ಗಾಜಿಯಾಬಾದ್: ತೀವ್ರ ಚಳಿ ಗಾಳಿ ಮತ್ತು ಮಂಜು ಮುಸುಕಿರುವುದರಿಂದ ಬೆಳಿಗ್ಗೆ ಮಕ್ಕಳಿಗೆ ಶಾಲೆಗೆ ಹೋಗಲು ಬಹಳ ಕಷ್ಟವಾಗುವುದನ್ನು ಪರಿಗಣಿಸಿ ಗಾಜಿಯಾಬಾದ್ ಜಿಲ್ಲಾಡಳಿತವು ಶಾಲಾ ಸಮಯವನ್ನು ಬದಲಾಯಿಸಿದೆ.
ದೆಹಲಿ ಮತ್ತು ಅದರ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರೀ ಚಳಿಯ ಜೊತೆಗೆ ಮಂಜು ಮುಸುಕಿರುವುದರಿಂದ ಜನರು ತುಂಬ ಕಷ್ಟಕ್ಕೀಡಾಗಿದ್ದಾರೆ. ಕಳೆದ ಎರಡು ದಿನಗಳಿಂದ ಈ ಕಾರಣದಿಂದಾಗಿಯೇ ಕೆಲವು ಅಪಘಾತಗಳು ವರದಿಯಾಗಿವೆ. ಇದನ್ನರಿತ ಗಾಜಿಯಾಬಾದ್ ಜಿಲ್ಲಾಡಳಿತವು 1ರಿಂದ 12ನೇ ತರಗತಿವರೆಗಿನ ಶಾಲಾ ಸಮಯ ಬದಲಾಯಿಸಿ ಪೋಷಕರು ನಿಟ್ಟುಸಿರು ಬಿಡುವಂತೆ ಮಾಡಿದೆ.
ಈ ನಿಟ್ಟಿನಲ್ಲಿ ಗಾಜಿಯಾಬಾದ್ ಜಿಲ್ಲಾಧಿಕಾರಿ ಸೂಚನೆಗಳನ್ನುನೀಡಿದ್ದಾರೆ. ಸೆಕೆಂಡರಿ ಎಜುಕೇಶನ್ ಕೌನ್ಸಿಲ್’ಗೆ ಒಳಪಟ್ಟ ಸೆಕೆಂಡರಿ ಶಾಲೆಗಳು, ಸಿಬಿಎಸ್’ಇ+ ಐಸಿಎಸ್’ಇ ಶಾಲೆಗಳು, ಮದ್ರಸಾ ಎಜುಕೇಶನ್ ಮಂಡಳಿ, ಸಂಸ್ಕೃತ ಶಾಲೆ ಇವೆಲ್ಲದಕ್ಕೂ ಇದು ಅನ್ವಯಿಸುತ್ತದೆ.
ಶಾಲೆಗಳು ಬೆಳಿಗ್ಗೆ 9ರ ಬಳಿಕವೇ ತೆರೆಯಬೇಕು. ಮುಂಜಾನೆ ಮಂಜು ಮುಸುಕಿದ ಚಳಿಯ ವಾತಾವರಣದಲ್ಲಿ ಮಕ್ಕಳು ಶಾಲೆಗೆ ಹೋಗುವುದು ಕಷ್ಟ. ಮುಂಜಾನೆಯ ಮಂಜು ಕವಿದ ವಾತಾವರಣದಲ್ಲಿ ಹೆಚ್ಚಿನ ಅಪಘಾತಗಳು ವರದಿಯಾದ ಕಾರಣಕ್ಕೆ ಗೌತಮ ಬುದ್ಧ ನಗರ ಜಿಲ್ಲಾಡಳಿತವೂ ಕೂಡಾ ಶಾಲಾ ಸಮಯವನ್ನು ಬದಲಿಸಿದೆ. ಅದಕ್ಕೆ ತಕ್ಕಂತೆ ನೋಯ್ಡಾ ಬಸ್ ನಿಲ್ದಾಣದಲ್ಲಿ ಬಸ್ಸುಗಳ ಓಡಾಟದ ಸಮಯವನ್ನು ಕೂಡ ಬದಲಿಸಲಾಗಿದೆ.
ಇಂದಿನಿಂದ ಬಸ್ಸುಗಳು ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 7 ಗಂಟೆಗಳ ನಡುವೆ ಓಡಾಡುವುದಿಲ್ಲ. ಆ ಕಾರಣಕ್ಕೆ ರಾತ್ರಿ ಬಸ್ಸುಗಳಿಗಾಗಿ ಆನ್’ಲೈನ್ ರಿಸರ್ವೇಶನ್ ಮಾಡುವುದನ್ನು ಒಂದು ತಿಂಗಳ ಕಾಲಕ್ಕೆ ನಿಲ್ಲಿಸಲಾಗಿದೆ.
ರಾಜಧಾನಿ ದೆಹಲಿ ಮತ್ತು ಹತ್ತಿರದ ಪ್ರದೇಶಗಳನ್ನು ಚಳಿ ನಡುಗಿಸುತ್ತಿದೆ. ಈ ಕಾರಣಕ್ಕೆ ರಸ್ತೆಯಲ್ಲಿ ವಾಹನಗಳ ವೇಗಕ್ಕೆ ಕೂಡ ಮಿತಿ ಬಿದ್ದಿದೆ. ಮುಖ್ಯವಾಗಿ ಯುಮುನಾ ಪ್ರದೇಶದಲ್ಲಿ ಮಂಜು ಕವಿದ ವಾತಾವರಣ ಅದೂ ರಾತ್ರಿಯಲ್ಲಿ ತೀವ್ರವಾಗಿದೆ.
5 ಮೀಟರ್ ಆಚೀಚೆ ಏನಿದೆ ಎಂಬುದನ್ನು ಜನರು ತಿಳಿಯಲು ಒದ್ದಾಡುವ ಸ್ಥಿತಿ ಇದೆ. ರಾತ್ರಿ ವೇಳೆ ಉತ್ತರ ದಿಲ್ಲಿಯ ವಾಜಿಯಾಬಾದ್’ನಲ್ಲಿ ಇದೇ ಪರಿಸ್ಥಿತಿ ಇದೆ. ಜನರು ಅವರ ಎದುರಿಗೇ ವಾಹನ ಬರುವವರೆಗೆ ಗುರುತಿಸಲಾಗುವುದಿಲ್ಲ. ವಾಹನ ಚಾಲಕರು ತೀರಾ ಕಡಿಮೆ ವೇಗದಲ್ಲಿ ಹೋಗುವುದು ಅನಿವಾರ್ಯ. ವಾಹನಗಳ ದೀಪ ಮತ್ತು ಇಂಡಿಕೇಟರ್’ಗಳು ಕೆಲಸ ಮಾಡುತ್ತಲೇ ಇರಬೇಕು. ಇತರ ವಾಹನಗಳವರು ಗ್ರಹಿಸಲು ಇದು ಅನಿವಾರ್ಯ.
ದೆಹಲಿಯಲ್ಲಿ ಕಳೆದೆರಡು ದಿನಗಳಿಂದ ಭಾರೀ ಚಳಿ ಆರಂಭವಾಗಿದೆ. ಇದು ಆರಂಭ, ಮುಂದಿನದು ನೆತ್ತರು ಹೆಪ್ಪು ಗಟ್ಟಿಸುವ ಚಳಿಗಾಲ ಎಂದೇ ನಿರೀಕ್ಷಿಸಲಾಗಿದೆ.