ಪೊಲೀಸ್ ಬಿಗಿ ಭದ್ರತೆಯಲ್ಲಿ ಬೈರಿದೇವರಕೊಪ್ಪ ಮೆಹಮೂದ್ ಷಾ ಖಾದ್ರಿ ದರ್ಗಾ ತೆರವು

Prasthutha|

ಹುಬ್ಬಳ್ಳಿ: ಬೈರಿದೇವರಕೊಪ್ಪದ ಬಳಿಯ ರಸ್ತೆ ಅಗಲೀಕರಣಕ್ಕಾಗಿ ಇತಿಹಾಸ ಪ್ರಸಿದ್ಧ ದರ್ಗಾ ತೆರವಿಗೆ ಹೈಕೋರ್ಟ್ ಆದೇಶ ನೀಡಿ ಹಿನ್ನೆಲೆಯಲ್ಲಿ ಇಂದು ಹಜರತ್ ಸೈಯದ್ ಮೆಹಮೂದ್ ಷಾ ಖಾದ್ರಿ ದರ್ಗಾ ತೆರವು ಕಾರ್ಯಾಚರಣೆ ನಡೆಸಲಾಗಿದೆ. ಬಿಗಿ ಪೊಲೀಸ್ ಬಂದೋಬಸ್ತ್’ನಲ್ಲಿ ತೆರವು ಕಾರ್ಯ ನಡೆದಿದೆ. ಪೊಲೀಸ್ ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.

- Advertisement -


ಹು-ಧಾ ಮುಖ್ಯ ರಸ್ತೆಯ ಬೈರಿದೇವರಕೊಪ್ಪ ಬಳಿಯಿರುವ ಹಜರತ್ ಸೈಯದ್ ಮೆಹಮೂದ್ ಷಾ ಖಾದ್ರಿ ದರ್ಗಾ ತೆರವಿಗೆ ಹೈಕೋರ್ಟ್ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಕಳೆದ ರಾತ್ರಿಯಿಂದಲೇ ಪೂರ್ವ ಸಿದ್ಧತೆ ಮಾಡಿಕೊಂಡಿದ್ದ ಜಿಲ್ಲಾಡಳಿತ ಹಾಗೂ ಪೋಲಿಸ್ ಇಲಾಖೆಯು ರಾತ್ರಿಯೇ ದರ್ಗಾ ಬಳಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತೆರವು ಕಾರ್ಯ ನಡೆಯುವ ಸ್ಥಳದಲ್ಲಿ ಬಿಗಿ ಭದ್ರತೆ ಕೈಗೊಂಡಿದ್ದು, ಜೆಸಿಬಿ ಹಾಗೂ ಪಾಲಿಕೆ ಪೌರ ಕಾರ್ಮಿಕರನ್ನು ಬಳಸಿಕೊಂಡು ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ.


ದರ್ಗಾ ಹತ್ತಿರದ ಅವಳಿನಗರ ರಸ್ತೆಯಲ್ಲಿ 500 ಮೀಟರ್ ವಾಹನ ಸಂಚಾರ ಬಂದ್:
ದರ್ಗಾ ತೆರವು ಕಾರ್ಯಾಚರಣೆ ವೇಳೆಯಲ್ಲಿ ಯಾವುದೇ ಅಡತಡೆಗಳು ಉಂಟಾಗಬಾರದು ಎಂಬ ದೃಷ್ಟಿಕೋನದಿಂದ ಹಾಗೂ ಯಾವುದೇ ಅಹಿತಕರ ಘಟನೆ ನಡೆಯಬಾರದು ಎಂಬ ಹಿನ್ನೆಲೆಯಲ್ಲಿ ದರ್ಗಾ ಬಳಿಯ ಹುಬ್ಬಳ್ಳಿ – ಧಾರವಾಡ ಮುಖ್ಯ ರಸ್ತೆ ಎರಡು ಬದಿಯಲ್ಲಿ 500 ಮೀಟರ್ ವ್ಯಾಪ್ತಿಯಲ್ಲಿ ರಸ್ತೆಯನ್ನು ಸಂಪೂರ್ಣ ಬಂದ್ ಮಾಡಿ ಬದಲಿ ಮಾರ್ಗ ಕಲ್ಪಿಸಿ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ವಾಹನ ಸಂಚಾರ ನಿಷೇಧಿತ 500 ಮೀಟರ್ ರಸ್ತೆಯಲ್ಲಿ ಬ್ಯಾರಿಕೇಡ್ ಅಳವಡಿಸಿ ಬಂದ್ ಮಾಡಲಾಗಿದೆ. ಜೊತೆಗೆ ದರ್ಗಾವನ್ನು ಹೊರಗಡೆಯಿಂದ ತಗಡು ಬಳಸಿ ಮುಚ್ಚಿಲಾಗಿದ್ದು, ಒಳಗಡೆ ತೆರವು ಕಾರ್ಯ ನಡೆಸಲಾಗುತ್ತಿದೆ.

- Advertisement -

ಇನ್ನೂ ಭದ್ರತೆಗಾಗಿ 5 ಡಿವೈಎಸ್ಪಿ ಹಾಗೂ ಎಸಿಪಿಗಳು, 13 ಪೊಲೀಸ್ ಇನ್ಸ್ ಪೆಕ್ಟರ್, 15 ಪಿಎಸ್ ಐ ನಿಯೋಜನೆ ಮಾಡಲಾಗಿದೆ. ಇದರ ಮಧ್ಯೆ ಹುಬ್ಬಳ್ಳಿ – ಧಾರವಾಡ ನಗರ ಪೊಲೀಸ್ ಆಯುಕ್ತರಾದ ಲಾಭೂರಾಮ್ ಸ್ಥಳಕ್ಕೆ ಆಗಾಗ್ಗೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.



Join Whatsapp