ನಾಳೆಯಿಂದ ಪಂಚರತ್ನ ರಥಯಾತ್ರೆ ಪುನಾರಂಭ: ಮಾಗಡಿಯಲ್ಲಿ ಹೆಚ್’ಡಿಕೆ ರಥಯಾತ್ರೆ

Prasthutha|


ಬೆಂಗಳೂರು: ಮಳೆಯ ಕಾರಣಕ್ಕೆ ತಾತ್ಕಾಲಿಕವಾಗಿ ಸ್ಥಗಿತವಾಗಿದ್ದ ಪಂಚರತ್ನ ರಥಯಾತ್ರೆ ಗುರುವಾರ (ನಾಳೆ) ದಿಂದ ರಾಮನಗರ ಜಿಲ್ಲೆಯ ಮಾಗಡಿ ವಿಧಾನಸಭೆ ಕ್ಷೇತ್ರದಲ್ಲಿ ಪುನಾರಂಭ ಆಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

- Advertisement -


ಪೂರ್ವ ನಿಗದಿತ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಡಿಸೆಂಬರ್ 6ರಂದು ತುಮಕೂರು ಜಿಲ್ಲೆಯ ಗುಬ್ಬಿ ಕ್ಷೇತ್ರದಲ್ಲಿ ರಥಯಾತ್ರೆ ನಡೆಸಿದ ನಂತರ ಡಿಸೆಂಬರ್ 11ರವರೆಗೂ ಮುಂದಕ್ಕೆ ಹಾಕಲಾಗಿತ್ತು. ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದ ರಾಜ್ಯದಲ್ಲಿ ವ್ಯಾಪಕ ಮಳೆ ಸುರಿಯುತ್ತಿತ್ತು. ಈ ಕಾರಣಕ್ಕೆ ಡಿಸೆಂಬರ್ 14ರವರೆಗು ಯಾತ್ರೆಯನ್ನು ಮತ್ತೊಮ್ಮೆ ಮುಂದಕ್ಕೆ ಹಾಕಲಾಗಿತ್ತು.


ಮಳೆ ಬಿಡುವು ಕೊಟ್ಟ ಹಿನ್ನೆಲೆಯಲ್ಲಿ ನಾಳೆಯಿಂದ (ಗುರುವಾರ) ರಾಮನಗರ ಜಿಲ್ಲೆಯಲ್ಲಿ ರಥಯಾತ್ರೆ ನಡೆಯಲಿದೆ. 15ರಂದು ಮಾಗಡಿ, 16ರಂದು ರಾಮನಗರ, 17ರಂದು ಹಾರೋಹಳ್ಳಿ, 18ರಂದು ಕನಕಪುರ, 19ರಂದು ಚನ್ನಪಟ್ಟಣ ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆ ನಡೆಯಲಿದೆ.
ಮಾಗಡಿಯ ಶ್ರೀ ರಂಗನಾಥ ಸ್ವಾಮಿ ದೇವಾಲಯ ಮತ್ತು ಶ್ರೀ ಸೋಮೇಶ್ವರ ದೇವಾಲಯದಲ್ಲಿ ಸಂಜೆ ಮಾಜಿ ಮುಖ್ಯಮಂತ್ರಿಗಳು ಪೂಜೆ ಸಲ್ಲಿಸುವರು. ನಂತರ ಮಾಗಡಿ ಪಟ್ಟಣದ ಜೆಡಿಎಸ್ ಭವನದಲ್ಲಿ ಬೃಹತ್ ಸಭೆ ನಡೆಯಲಿದೆ. ಅದಾದ ಮೇಲೆ ಶ್ರೀ ಕಲ್ಯಾ ಗೇಟ್ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಮೆರವಣಿಗೆ ನಡೆಯಲಿದೆ. ಅಂತಿಮವಾಗಿ ಮಾಗಡಿಯ ಕೋಟೆ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಲಿದೆ.

- Advertisement -


ಡಿಸೆಂಬರ್ 20ರಂದು ಮಂಡ್ಯ ಜಿಲ್ಲೆಗೆ ರಥಯಾತ್ರೆ ಪ್ರವೇಶ ಮಾಡಲಿದ್ದು, 20ರಂದು ಮಳವಳ್ಳಿ, 21ಕ್ಕೆ ಮದ್ದೂರು, 22ಕ್ಕೆ ಮಂಡ್ಯ, 23ಕ್ಕೆ ಶ್ರೀರಂಗಪಟ್ಟಣ, 24ಕ್ಕೆ ಪಾಂಡವಪುರ, 25ಕ್ಕೆ ಕೆ.ಆರ್.ಪೇಟೆ, 26ಕ್ಕೆ ನಾಗಮಂಗಲ ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆ ನಡೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೇಳಿದ್ದಾರೆ.
ಡಿಸೆಂಬರ್ 27ರಂದು ತುರುವೇಕೆರೆ, 28ರಂದು ಚಿಕ್ಕನಾಯಕನಹಳ್ಳಿ, 29ರಂದು ತುಮಕೂರು ಗ್ರಾಮಾಂತರ, 30ರಂದು ಕುಣಿಗಲ್ ಕ್ಷೇತ್ರದಲ್ಲಿ ರಥಯಾತ್ರೆ ನಡೆಯಲಿದೆ. ಜನವರಿ 3ರಂದು ಬೀದರ್ ವಿಧಾನಸಭೆ ಕ್ಷೇತ್ರದ ಮೂಲಕ ಕಲ್ಯಾಣ ಕರ್ನಾಟಕವನ್ನು ರಥಯಾತ್ರೆ ಪ್ರವೇಶ ಮಾಡಲಿದೆ ಎಂದು ಮಾಜಿ ಮುಖ್ಯಮಂತ್ರಿ ಅವರು ತಿಳಿಸಿದ್ದಾರೆ.



Join Whatsapp