ಉಡುಪಿ : ಐದು ವರ್ಷಗಳ ಹಿಂದೆ ಹಣದ ವಿಷಯದಲ್ಲಿ ಕ್ಷುಲ್ಲಕ ಕಾರಣದಿಂದ ಸ್ನೇಹಿತನನ್ನು ಕೊಲೆಗೈದ ಪ್ರಕರಣದ ಆರೋಪಿಗೆ ಜೀವಾವಧಿ ಶಿಕ್ಷೆ ಮತ್ತು 50 ಸಾವಿರ ರೂ., ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಾಂತವೀರ ಶಿವಪ್ಪ ತೀರ್ಪು ನೀಡಿದ್ದಾರೆ. ಬ್ರಹ್ಮಾವರ ತಾಲೂಕಿನ ಆರೂರು ನಿವಾಸಿ ಪ್ರಶಾಂತ್ ಅಲಿಯಾಸ್ ಪಚ್ಚು ಅಲಿಯಾಸ್ ಮಣಿ (31) ಶಿಕ್ಷೆಗೊಳಗಾದ ಆರೋಪಿ.
2017ರ ಮಾ.1 ರಂದು ಬೆಳಗ್ಗೆ 9.30ಕ್ಕೆ ಬ್ರಹ್ಮಾವರ ತಾಲೂಕಿನ ಚೇರ್ಕಾಡಿ ಗ್ರಾಮದ ಪೇತ್ರಿಯಲ್ಲಿ ಆರೋಪಿ ಪ್ರಶಾಂತ್ ಖರ್ಚಿಗಾಗಿ ಹಣವನ್ನು ಕೇಳಿದಾಗ ಪ್ರಕಾಶ್ ನಾಯ್ಕ (38) ನಿರಾಕರಿಸಿದ್ದರು. ಈ ವೇಳೆ ಉದ್ರಿಕ್ತಗೊಂಡಿದ್ದ ಪ್ರಶಾಂತ್ ಚೂರಿಯಿಂದ ಇರಿದು ಪ್ರಕಾಶ್ ಅವರನ್ನು ಕೊಲೆ ಮಾಡಿದ್ದನು. ಪ್ರಕಾಶ್ ನಾಯ್ಕ ಶಿವಮೊಗ್ಗದ ಹೊಟೇಲ್ನಲ್ಲಿ ಕೆಲಸ ಮಾಡಿಕೊಂಡಿದ್ದರು. ಆಗಾಗ್ಗೆ ಊರಿಗೆ ಬಂದು ಹೋಗುತ್ತಿದ್ದರು. ಪ್ರಶಾಂತ್ ಊರಿನಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದು, ಇಬ್ಬರು ಹಲವು ವರ್ಷಗಳಿಂದ ಗೆಳೆಯರಾಗಿದ್ದರು.
ಪ್ರಕಾಶ್ ನಾಯ್ಕ ಅವರ ಪತ್ನಿ ಬ್ರಹ್ಮಾವರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ಕೈಗೆತ್ತಿಕೊಂಡ ಅಂದಿನ ಡಿವೈಎಸ್ಪಿ ಕುಮಾರಸ್ವಾಮಿ ತನಿಖೆ ನಡೆಸಿ 2017 ಮೇ27ರಂದು ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಕರಣಲ್ಲಿ ಒಟ್ಟು 34 ಸಾಕ್ಷಿಗಳ ಪೈಕಿ, 2 ಪ್ರತ್ಯಕ್ಷ ಸಾಕ್ಷಿಗಳನ್ನು ಒಳಗೊಂಡಂತೆ ಒಟ್ಟು 12 ಸಾಕ್ಷಿಗಳ ವಿಚಾರಣೆ ನಡೆಸಲಾಗಿದೆ. ಪ್ರಾಸಿಕ್ಯೂಷನ್ ಪರ ಹಿರಿಯ ಸರಕಾರಿ ಅಭಿಯೋಜಕಿ ಶಾಂತಿಬಾಯಿ ವಾದ ಮಂಡಿಸಿದ್ದರು. ಅಪರಾಧಿಗೆ ಕೊಲೆ ಪ್ರಕರಣದ ಅಡಿಯಲ್ಲಿ ಜೀವಾವಧಿ ಶಿಕ್ಷೆ, 50 ಸಾವಿರ ರೂ. ದಂಡ ಮತ್ತು ಎಸ್ಟಿ ದೌರ್ಜನ್ಯ ಕಾಯ್ದೆಯಡಿ 3 ವರ್ಷ ಕಾರಾಗೃಹ, 10 ಸಾವಿರ ರೂ. ದಂಡ ವಿಧಿಸಿ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.