ಹಿರಿಯರ ಮನೆತನದಲ್ಲಿ ಹಿರಿತನ ಉಳಿಸಿದ ವ್ಯಕ್ತಿತ್ವ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Prasthutha|

ಬೆಳಗಾವಿ ಸುವರ್ಣಸೌಧ: ಬಸವರಾಜ ಹೊರಟ್ಟಿಯವರನ್ನು ಮತ್ತೊಮ್ಮೆ ಸಭಾಪತಿ ಸ್ಥಾನದಲ್ಲಿ ಕೂಡಿಸುವ ಮೂಲಕ ಹೊರಟ್ಟಿಯವರ ಹಿರಿತನ ಮತ್ತು ಅನುಭವಕ್ಕೆ ಸದನ ಮನ್ನಣೆ ನೀಡಿದಂತಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

- Advertisement -

ಅನುಭವಿ ಮತ್ತು ಹಿರಿಯರು ಸರ್ವಾನುಮತದಿಂದ ಆಯ್ಕೆ ಆಗುವುದು ಕೂಡ ಸದನದ ಗೌರವವನ್ನು ಕಾಪಾಡಿದಂತಾಗುತ್ತದೆ. ಆಡಳಿತ ಪಕ್ಷ ವಿರೋಧ ಪಕ್ಷ ಎನ್ನದೇ ಎಲ್ಲರೊಂದಿಗೆ ಸ್ನೇಹ ಪ್ರೀತಿಯಿಂದಿರುವ, ತಮ್ಮದೇ ಆದ ಕಾರ್ಯಪ್ರವೃತ್ತಿ ಮತ್ತು ವ್ಯಕ್ತಿತ್ವದಿಂದ ಎಲ್ಲರ ಮನಸು ಗೆದ್ದ ಹೊರಟ್ಟಿಯವರನ್ನು ಸಭಾಪತಿಯಾಗಿ ಸರ್ವಾನುಮತದಿಂದ ಆಯ್ಕೆ ಮಾಡಿ ಸದನದ ಗೌರವ ಕಾಪಾಡಿದಂತಾಗಿದೆ ಎಂದು ತಿಳಿಸಿದರು.

1980ರ ಮೊದಲ ಚುನಾವಣೆಯಿಂದ ಹೊರಟ್ಟಿಯವರನ್ನು ನೋಡಿದ, ಅವರೊಂದಿಗೆ ಒಡನಾಡಿದ ಅನುಭವವನ್ನು ಸ್ಮರಿಸಿಕೊಂಡ ಸಿಎಂ ಬೊಮ್ಮಾಯಿ ಅವರು, ಹೊರಟ್ಟಿಯವರ 42 ವರ್ಷದ ಹೋರಾಟದ ಬದುಕನ್ನು, ಬಾಗಲಕೋಟೆಯಿಂದ ಹುಬ್ಬಳ್ಳಿಗೆ ಬಂದು ಶಿಕ್ಷಕರಾಗಿ, ಬಳಿಕ ರಾಜಕಾರಣಿಯಾಗಿ ಮಾಡಿದ ಸಾಧನೆಯನ್ನು ವಿವರಿಸಿದರು. ಹಿರಿಯರ ಮನೆತನದಲ್ಲಿ ಹಿರಿತನ ಉಳಿಸಿದ ವ್ಯಕಿತ್ವ ಎಂದು  ಹೊರಟ್ಟಿಯವರ ವ್ಯಕ್ತಿತ್ವವನ್ನು ಬಣ್ಣಿಸಿದರು.

