ಹಫ್ತಾ ನೀಡದ್ದಕ್ಕೆ ಮೀನಿನ ಅಂಗಡಿ ಸಿಬ್ಬಂದಿ ಮೇಲೆ ಲಾಂಗ್ ಬೀಸಿದ ರೌಡಿ ಸೆರೆ

Prasthutha|

- Advertisement -

ಬೆಂಗಳೂರು: ಹಫ್ತಾ ನೀಡಲಿಲ್ಲ ಎನ್ನುವ ಕಾರಣಕ್ಕೆ ರೌಡಿಯೊಬ್ಬ ಮೀನಿನ ಅಂಗಡಿ ಸಿಬ್ಬಂದಿ ಮೇಲೆ ಲಾಂಗ್ ಬೀಸಿದ ಘಟನೆ ಬಾಣಸವಾಡಿಯ ಜೈ ಭಾರತ್ ನಗರದಲ್ಲಿ ನಿನ್ನೆ ರಾತ್ರಿ ನಡೆದಿದೆ.

ರೌಡಿ ಸುಜೀತ್ ನಿನ್ನೆ ರಾತ್ರಿ ಬಾಣಸವಾಡಿಯ ಜೈ ಭಾರತ್ ನಗರದಲ್ಲಿರುವ ಮೀನಿನ ಅಂಗಡಿ ಬಳಿ ಬಂದು ಹಫ್ತಾ ಕೇಳಿದ್ದಾನೆ. ಈ ವೇಳೆ ಮೀನಿನ ಅಂಗಡಿ ಸಿಬ್ಬಂದಿ ಹಪ್ತಾ ಕೊಡಲು ನಿರಾಕರಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಸುಜೀತ್ ಲಾಂಗ್ ಬೀಸಿ ಪುಂಡಾಟ ಮೆರೆದಿದ್ದಾನೆ.
ಘಟನೆಯ ಬಳಿಕ ಬಾಣಸವಾಡಿ ಪೊಲೀಸರು ಆರೋಪಿ ಫ್ರೇಜರ್ ಟೌನ್ ನಿವಾಸಿ ಸುಜೀತ್‍ ನನ್ನು ಬಂಧಿಸಿದ್ದಾರೆ.

- Advertisement -

ವಿಚಾರಣೆ ವೇಳೆ ಮೀನಿನ ಅಂಗಡಿ ಮಾಲೀಕ ಮತ್ತು ಸುಜೀತ್ ನಡುವೆ ಹಣದ ವಿಚಾರಕ್ಕೆ ಗಲಾಟೆ ನಡೆದಿತ್ತು. ಹಾಗಾಗಿ ನಿನ್ನೆ ಸುಜೀತ್ ತಲ್ವಾರ್ ಹಿಡಿದು ಅಂಗಡಿಯಲ್ಲಿದ್ದ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿರುವ ಬಗ್ಗೆ ಪೊಲೀಸ್ ತನಿಖೆ ವೇಳೆ ತಿಳಿದುಬಂದಿದೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡಿರುವ ಸದಾಶಿವ ಫಿಶ್ ಅಂಗಡಿ ಮಾಲೀಕ ಮನೋಜ್, ಪ್ರತಿದಿನ ಇಲ್ಲಿ ಪುಡಿರೌಡಿಗಳು ಬಂದು ಹಫ್ತಾ ಕೇಳುತ್ತಾರೆ. ಈತ ಕೂಡ ದಿನಾ ಬಂದು ಹಣ ಕೊಡಿ ಎನ್ನುತ್ತಿದ್ದ. ಈ ಹಿಂದೆ ಸಾಕಷ್ಟು ಬಾರಿ ಹಣ ನೀಡಿದ್ದೇವೆ. ನಿನ್ನೆ ಕೂಡ ಬಂದು ಹಣ ನೀಡುವಂತೆ ಗಲಾಟೆ ಮಾಡಿದ್ದಾನೆ.


ನಾವು ಹಣ ನೀಡಲಿಲ್ಲ ಎನ್ನುವ ಕಾರಣಕ್ಕೆ ಮಧ್ಯಾಹ್ನದ ವೇಳೆ ಬಂದು ನಮ್ಮ ಸಿಬ್ಬಂದಿಯ ಬೈಕ್‍ ಗಳನ್ನು ಒದ್ದು ಗಲಾಟೆ ಮಾಡಿ ಹೋಗಿದ್ದಾನೆ. ರಾತ್ರಿ ಮತ್ತೆ ಬಂದು ಏಕಾಏಕಿ ಲಾಂಗ್ ಬೀಸಿ ಕೊಲೆ ಮಾಡುವುದಾಗಿ ಬೆದರಿಸಿದ್ದಾನೆ.
ಇಲ್ಲಿ ಪುಡಿ ರೌಡಿಗಳ ಹಾವಳಿ ಹೆಚ್ಚಾಗಿದೆ ಜೀವನ ಮಾಡಲು ದೂರದ ಊರುಗಳಿಂದ ಬಂದಿದ್ದೇವೆ. ನಮಗೆ ಇಲ್ಲಿ ತುಂಬಾ ತೊಂದರೆ ಆಗುತ್ತಿದೆ. ಪೊಲೀಸರಿಗೆ ಹೇಳಿದರೂ ಯಾವುದೇ ಪ್ರಯೋಜನ ಇಲ್ಲ ಎಂದು ಅಸಹಾಯಕತೆ ತೋಡಿಕೊಂಡಿದ್ದಾರೆ.



Join Whatsapp