ಜೈಪುರ: ಯುವಕನೊಬ್ಬ ತನ್ನ ವಿಧವೆ ದೊಡ್ಡಮ್ಮನನ್ನು ಕೊಂದು ಶವವನ್ನು ಮಾರ್ಬಲ್ ಕಟರ್ ನಿಂದ 10 ತುಂಡುಗಳಾಗಿ ಕತ್ತರಿಸಿ ಕಾಡಿನಲ್ಲಿ ವಿವಿಧ ಸ್ಥಳಗಳಿಗೆ ಎಸೆದಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ಪ್ರಕರಣ ಸಂಬಂಧ ಆರೋಪಿ ಅನುಜ್ ಶರ್ಮಾ ಅಲಿಯಾಸ್ ಅಚಿಂತ್ಯ ಗೋವಿಂದ್ ದಾಸ್ ನನ್ನು ಪೊಲೀಸರು ಬಂಧಿಸಿದ್ದು, ಕಾಡಿನಲ್ಲಿ ಎಸೆದ ದೇಹದ ಕೆಲವು ಭಾಗಗಳನ್ನು ವಶಪಡಿಸಿಕೊಂಡಿದ್ದಾರೆ.
ಜೈಪುರದ ವಿದ್ಯಾಧರನಗರ ಪ್ರದೇಶದ ಲಾಲ್ಪುರಿಯಾ ಅಪಾರ್ಟ್ ಮೆಂಟ್ ಸೆಕ್ಟರ್-2ರಲ್ಲಿ ಸರೋಜ್ ಶರ್ಮಾ (64) ಎಂಬ ಮಹಿಳೆಯನ್ನು ಭಾಮೈದನ ಪುತ್ರ
ಅನುಜ್ ಶರ್ಮಾ ಡಿ.11ರಂದು ಸುತ್ತಿಗೆಯಿಂದ ತಲೆಗೆ ಹೊಡೆದು ಕೊಂದಿದ್ದಾನೆ.
ಬಳಿಕ ಸ್ನಾನಗೃಹದಲ್ಲಿ ಮಾರ್ಬಲ್ ಕಟ್ಟರ್ ಯಂತ್ರವನ್ನು ಬಳಸಿ ದೇಹವನ್ನು 10 ತುಂಡುಗಳಾಗಿ ಕತ್ತರಿಸಿ ಕಾಡಿಗೆ ಒಯ್ದು ದೇಹವನ್ನು ಅಲ್ಲಲ್ಲಿ ಎಸೆದಿದ್ದಾನೆ. ಬಳಿಕ ಪ್ರಕರಣದಿಂದ ಪಾರಾಗಲು ಪೊಲೀಸ್ ಠಾಣೆಗೆ ಬಂದು ದೇವಸ್ಥಾನಕ್ಕೆ ಹೋದ ಚಿಕ್ಕಮ್ಮ ನಾಪತ್ತೆಯಾಗಿದ್ದಾರೆ ಎಂದು ದೂರು ದಾಖಲಿಸುತ್ತಾನೆ.
ಸಿಕ್ಕಿಬಿದ್ದಿದ್ದೇ ರೋಚಕ:
ಅನುಜ್ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಆರಂಭಿಸಿದ್ದು, ಅನುಜ್ ನ ದಾರಿತಪ್ಪಿಸುವ ಹೇಳಿಕೆಯ ಮೇಲೆ ಪೊಲೀಸರಿಗೆ ಶಂಕೆ ವ್ಯಕ್ತವಾಗಿದೆ. ಅದರಂತೆ ಆತನ ಮೇಲೆ ಪೊಲೀಸರು ಒಂದು ಕಣ್ಣಿಟ್ಟಿದ್ದರು. ಪ್ರಕರಣದ ತನಿಖಾ ಭಾಗವಾಗಿ ಸಿಸಿಟಿವಿಗಳನ್ನು ಪರಿಶೀಲನೆ ನಡೆಸಿದಾಗ ಅನುಜ್ ಸೂಟ್ ಕೇಸ್ ಹಿಡಿದುಕೊಂಡು ಹೋಗುತ್ತಿರುವುದು ಸೆರೆಯಾಗಿದೆ. ಇಷ್ಟು ಸಾಕ್ಷಿ ಸಿಕ್ಕರೆ ಪೊಲೀಸರು ಬಿಡ್ತಾರಾ? ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಿದ್ದಾರೆ.
