎಂ ಗಂಗಪ್ಪ, ಬೆಂಗಳೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಲೀಂ ಅಹಮದ್ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.



Join Whatsapp