ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಶ್ ಲೀಗ್ ಟಿ20 ಟೂರ್ನಿಯಲ್ಲಿ ಅಪರೂಪದ ವಿಶ್ವದಾಖಲೆಯೊಂದು ನಿರ್ಮಾಣವಾಗಿದೆ. ಅಡಿಲೇಡ್ ಸ್ಟ್ರೈಕರ್ಸ್ ವಿರುದ್ಧದ ಪಂದ್ಯದಲ್ಲಿ ಸಿಡ್ನಿ ಥಂಡರ್ ತಂಡ ಕೇವಲ 15 ರನ್ ಗಳಿಗೆ ಆಲೌಟ್ ಆಗಿದೆ. ಇದು, ಟಿ20 ಲೀಗ್ ಕ್ರಿಕೆಟ್ ಕೂಟದಲ್ಲಿ ತಂಡವೊಂದು ಗಳಿಸಿದ ಕನಿಷ್ಠ ಮೊತ್ತವಾಗಿ ದಾಖಲಾಯಿತು.
ಸಿಡ್ನಿಯ ಶೋಗ್ರೌಂಡ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಅಡಿಲೇಡ್ ಸ್ಟ್ರೈಕರ್ಸ್, 9 ವಿಕೆಟ್ ನಷ್ಟದಲ್ಲಿ 139 ರನ್‌ಗಳಿಸಿತ್ತು. ಆದರೆ ಚೇಸಿಂಗ್ ವೇಳೆ ಹೆನ್ರಿ ಥಾರ್ನ್ಟನ್ ಮತ್ತು ವೆಸ್ ಅಗರ್ ಬೌಲಿಂಗ್ ದಾಳಿ ಎದುರು ತರಗೆಲೆಗಳಂತೆ ಉದುರಿದ ಸಿಡ್ನಿ ಥಂಡರ್, 10 ರನ್‌ಗಳಿಸುವಷ್ಟರಲ್ಲೇ 8 ವಿಕೆಟ್ ಕಳೆದುಕೊಂಡಿತ್ತು. ಅಂತಿಮವಾಗಿ ಕೇವಲ 5.5 ಓವರ್‌ಗಳಲ್ಲಿ 15 ರನ್‌ಗಳಿಸುವಷ್ಟರಲ್ಲಿ ಸರ್ವಪತನ ಕಂಡಿತು.
ಆರಂಭಿಕರಿಬ್ಬರು ಸೇರಿದಂತೆ ಐದು ಮಂದಿ ಶೂನ್ಯಕ್ಕೆ ನಿರ್ಗಮಿಸಿದರು. 4 ರನ್‌ಗಳಿಸಿದ ಬೌಲರ್ ಬ್ರೆಂಡನ್ ಡಾಗೆಟ್ ಅವರದ್ದೇ ಸರ್ವಾಧಿಕ ಗಳಿಕೆ. ಪವರ್ ಪ್ಲೇ ಅವಧಿಯಲ್ಲಿ 2.5 ಓವರ್ ಎಸೆದ ಹೆನ್ರಿ ಥಾರ್ನ್ಟನ್, 3 ರನ್ ನೀಡಿ 5 ವಿಕೆಟ್ ಪಡೆದರು. ಬಿಗ್ ಬ್ಯಾಶ್ ಲೀಗ್ ಟಿ20 ಟೂರ್ನಿಯ ಇತಿಹಾಸದಲ್ಲೇ ಕನಿಷ್ಠ ರನ್ ನೀಡಿ ಗರಿಷ್ಠ ವಿಕೆಟ್ ಪಡೆದ ದಾಖಲೆಯೂ ಹೆನ್ರಿ ಥಾರ್ನ್ಟನ್ ಅವರದ್ದಾಯಿತು. ವೆಸ್ ಅಗರ್ 2 ಓವರ್‌ಗಳಲ್ಲಿ 6 ರನ್ ನೀಡಿದ 4 ವಿಕೆಟ್ ಕಿತ್ತರು.
ವಿಶೇಷವೆಂದರೆ ಟಿ20 ಸ್ಪೆಷಲಿಸ್ಟ್ ಬೌಲರ್, ಅಡಿಲೇಡ್ ಸ್ಟ್ರೈಕರ್ಸ್‌ನ ರಶೀದ್ ಖಾನ್ ಅವರಿಗೆ ಒಂದೇ ಒಂದು ಓವರ್ ಎಸೆಯಲು ಅವಕಾಶವೇ ಸಿಗಲಿಲ್ಲ. ವೃತ್ತಿ ಜೀವನದಲ್ಲಿ ಇದುವರೆಗೂ 358 ಟಿ20 ಪಂದ್ಯಗಳನ್ನಾಡಿರುವ ಅಪ್ಘಾನಿಸ್ತಾನದ ರಶೀದ್ ಖಾನ್, ಇದೇ ಮೊದಲ ಬಾರಿಗೆ ಬೌಲಿಂಗ್ ಮಾಡುವ ಅವಕಾಶ ಪಡೆಯಲಿಲ್ಲ.
2019 ರಲ್ಲಿ ಜೆಕ್ ಗಣರಾಜ್ಯ ವಿರುದ್ಧ 21 ರನ್‌ಗಳಿಗೆ ಟರ್ಕಿ ತಂಡವು ಆಲೌಟ್ ಆಗಿದ್ದು, ಟಿ20 ಕ್ರಿಕೆಟ್‌ನಲ್ಲಿ ಇದುವರೆಗಿನ ಕನಿಷ್ಠ ಮೊತ್ತವಾಗಿತ್ತು. ಮಹಿಳಾ ವಿಭಾಗದಲ್ಲಿ ಕನಿಷ್ಠ ಮೊತ್ತಕ್ಕೆ ಆಲೌಟ್ ಆದ ದಾಖಲೆ ಮಾಲ್ಡೀವ್ಸ್ ಮತ್ತು ಮಾಲಿ ತಂಡದ್ದಾಗಿದೆ. ತಂಡ ಗಳಿಸಿದ್ದ ಒಟ್ಟು ಮೊತ್ತ6 ರನ್!