- Advertisement -

ಸಂತಸದ ಸಂಗತಿ: ಸಭಾಪತಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಸವರಾಜ ಹೊರಟ್ಟಿಯರು ಅವಿರೋಧವಾಗಿ ಆಯ್ಕೆಯಾಗಿರುವುದು ಸಂತಸ ತಂದಿದೆ ಎಂದು ಇದೆ ವೇಳೆ ಸಿಎಂ ಬೊಮ್ಮಾಯಿ ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆ ಸಚಿವ‌ರು ಹಾಗೂ ವಿಧಾನ ಪರಿಷತ್ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ಬಸವರಾಜ ಎಸ್ ಹೊರಟ್ಟಿ ಅವರು ಮೂರನೇ ಬಾರಿ ವಿಧಾನ ಪರಿಷತ್ ಸಭಾಪತಿ, 8 ಬಾರಿ ಸದಸ್ಯರಾಗಿದ್ದಾರೆ. ರಾಜಕೀಯ ಸಾಧನೆ ರೋಚಕ ಹಾಗೂ ಸ್ಫೂರ್ತಿದಾಯಕ. ಪ್ರಜಾಪ್ರಭುತ್ವ ಬೇರು ಗಟ್ಟಿಯಾಗಿಸಲು ನಿರಂತರ ಪ್ರಯತ್ನ, ಆಳವಾದ ಅಧ್ಯಯನ ಅಗತ್ಯ. ಸದನದ ಕಾರ್ಯಕಲಾಪ ಉತ್ತಮವಾಗಿ ಜರುಗಲಿ. ಪ್ರಜಾಪ್ರಭುತ್ವದಲ್ಲಿ ವಿರೋಧ ಟೀಕೆ ಟಿಪ್ಪಣಿಗಳನ್ನು ಸಹಿಸಿಕೊಳ್ಳವ ಮನಸ್ಥಿತಿ ಆಡಳಿತ ಪಕ್ಷಗಳು ರೂಢಿಸಿಕೊಳ್ಳಬೇಕು ಎಂದರು.

ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಬಿ.ಕೆ. ಹರಿಪ್ರಸಾದ್ ಮಾತನಾಡಿ, ಸಂವಿಧಾನದ ನಿಯಮಾವಳಿಯನ್ನು ಓದಿ ತಿಳಿದು ಪೀಠವನ್ನು ಪಕ್ಷಾತೀತವಾಗಿ ನಡೆಸಿ, ಉತ್ತಮ ಚರ್ಚೆಗೆ ಮಧ್ಯಸ್ಥಿಕೆ ಮುಖ್ಯ ಎಂಬುದನ್ನು ಹೊರಟ್ಟಿಯವರು ತೋರಿಸಿಕೊಟ್ಟವರು ಎಂದರು. ರಘುನಾಥ ಮಲ್ಕಾಪೂರೆ ಅವರು ಸಹ ಉತ್ತಮವಾಗಿ ಸದನ ನಡೆಸಿದರು ಎಂದು ತಿಳಿಸಿದರು.

ಸದಸ್ಯರಾದ ಎಚ್. ವಿಶ್ವನಾಥ  ಮಾತನಾಡಿ, ಸದನದ ಸದಸ್ಯರ ಹಕ್ಕುಗಳನ್ನು ಎತ್ತಿ ಹಿಡಿಯುವ ಕಾರ್ಯ ಮಾಡಿ ಎಂದು ಆಶಿಸಿದರು.

ಎಸ್.ಎಲ್. ಭೋಜಗೌಡ ಅವರು ಮಾತನಾಡಿ, ತಮ್ಮ ಹಿರಿತನ, ಅನುಭವದಿಂದ ಸದನವನ್ನು ಉತ್ತಮವಾಗಿ ನಡೆಸಿ ಚಿಂತಕರ ಚಾವಡಿಯ ಗೌರವ ಕಾಪಾಡಿದ್ದೀರಿ ಎಂದು ತಿಳಿಸಿದರು.

ಸದಸ್ಯ ಮರಿತಿಬ್ಬೆಗೌಡ ಮಾತನಾಡಿ, ಸಭಾಪತಿಯಾಗಿ ಮೂರು ಭಾರಿ, ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯಾಗಿ ಎಂಟು ಬಾರಿ ಆಯ್ಕೆಯಾಗಿ ಮಾಡಿದ ಸಾಧನೆ ಮತ್ತು ಅನುಭವದೊಂದಿಗೆ ಸಾಧನೆ ನಡೆಸಿ ಸದನದ ಘನತೆ ಗೌರವವನ್ನು  ಎತ್ತಿ ಹಿಡಿದಿದ್ದೀರಿ ಎಂದು ತಿಳಿಸಿದರು.

