ಕೋಲ್ಕತ್ತಾ: ಕಂಬಳಿ ವಿತರಣಾ ಕಾರ್ಯಕ್ರಮದಲ್ಲಿ ನಡೆದ ಕಾಲ್ತುಳಿತದಲ್ಲಿ ಮಗು ಸೇರಿದಂತೆ ಕನಿಷ್ಠ ಮೂವರು ಮೃತಪಟ್ಟಿದ್ದು, ಎಂಟು ಮಂದಿ ಗಾಯಗೊಂಡಿರುವ ಘಟನೆ ಪಶ್ಚಿಮ ಬಂಗಾಳದ ಪಶ್ಚಿಮ ಬರ್ಧಮಾನ್ ಜಿಲ್ಲೆಯ ಅಸನ್ಸೋಲ್ ನಲ್ಲಿ ನಡೆದಿದೆ.
ಬುಧವಾರ ಸಂಜೆ ಈ ಘಟನೆ ನಡೆದಿದ್ದು, ಕಂಬಳಿಗಳನ್ನು ಪಡೆಯುವ ಪ್ರಯತ್ನದಲ್ಲಿ ಜನರು ವೇದಿಕೆಯ ಕಡೆಗೆ ಧಾವಿಸಿದಾಗ ಕಾಲ್ತುಳಿತ ಸಂಭವಿಸಿದೆ.
ಧಾರ್ಮಿಕ ಸಂಘಟನೆ ‘ಶಿವ ಚರ್ಚಾ’ ಆಶ್ರಯದಲ್ಲಿ ಬಿಜೆಪಿ ಕೌನ್ಸಿಲರ್ ಚೈತಾಲಿ ತಿವಾರಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ರಾಜ್ಯದ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಉಪಸ್ಥಿತರಿದ್ದರು. ಬಿಜೆಪಿ ನಾಯಕ ಸುವೇಂದು ಸ್ಥಳದಿಂದ ನಿರ್ಗಮಿಸಿದ ನಂತರ ಕಾಲ್ತುಳಿತ ಸಂಭವಿಸಿದೆ.
ಅವಘಡದ ಬಗ್ಗೆ ಸುವೇಂದು ಅಧಿಕಾರಿ ಟ್ವೀಟ್ ಮಾಡಿದ್ದು, ಅಸನ್ಸೊಲ್ ನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದೆ. ಅಲ್ಲಿ, ನಾನು ಇರುವಷ್ಟು ಸಮಯ ಎಲ್ಲವೂ ಚೆನ್ನಾಗಿತ್ತು. ಪೊಲೀಸ್ ಭದ್ರತೆ, ಹೆಚ್ಚಿನ ಸಂಖ್ಯೆಯ ಸ್ವಯಂಸೇವಕರು ಕೂಡ ಇದ್ದರು. ಆದರೆ ನಾನು ಹೊರಟ ಬಳಿಕ, ಪೊಲೀಸ್ ಭದ್ರತೆ ಹಿಂಪಡೆಯಲಾಯಿತು. ಸ್ವಯಂಸೇವಕರು ಕೂಡ ಸ್ಥಳದಿಂದ ತೆರಳಿದ್ದಾರೆ. ನಂತರ, ಆಯೋಜಕರಿಗೆ ಜನಸಂದಣಿ ನಿರ್ವಹಿಸುವುದು ಕಷ್ಟವಾಗಿದೆ. ಅದರಿಂದ ಅವಘಡ ಸಂಭವಿಸಿದೆ. ಇಲ್ಲಿ ನಾನು ಯಾರನ್ನೂ ದೂರುತ್ತಿಲ್ಲ. ಮೃತಪಟ್ಟವರ ಮತ್ತು ಗಾಯಗೊಂಡವರ ಕುಟುಂಬದ ಜತೆ ನಾವಿದ್ದೇವೆ, ಅದಕ್ಕೆ ಅಗತ್ಯ ನೆರವನ್ನು ನೀಡಲಿದ್ದೇವೆ ಎಂದು ಹೇಳಿದ್ದಾರೆ.