ಹುಬ್ಬಳ್ಳಿ: ‘ಪಕ್ಷದ ತೀರ್ಮಾನವೇ ಅಂತಿಮವಾಗಿದ್ದು, ಯಾರೂ ಷರತ್ತು ಹಾಕುವಂತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
‘ನಾನು ಪಕ್ಷದ ಅಧ್ಯಕ್ಷನಾಗಿದ್ದರೂ ಎಲ್ಲಾ ವಿಷಯಗಳನ್ನು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಪಕ್ಷದ ಕಾರ್ಯಾಧ್ಯಕ್ಷರು ಸೇರಿದಂತೆ ವಿವಿಧ ಪದಾಧಿಕಾರಿಗಳ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳುವೆ. ಪಕ್ಷದ ತೀರ್ಮಾನವೇ ಅಂತಿಮವಾಗಿದ್ದು, ಯಾರೂ ಷರತ್ತು ಹಾಕುವಂತಿಲ್ಲ’ ಎಂದು ಅವರು ಹೇಳಿದ್ದಾರೆ.
ನಗರದ ವಿಮಾನ ನಿಲ್ದಾಣದಲ್ಲಿ ಭಾನುವಾರ, ‘ಬಸ್ ಯಾತ್ರೆಗೆ ಸಿದ್ದರಾಮಯ್ಯ ಅವರು ಕೆಲ ಷರತ್ತು ಹಾಕಿದ್ದಾರಂತಲ್ಲ’ ಎಂಬ ಸುದ್ದಿಗಾರರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.
‘ಬಸ್ ಯಾತ್ರೆಗೂ ಮುಂಚೆ ಡಿ. 30ರಂದು ಕೃಷ್ಣಾ ನದಿ ನೀರು ಹಂಚಿಕೆ ವಿಚಾರದ ಕುರಿತು ವಿಜಯಪುರದಲ್ಲಿ ಸಭೆ ಹಾಗೂ ಕಾರ್ಯಕ್ರಮ ರೂಪಿಸಲಾಗಿದೆ. ಮಹದಾಯಿ ವಿಚಾರ ಕುರಿತು ಜ. 2ರಂದು ಹುಬ್ಬಳ್ಳಿಯಲ್ಲಿ ಹಾಗೂ ಜ. 8ರಂದು ಎಸ್‌ಸಿ ಮತ್ತು ಎಸ್‌ಟಿ ಸಮುದಾಯಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಚಿತ್ರದುರ್ಗದಲ್ಲಿ ಸಭೆ ನಡೆಸಲಾಗುವುದು’ ಎಂದರು.
ಚುನಾವಣೆಯಲ್ಲಿ ಗೆಲ್ಲುವುದಷ್ಟೇ ನಮಗೆ ಮುಖ್ಯ. ಅಂತಹವರಿಗೆ ಮಾತ್ರ ಟಿಕೆಟ್ ಕೊಡುತ್ತೇವೆ. ಈ ಬಗ್ಗೆ ಎಐಸಿಸಿ ತೀರ್ಮಾನ ಕೈಗೊಳ್ಳುತ್ತದೆ. ಹಲವರು ಕಷ್ಟಕಾಲದಲ್ಲಿ ಗೆದ್ದು, ಕ್ಷೇತ್ರವನ್ನು ಉಳಿಸಿಕೊಂಡಿದ್ದಾರೆ. ಅವರ ಬಗ್ಗೆ ಅಭಿಪ್ರಾಯ ಸಂಗ್ರಹಿಸಿ ಟಿಕೆಟ್ ನೀಡಲಾಗುವುದು’ ಎಂದು ಡಿಕೆಶಿ ಹೇಳಿದರು.