22ನೇ ಆವೃತ್ತಿಯ ಫಿಫಾ ವಿಶ್ವಕಪ್ ಟೂರ್ನಿಯ ಫೈನಲ್ ಹಣಾಹಣಿಯಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ ಹಾಲಿ ಚಾಂಪಿಯನ್ ಫ್ರಾನ್ಸ್ ತಂಡವನ್ನು ಮಣಿಸಿದ ಅರ್ಜೆಂಟಿನಾ, 36 ವರ್ಷಗಳ ಬಳಿಕ ಚಾಂಪಿಯನ್ ಪಟ್ಟವನ್ನೇರಿ ಸಂಭ್ರಮಿಸಿದೆ.
ಲಿಯೋನೆಲ್ ಮೆಸ್ಸಿ ಮ್ಯಾಜಿಕ್ ಬಲದ ಬೆನ್ನೇರಿ ಅರ್ಜೆಂಟಿನಾ ತಂಡವು ಚಾಂಪಿಯನ್ ಆಗಿದ್ದರೂ ಸಹ, ನಿಣಾಯಕ ಘಟ್ಟದಲ್ಲಿ ತಂಡದ ಪಾಲಿಗೆ ರಕ್ಷಕನ ಪಾತ್ರ ನಿರ್ವಹಿಸಿದ್ದು ಗೋಲ್‌ಕೀಪರ್ ಎಮಿಲಿಯಾನೊ ಮಾರ್ಟಿನೆಝ್.
ನಿಗದಿತ ಮತ್ತು ಹೆಚ್ಚುವರಿ ಅವಧಿ ಪೂರ್ಣಗೊಂಡ ಬಳಿಕವೂ ಫೈನಲ್ ಪಂದ್ಯ ಸಮಬಲದಲ್ಲೇ ಕೊನೆಗೊಂಡಿತ್ತು. ವಿಜೇತರ ನಿರ್ಣಯಕ್ಕೆ ನೀಡಲಾದ ಪೆನಾಲ್ಟಿ ಶೂಟೌಟ್‌ನಲ್ಲಿ, ಫ್ರಾನ್ಸ್‌ನ ಕಿಂಗ್‌ಸ್ಲೆ ಕೂಮನ್ ಪ್ರಯತ್ನವನ್ನು ಯಶಸ್ವಿಯಾಗಿ ತಡೆಹಿಡಿದ ಮಾರ್ಟಿನೆಝ್ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದರು. ಇದಕ್ಕೂ ಮೊದಲು, ಹೆಚ್ಚುವರಿ ಅವಧಿಯ ಕೊನೆಯ ಕ್ಷಣದಲ್ಲಿ ಫ್ರಾನ್ಸ್‌ನ ಕೊಲೊಮನಿಯ ರಭಸದ ಹೊಡೆತವನ್ನು ಅಮೋಘವಾಗಿ ಕಾಲಿನಿಂದ ತಡೆದ ಮಾರ್ಟಿನೆಝ್, ಫ್ರಾನ್ಸ್ ಗೆಲುವಿನ ಗೋಲಿಗೆ ತಡೆಯಾಗಿದ್ದರು.
ಟೂರ್ನಿಯುದ್ಧಕ್ಕೂ ಅಮೋಘ ಸೇವ್‌ಗಳ ಮೂಲಕ ಗಮನ ಸೆಳೆದ ಮಾರ್ಟಿನೆಝ್, ಅರ್ಹವಾಗಿಯೇ ಗೋಲ್ಡನ್ ಗ್ಲೋವ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು.
ಕ್ವಾರ್ಟರ್ ಫೈನಲ್‌ನಲ್ಲೂ ಮಾರ್ಟಿನೆಝ್ ಹೀರೋ !
ಲುಸೈಲ್ ಸ್ಟೇಡಿಯಂನಲ್ಲೇ ನಡೆದಿದ್ದ ಅರ್ಜೆಂಟಿನಾ-ನೆದರ್‌ಲ್ಯಾಂಡ್ಸ್ ತಂಡಗಳ ನಡುವಿನ ಕ್ವಾರ್ಟರ್ ಫೈನಲ್ ಮುಖಾಮುಖಿಯಲ್ಲೂ, ಮಾರ್ಟಿನೆಝ್ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದ್ದರು.
ಪೂರ್ಣಾವಧಿಯಲ್ಲಿ ಸಮಬಲಗೊಂಡ ಬಳಿಕ, ಪೆನಾಲ್ಟಿ ಶೂಟೌಟ್ ವೇಳೆ ನೆದರ್‌ಲ್ಯಾಂಡ್ಸ್‌ನ ಮೊದಲ ಎರಡು ಪ್ರಯತ್ನಗಳನು ಯಶಸ್ವಿಯಾಗಿ ತಡೆಹಿಡಿದಿದ್ದ ಗೋಲ್‌ಕೀಪರ್ ಎಮಿಲಿಯಾನೊ ಮಾರ್ಟಿನೆಝ್, ಅರ್ಜೆಂಟಿನಾ ತಂಡ ಸೆಮಿಫೈನಲ್ ತಲುಪುವಂತೆ ಮಾಡಿದ್ದರು