ರಕ್ತದ ಕಲೆ ಸ್ವಚ್ಛ:
ಸಿಸಿಟಿವಿ ದೃಶ್ಯಾವಳಿ ಆಧರಿಸಿ ಸುತ್ತಮುತ್ತ ತನಿಖೆ ಆರಂಭಿಸಿದಾಗ ಪೊಲೀಸರಿಗೆ ಮತ್ತೊಂದು ಸ್ಫೋಟಕ ಮಾಹಿತಿ ತಿಳಿದುಬಂದಿದೆ. ಅನುಜ್ ಅಡುಗೆ ಕೋಣೆಯ ಬಳಿ ರಕ್ತದ ಕಲೆಯನ್ನು ಸ್ವಚ್ಛಗೊಳಿಸುತ್ತಿರುವುದನ್ನು ನೋಡಿರುವುದಾಗಿ ಸಂಬಂಧಿಕರೊಬ್ಬರು ಹೇಳಿದ್ದಾರೆ. ಶಂಕೆ ಮೇರೆಗೆ ಪೊಲೀಸರು ಅನುಜ್ನನ್ನು ವಶಕ್ಕೆ ಪಡೆದು ತೀವ್ರ ತನಿಖೆ ನಡೆಸಿದಾಗ ತಾನೇ ಕೊಲೆ ಮಾಡಿರುವುದಾಗಿ ಬಾಯಿಬಿಟ್ಟಿದ್ದಾನೆ.
ಸರೋಜ್ ಶರ್ಮಾ ಅನುಜ್ ತಂದೆಯ ಹಿರಿಯ ಸಹೋದರನ ಪತ್ನಿಯಾಗಿದ್ದಾರೆ. 1995 ರಲ್ಲಿ ಅವರ ಪತಿ ನಿಧನರಾದ ನಂತರ ಅನುಜ್ ಮನೆಯಲ್ಲೇ ವಾಸಿಸುತ್ತಿದ್ದರು. ಅನುಜ್ ಶರ್ಮಾ ಅವರ ತಾಯಿ ಕಳೆದ ವರ್ಷ ನಿಧನರಾದರು. ಡಿಸೆಂಬರ್ 11 ರಂದು ಅನುಜ್ ಶರ್ಮಾ ಅವರ ತಂದೆ ಇಂದೋರ್ ಗೆ ಹೋಗಿದ್ದರು. ಬಳಿಕ ಅನುಜ್ ಮತ್ತು ಸರೋಜ್ ಮನೆಯಲ್ಲಿ ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸೂಟ್ ಕೇಸ್ ನಲ್ಲಿ ತುಂಬಿದ್ದ:
ಅನುಜ್ ಶರ್ಮಾ ದೆಹಲಿಗೆ ಹೋಗಲು ಬಯಸಿದ್ದರು. ಆದರೆ ಮಹಿಳೆ ನಿರಾಕರಿಸಿದ ಹಿನ್ನಲೆ ಸರೋಜ್ ಮತ್ತು ಅನುಜ್ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು. ಈ ವೇಳೆ ಆಕ್ರೋಶಗೊಂಡ ಅನುಜ್ ಸುತ್ತಿಗೆಯಿಂದ ಚಿಕ್ಕಮ್ಮನಿಗೆ ಹೊಡೆದಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಂತರ ಬಾತ್ರೂಮ್ ಗೆ ಎಳೆದೊಯ್ದು ಮಾರ್ಬಲ್ ಕಟರ್ನಿಂದ 10 ತುಂಡುಗಳನ್ನಾಗಿ ಮಾಡಿ ಸೂಟ್ ಕೇಸ್ ನಲ್ಲಿ ತೆಗೆದುಕೊಂಡು ದೆಹಲಿ ಹೆದ್ದಾರಿಯಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಎಸೆದಿದ್ದಾನೆ.
ಪ್ರಕರಣ ಭೀಕರತೆಯು ಭಾಗಶಃ ದೆಹಲಿಯಲ್ಲಿ ನಡೆದ ಶ್ರದ್ಧಾ ವಾಕರ್ ಕೊಲೆ ಪ್ರಕರಣದಂತೆಯೇ ಇದೆ. ಅಫ್ತಾಬ್ ತನ್ನ ಲೀವ್ ಇನ್ ಸಂಗಾತಿಯನ್ನು ಕೊಂದು ದೇಹವನ್ನು 32 ತುಂಡುಗಳಾಗಿ ಕತ್ತರಿಸಿ ಕಾಡಿನಲ್ಲಿ ಎಸೆದಿದ್ದನು.
ಈ ಪ್ರಕರಣ ಜನರ ಮನಸ್ಸಿನಿಂದ ಮಾಸುವ ಮುನ್ನವೇ ದೆಹಲಿಯಲ್ಲಿಯೇ ಶ್ರದ್ಧಾ ಮಾದರಿಯಲ್ಲಿ ತಾಯಿಯೊಂದಿಗೆ ಮಗ ಸೇರಿಕೊಂಡು ತಂದೆಯನ್ನು ಕೊಂದ ಪ್ರಕರಣ ನಡೆಯಿತು.
ಬಳಿಕ ಕರ್ನಾಟಕದ ಮಗನೊಬ್ಬ ತಂದೆಯನ್ನು ಕೊಂದು ದೇಹವನ್ನು ತುಂಡರಿಸಿ ಬೋರ್ವೆಲ್ಗೆ ಹಾಕಿದ್ದನು. ಇದೀಗ ರಾಜಸ್ಥಾನದಲ್ಲೂ ಅಂತಹದ್ದೇ ಪ್ರಕರಣ ಮರುಕಳಿಸಿದೆ.