►ಪೊಲೀಸ್ ಇಲಾಖೆ, ಮಾಧ್ಯಮಗಳ ಮೌನಕ್ಕೆ ವ್ಯಾಪಕ ಆಕ್ರೋಶ
ಮಂಡ್ಯ: ಪ್ರತಿಭಟನೆಯ ವೇಳೆ ಬಿಜೆಪಿ ಕಾರ್ಯಕರ್ತರು ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿ ದೇಶದ್ರೋಹದ ಕೃತ್ಯ ಎಸಗಿದ ಘಟನೆ ನಡೆದಿದೆ.
ಮಂಡ್ಯ ಜಿಲ್ಲೆಯ ಸಂಜಯ ವೃತ್ತದಲ್ಲಿ ನಡೆದ ಪ್ರತಿಭಟನೆಯ ವೇಳೆ ಬಿಜೆಪಿ ಕಾರ್ಯಕರ್ತರು ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಾರೆ.
ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಬುಟ್ಟೋ ವಿರುದ್ಧ ಪ್ರತಿಭಟನಾ ನಿರತ ಬಿಜೆಪಿ ಕಾರ್ಯಕರ್ತರು ಮೊದಲು ಭಾರತದ ಪರ ಘೋಷಣೆ ಕೂಗಿದ್ದಾರೆ. ಇದರ ನಡುವೆ ಬಿಜೆಪಿಯ ಇಬ್ಬರು ಕಾರ್ಯಕರ್ತರು ಪಾಕಿಸ್ತಾನ ಜಿಂದಾಬಾದ್ ಎಂದು ಎರಡೆರಡು ಬಾರಿ ಘೋಷಣೆ ಕೂಗಿದ್ದು, ಘಟನೆಯ ವೀಡಿಯೋ ವೈರಲಾಗಿದೆ. ಪಾಕಿಸ್ತಾನದ ಪರ ಘೋಷಣೆ ಕೂಗುವಾಗ ಅಕ್ಕಪಕ್ಕದಲ್ಲಿರುವವರು ಬಾಯಿ ಮುಚ್ಚಿಸುವ ಪ್ರಯತ್ನ ನಡೆಸುವ ದೃಶ್ಯವೂ ವೀಡಿಯೋದಲ್ಲಿ ಸೆರೆಯಾಗಿದೆ.
ಘಟನೆಯ ಕುರಿತು ಪೊಲೀಸ್ ಇಲಾಖೆ, ಮಾಧ್ಯಮಗಳ ಮೌನಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಈ ಕುರಿತು ಟ್ವೀಟ್ ಮಾಡಿರುವ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(SDPI) ರಾಜ್ಯ ಮುಖಂಡರಾದ ರಿಯಾಝ್ ಕಡಂಬು, ಪಾಕಿಸ್ತಾನದ ಪರ ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತರ ಮೇಲೆ ದೇಶವಿರೋಧಿ ಕಾಯ್ದೆ ಯಾವಾಗ ದಾಖಲಿಸುತ್ತೀರಿ? ಎಂದು ಪೊಲೀಸ್ ಇಲಾಖೆಯನ್ನು ಪ್ರಶ್ನಿಸಿದ್ದಾರೆ. ‘ಇವರ ವಿರುದ್ಧ 153(a) ಜೊತೆಗೆ UAPA ಎಲ್ಲವೂ ಹಾಕಬೇಕಲ್ಲವೇ? ಇವರು ಪ್ರತಿನಿಧಿಸುವ ಪಕ್ಷ ಸಂಘಟನೆಗಳ ಕಚೇರಿಗಳಿಗೆ,ಇತರ ನಾಯಕರ ಮನೆಗಳಿಗೆ ದಾಳಿ ಮಾಡಿ ಸೀಲ್ ಹಾಕಬೇಕಲ್ಲವೇ. ಕೂಡಲೇ ಆಗಬೇಕು. ಇದು ದೇಶದ ವಿಚಾರ’ ಎಂದು ಕಿಡಿಕಾರಿದ್ದಾರೆ.