ಸದಸ್ಯೆ ತೇಜಸ್ವಿನಿ ಗೌಡ ಮಾತನಾಡಿ, ಆತ್ಮವಂಚನೆಯ ಮಾತುಗಳನ್ನು ತಾವೆಂದೂ ಆಡಿಲ್ಲ. ಪತ್ರಕರ್ತೆಯಾಗಿ ಹೊರಗಿನಿಂದ ಮತ್ತು ರಾಜಕಾರಣಿಯಾಗಿ ಒಳಗಿನಿಂದ ನಾನು ನಿಮಗೆ ನೋಡಿದ್ದೇನೆ. ಉತ್ತರ ಕರ್ನಾಟಕದ ಅದೇ ಬಾಂಧವ್ಯ, ಅದೇ ಭಾಷೆ, ಅದೇ ಸರಳತೆ ಮತ್ತು ಅದೇ ಬದ್ಧತೆಯನ್ನು ತಾವು ಸದಾಕಾಲ ಉಳಿಸಿಕೊಂಡು ಬಂದಿರುವುದು ತಮ್ಮ ವಿಶೇಷತೆ ಎಂದು ತಿಳಿಸಿದರು.

ಆಯನೂರ ಮಂಜುನಾಥ ಮಾತನಾಡಿ, ದೇಶದ ಪ್ರಜಾತಂತ್ರದ ತೊಟ್ಟಿಲಾಗಿ ವಿಧಾನ ಪರಿಷತ್ ಕಾರ್ಯ ನಿರ್ವಹಿಸಿದೆ. ಮೈಸೂರಿನ ಒಡೆಯರಿಗೆ ಸಲಹಾ ಸಮಿತಿ ರೀತಿಯಲ್ಲಿ ನಿರ್ಮಾಣಗೊಂಡ ಪರಿಷತ್ತಿಗೆ ತಾವು ಸಭಾಪತಿಯಾಗಿರುವುದು ನಿಜಕ್ಕೂ ಬಹುದೊಡ್ಡ ಸಾಧನೆಯಾಗಿದೆ ಎಂದರು.

ಸದಸ್ಯ ಎ.ನಾರಾಯಣಸ್ವಾಮಿ ಮಾತನಾಡಿ, ಅನುಭವ ಪರಿಣತಿ ಮತ್ತ ಮುತ್ಸದ್ಧಿತನವು ಈ ಸದನದ ಗೌರವ ಹೆಚ್ಚಿಸುತ್ತದೆ ಎಂದರು.

ಪರಿಷತ್ ಸದಸ್ಯರಾದ ಲಕ್ಷ್ಮಣ ಸವದಿ, ಪ್ರತಾಪ್ ಸಿಂಹ ನಾಯಕ್, ರವಿಕುಮಾರ್, ಪ್ರಕಾಶ್ ರಾಥೋಡ್ ಸೇರಿದಂತೆ ಇತರೆ ಸದಸ್ಯರು ಮಾತನಾಡಿದರು.

ಕಂದಾಯ ಸಚಿವ ಆರ್.ಅಶೋಕ್, ವಸತಿ ಸಚಿವ ವಿ.ಸೋಮಣ್ಣ, ಉನ್ನತ ಶಿಕ್ಷಣ, ಐಟಿ ಬಿಟಿ, ಕೌಶಲಾಭಿವೃದ್ಧಿ ಸಚಿವ ಡಾ.ಅಶ್ವತ್ ನಾರಾಯಣ, ಆರೋಗ್ಯ ಸಚಿವ ಡಾ.ಸುಧಾಕರ್, ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ. ಪಾಟೀಲ್, ಶಿಕ್ಷಣ ಸಚಿವ ಬಿ.ಎಲ್.ನಾಗೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವ ಆಚಾರ್ ಹಾಲಪ್ಪ, ಪ್ರವಾಸೋದ್ಯಮ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಆನಂದ ಸಿಂಗ್, ಪಶುಪಾಲನೆ ಹಾಗೂ ಪಶುವೈದ್ಯ ಇಲಾಖೆ ಸಚಿವ ಪ್ರಭು ಚವ್ಹಾಣ್, ಕಾರ್ಮಿಕ ಸಚಿವ ಅರೆಬೈಲು ಶಿವರಾಮ ಹೆಬ್ಬಾರ್, ಅಲ್ಪಸಂಖ್ಯಾತರ ಕಲ್ಯಾಣ, ಮುಜರಾಯಿ ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಬಸವರಾಜ ಎಸ್ ಹೊರಟ್ಟಿ ಕುಟುಂಬದ ಸದಸ್ಯರು ವೀಕ್ಷಕರ ಗ್ಯಾಲರಿಯಿಂದ ಸಭಾಪತಿ ಆಯ್ಕೆಯ ಕ್ಷಣಕ್ಕೆ ಸಾಕ್ಷಿಯಾದರು.



Join Whatsapp