ಫಿಫಾ ವಿಶ್ವಕಪ್| ಚಾಂಪಿಯನ್ ಪಟ್ಟ ಅಲಂಕರಿಸಿದ ಅರ್ಜೆಂಟೀನಾ

Prasthutha|

►ಕಾಲ್ಚೆಂಡಾಟದಲ್ಲಿ ಯುರೋಪಿನ ಪ್ರಾಬಲ್ಯವನ್ನು ಕೊನೆಗೊಳಿಸಿದ ಮೆಸ್ಸಿ ಬಳಗ

- Advertisement -

ದೋಹಾ: ಲುಸೈಲ್ ಸ್ಟೇಡಿಯಂನಲ್ಲಿ ನಡೆದ ಭಾರೀ ಜಿದ್ದಾಜಿದ್ದಿನ ಹೋರಾಟದಲ್ಲಿ ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡವು ಕಿಲಿಯನ್‌ ಎಂಬಾಪೆ ನಾಯಕತ್ವದ ಹಾಲಿ ಚಾಂಪಿಯನ್ ಫ್ರಾನ್ಸ್ ತಂಡವನ್ನು ಮಣಿಸಿ ವಿಶ್ವ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ.


ಮೆಸ್ಸಿ ಪಡೆ ಚಾಂಪಿಯನ್ ಪಟ್ಟವನ್ನು ಅಲಂಕರಿಸುವ ಮೂಲಕ 36 ವರ್ಷಗಳ ನಂತರ ಅರ್ಜೆಂಟೀನಾ ತಂಡವು ವಿಶ್ವ ಚಾಂಪಿಯನ್ ಆಗಿ ಇತಿಹಾಸ ಬರೆದಿದೆ. 1986 ರಲ್ಲಿ ಡಿಯಾಗೋ ಮರೋಡಾನಾ ನಾಯಕತ್ವದಲ್ಲಿ ವಿಶ್ವಕಪ್ ಗೆದ್ದ ಬಳಿಕ ಅರ್ಜೆಂಟೀನಾ ವಿಶ್ವ ಚಾಂಪಿಯನ್ ಆಗಲು ಸಾಧ್ಯವಾಗಿಲ್ಲ. ಹಲವು ಬಾರಿ ಅರ್ಜೆಂಟೀನಾ ಫೈನಲ್ ಆಡಿತ್ತಾದರೂ ಪ್ರಶಸ್ತಿ ಗೆಲ್ಲಲಾಗಲಿಲ್ಲ. 1990ರಲ್ಲಿಯೂ ಅರ್ಜೆಂಟೀನಾ ಸತತ ಎರಡನೇ ಬಾರಿಗೆ ಫೈನಲ್ ತಲುಪಿದ್ದರೂ ರನ್ನರ್ ಅಪ್ ಆಗಿ ತೃಪ್ತಿಪಡಬೇಕಾಯಿತು. ಇದೀಗ ಈ ವರ್ಷ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

- Advertisement -

ಅರ್ಜೆಂಟೀನಾ 1978ರಲ್ಲಿ ಡೇನಿಯಲ್ ಪಸರೆಲ್ಲಾ ನಾಯಕತ್ವದಲ್ಲಿ ಮತ್ತು 1986 ರಲ್ಲಿ ಡಿಯಾಗೋ ಮರೋಡಾನಾ ಸಾರಥ್ಯದಲ್ಲಿ ಎರಡು ಬಾರಿ ವಿಶ್ವಕಪ್ ಗೆದ್ದಿತ್ತು. ಈ ಗೆಲುವಿನೊಂದಿಗೆ ಅರ್ಜೆಂಟೀನಾದ 2 ವಿಶ್ವಕಪ್ ವಿಜೇತ ನಾಯಕರಾದ ಡೇನಿಯಲ್ ಪಸರೆಲ್ಲಾ ಮತ್ತು ಡಿಯಾಗೋ ಮರೋಡಾನಾ ಅವರ ಕ್ಲಬ್ಗೆ ಲಿಯೋನೆಲ್ ಮೆಸ್ಸಿ ಕೂಡಾ ಸೇರಿಕೊಂಡಿದ್ದಾರೆ.

ಇದಕ್ಕೂ ಮೊದಲು ಬ್ರೆಜಿಲ್ ಅತಿ ಹೆಚ್ಚು 5 ಬಾರಿ ಪ್ರಶಸ್ತಿ ಗೆದ್ದಿದ್ದು, ಜರ್ಮನಿ ಮತ್ತು ಇಟಲಿ ತಂಡಗಳು ತಲಾ 4 ಬಾರಿ ಚಾಂಪಿಯನ್ ಆಗಿವೆ. ಅರ್ಜೆಂಟೀನಾ 3 ಬಾರಿ ವಿಶ್ವಕಪ್ ಗೆಲ್ಲುವ ಮೂಲಕ ನಾಲ್ಕನೇ ತಂಡವಾಗಿ ಇತಿಹಾಸ ಬರೆದಿದೆ.

ಈ ಗೆಲುವಿನೊಂದಿಗೆ ಅರ್ಜೆಂಟೀನಾ ವಿಶ್ವಕಪ್ ನಲ್ಲಿ ಯುರೋಪಿನ ಪ್ರಾಬಲ್ಯವನ್ನು ಕೊನೆಗೊಳಿಸಿದೆ. ಕಳೆದ ನಾಲ್ಕು ವಿಶ್ವಕಪ್ ಗಳಲ್ಲಿ ಯುರೋಪಿಯನ್ ದೇಶಗಳೇ ಚಾಂಪಿಯನ್ ಪಟ್ಟಕ್ಕೇರಿತ್ತು. 2006 ರಲ್ಲಿ ಇಟಲಿ, 2010 ರಲ್ಲಿ ಸ್ಪೇನ್, 2014 ರಲ್ಲಿ ಜರ್ಮನಿ ಮತ್ತು 2018 ರಲ್ಲಿ ಫ್ರಾನ್ಸ್ ತಂಡಗಳು ಚಾಂಪಿಯನ್ ಆಗಿತ್ತು. ಅರ್ಜೆಂಟೀನಾ ತಂಡವು 2002 ರಲ್ಲಿ ಬ್ರೆಜಿಲ್ ಚಾಂಪಿಯನ್ ಆದ ನಂತರ ವಿಶ್ವಕಪ್ ಗೆದ್ದ ಮೊದಲ ದಕ್ಷಿಣ ಅಮೆರಿಕಾದ ತಂಡವಾಗಿ ಹೊರಹೊಮ್ಮಿದೆ.

ಫ್ರಾನ್ಸ್ ತಂಡವು ಇತಿಹಾಸದಲ್ಲಿ ಎರಡನೇ ಬಾರಿಗೆ ರನ್ನರ್ ಅಪ್ ಆಗಿದೆ. ಇದಕ್ಕೂ ಮೊದಲು, ಫ್ರಾನ್ಸ್ 2006 ರಲ್ಲಿ ರನ್ನರ್ ಅಪ್ ಆಗಿತ್ತು, ಅಲ್ಲಿ ಇಟಲಿ ತಂಡ ಪೆನಾಲ್ಟಿಯಲ್ಲಿ 3-5 ಗೋಲುಗಳ ಅಂತರದಿಂದ ವಿಶ್ವಕಪ್ ಎತ್ತಿಹಿಡಿದಿತ್ತು.



Join Whatsapp