ಭೋಪಾಲ್: ಮಹಿಳೆಯೊಬ್ಬರು ‘ನಾಲ್ಕು’ ಕಾಲುಗಳಿರುವ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಆಶ್ಚರ್ಯಕರ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದಿದೆ.
ಕಮಲರಾಜ ಆಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ವಿಭಾಗದಲ್ಲಿ ಸಿಕಂದರ್ ಕಂಪೂ ಪ್ರದೇಶದ ಆರತಿ ಕುಶ್ವಾಹ ಎಂಬ ಮಹಿಳೆ ನಾಲ್ಕು ಕಾಲುಗಳುಳ್ಳ ಮಗುವಿಗೆ ಜನ್ಮ ನೀಡಿದ್ದಾರೆ.
ಜನನದ ನಂತರ ಮಗುವಿನ ತೂಕ 2.3 ಕೆ.ಜಿ ಯಷ್ಟಿದೆ. ನವಜಾತ ಶಿಶು ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಬೆಳವಣಿಗೆ ಸಂದರ್ಭದಲ್ಲಿ ಕೆಲವು ಭ್ರೂಣಗಳು ಹೆಚ್ಚುವರಿಯಾಗುತ್ತವೆ. ಇದರಿಂದ ಭ್ರೂಣವು ಎರಡು ಭಾಗಗಳಾಗಿ ವಿಭಜನೆಯಾದಾಗ ಈ ರೀತಿ ಸಂಭವಿಸುತ್ತದೆ. ಇದನ್ನು ವೈದ್ಯಕೀಯ ವಿಜ್ಞಾನದ ಭಾಷೆಯಲ್ಲಿ ಇಶಿಯೋಪಾಗಸ್ ಎಂದು ಕರೆಯಲಾಗುತ್ತದೆ. ಈ ಹೆಣ್ಣು ಮಗುವಿನ ಸೊಂಟದ ಕೆಳಗಿನ ಭಾಗವು ಎರಡು ಹೆಚ್ಚುವರಿ ಕಾಲುಗಳೊಂದಿಗೆ ಅಭಿವೃದ್ಧಿಗೊಂಡಿದೆ, ಆದರೆ ಆ ಕಾಲುಗಳು ನಿಷ್ಕ್ರಿಯವಾಗಿವೆ ಎಂದು ಜಯರೋಗ್ಯ ಆಸ್ಪತ್ರೆ ಸಮೂಹದ ಸೂಪರಿಂಟೆಂಡೆಂಟ್ ಡಾ.ಆರ್.ಕೆ.ಎಸ್.ಧಕಡ್ ಮಾಹಿತಿ ನೀಡಿದ್ದಾರೆ.
‘ಇದೀಗ ಮಗುವಿನ ದೇಹದ ಬೇರೆ ಯಾವುದೇ ಭಾಗದಲ್ಲಿ ಅಂಗವಿಕಲತೆ ಇದೆಯೇ ಎಂದು ಶಿಶು ವೈದ್ಯರು ತಪಾಸಣೆ ನಡೆಸುತ್ತಿದ್ದು, ಪರೀಕ್ಷೆ ಬಳಿಕ ಆಕೆ ಆರೋಗ್ಯವಾಗಿದ್ದರೆ ಶಸ್ತ್ರಚಿಕಿತ್ಸೆ ಮೂಲಕ ಹೆಚ್ಚುವರಿ ಕಾಲುಗಳನ್ನು ತೆಗೆಯಲಾಗುತ್ತದೆ. ಇದರಿಂದ ಆಕೆ ಸಹಜ ಜೀವನ ನಡೆಸಬಹುದು ಎಂದು ತಿಳಿಸಿದ್ದಾರೆ.
ಸದ್ಯ ಕಮಲರಾಜ ಆಸ್ಪತ್ರೆಯ ಶಿಶುವೈದ್ಯಕೀಯ ವಿಭಾಗದ ವಿಶೇಷ ನವಜಾತ ನಿಗಾ ಘಟಕದಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಶಿಶುವಿನ ಆರೋಗ್ಯ ಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.