ಟಿಕೆಟ್ ಪಡೆಯಲು ಅಲ್ಪಸಂಖ್ಯಾತರಿಂದ 100ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್

Prasthutha|

ಬೆಂಗಳೂರು: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಈ ಬಾರಿ ಅಲ್ಪಸಂಖ್ಯಾತರಿಂದ 100ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ತಿಳಿಸಿದ್ದಾರೆ.

- Advertisement -


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆ ಎಐಸಿಸಿ ಅಧ್ಯಕ್ಷರ ನೇತೃತ್ವದಲ್ಲಿ ಸಭೆ ನಡೆದಿದ್ದು, ಇದರಲ್ಲಿ ಹಲವು ವಿಚಾರವಾಗಿ ತೀರ್ಮಾನ ಮಾಡಲಾಗಿದೆ. ಮುಂಬರುವ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಜನವರಿ ಮೊದಲ ವಾರದಲ್ಲಿ ಎಲ್ಲ ಮುಖಂಡರೂ ಸೇರಿ 20 ಜಿಲ್ಲೆಗಳಲ್ಲಿ ಒಟ್ಟಾಗಿ ಬಸ್ ಯಾತ್ರೆ ಮಾಡುವ ಮೂಲಕ ರಾಜ್ಯದ 150 ಕ್ಷೇತ್ರಗಳಲ್ಲಿ ಪ್ರವಾಸ ಮಾಡಲಿದ್ದಾರೆ. ಆಮೂಲಕ ಪಕ್ಷ ಸಂಘಟನೆ, ಸರ್ಕಾರದ ವೈಫಲ್ಯ, 40% ಕಮಿಷನ್, ಬೆಲೆಏರಿಕೆ, ಮತದಾರರ ಮಾಹಿತಿ ಕಳವು, ನಿರುದ್ಯೋಗ ಸೇರಿದಂತೆ ಹಲವು ವಿಚಾರವಾಗಿ ಜನರಿಗೆ ಮಾಹಿತಿ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ನೀಡುವಂತೆ ಮನವಿ ಮಾಡಲಾಗುವುದು. ಈ ತಿಂಗಳು 30ರಂದು ಬಿಜಾಪುರದಲ್ಲಿ ಕೃಷ್ಣಾ ಯೋಜನೆ ವಿಚಾರವಾಗಿ ಹಾಗೂ ಜ.2ರಂದು ಹುಬ್ಬಳ್ಳಿಯಲ್ಲಿ ಮಹದಾಯಿ ವಿಚಾರವಾಗಿ ಹಾಗೂ ಜ.8ರಂದು ಚಿತ್ರದುರ್ಗದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.


ಜನವರಿ ಮೊದಲ ವಾರ ನಡೆಯಲಿರುವ ಬಸ್ ಯಾತ್ರೆ ದಿನಾಂಕ ಮುಂದಿನ ದಿನಗಳಲ್ಲಿ ತಿಳಿಸಲಾಗುವುದು. ಮುಂದಿನ 100 ದಿನಗಳಲ್ಲಿ ಪಕ್ಷ ಸಂಘಟನೆ ಜತೆಗೆ ಸರ್ಕಾರದ ವೈಫಲ್ಯ ಹಾಗೂ ಭ್ರಷ್ಟಾಚಾರದ ವಿರುದ್ಧ ಜನರಲ್ಲಿ ಅರಿವು ಮೂಡಿಸುತ್ತೇವೆ. ಇನ್ನು ಇಂದು ಅಲ್ಪಸಂಖ್ಯಾತರ ಸಭೆ ಮಾಡಿದ್ದು, ಈ ಸಭೆಯಲ್ಲಿ 55 ನಾಯಕರು ಭಾಗವಹಿಸಿದ್ದರು. ಮಾಜಿ ಸಚಿವರು, ಅಲ್ಪಸಂಖ್ಯಾತ ಘಟಕದ ಮುಖ್ಯಸ್ಥರು, ಮಾಜಿ ಸಂಸದರು ಸೇರಿದಂತೆ ಎಲ್ಲರೂ ಸೇರಿ ಚರ್ಚೆ ಮಾಡಿ ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆ ವಿಚಾರವಾಗಿ ಹೇಗೆ ಕೆಲಸ ಮಾಡಲಾಗುವುದು ಎಂದು ಚರ್ಚಿಸಲಾಯಿತು. ಇಂದಿನ ಸಭೆಯಲ್ಲಿ ಅಲ್ಪಸಂಖ್ಯಾತರ ಮತ ಡಿಲೀಟ್ ಮಾಡಿರುವುದರ ಬಗ್ಗೆ ಚರ್ಚೆ ಮಾಡಿದ್ದೇವೆ. ಮತ ತೆಗೆದುಹಾಕುವ ಮೂಲಕ ಸರ್ಕಾರ ಷಡ್ಯಂತ್ರ ರೂಪಿಸಿದೆ. ಇದನ್ನು ಮುಂದಿನ ದಿನಗಳಲ್ಲಿ ಹೇಗೆ ಸರಿಪಡಿಸಬೇಕು ಎಂದು ಚರ್ಚೆ ಮಾಡಿದ್ದೇವೆ. ಬಿಜೆಪಿ ಸೋಲಿನ ಭೀತಿಯಿಂದ ಈ ಕೆಲಸ ಮಾಡುತ್ತಿದ್ದಾರೆ. ಚಿಲುಮೆ ಸಂಸ್ಥೆ ವಿರುದ್ಧ ನಾವು ನೀಡಿದ ದೂರು ಸಾಬೀತಾಗಿದೆ. ಇದೇ ಮಾದರಿಯಲ್ಲಿ ಇತರ ಜಿಲ್ಲೆಗಳಲ್ಲಿ ಮತದಾರರ ಮಾಹಿತಿ ಕಳವು ಮಾಡಲಾಗಿದೆ. ಇನ್ನು ಜನವರಿ ತಿಂಗಳಲ್ಲಿ 5 ವಲಯಗಳ ಸಭೆ ಮಾಡಲಾಗುವುದು. ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗಗಳ ಸಮಾವೇಶವನ್ನು ಒಟ್ಟಾಗಿ ಮಾಡುತ್ತೇವೆ ಎಂದು ಹೇಳಿದರು.
ಇನ್ನು ಪಕ್ಷದ ಟಿಕೆಟ್ ಪಡೆಯಲು ಅಲ್ಪಸಂಖ್ಯಾತರಿಂದ 100ಕ್ಕೂ ಹೆಚ್ಚು ಹೆಚ್ಚು ಅರ್ಜಿಗಳು ಬಂದಿದ್ದು, ಅದನ್ನು ಸಮಿತಿ ಮೂಲಕ ಪರಿಶೀಲಿಸಿ ನಂತರ ಪರಿಷ್ಕೃತ ಪಟ್ಟಿಯನ್ನು ಕೆಪಿಸಿಸಿ ನೀಡಲಾಗುವುದು. ಹೆಚ್ಚು ಟಿಕೆಟ್ ನೀಡಬೇಕೆಂದು ಪಕ್ಷಕ್ಕೆ ಮನವಿ ಮಾಡಲಾಗುವುದು.

- Advertisement -

ಇಂದಿನ ಚರ್ಚೆಯಲ್ಲಿ ಪ್ರಮುಖವಾಗಿ ಬಿಜೆಪಿಯ ಭ್ರಷ್ಟಾಚಾರ, ಬೆಲೆಏರಿಕೆ, ಅಭಿವೃದ್ಧಿ ಮಾಡದ ಸರ್ಕಾರ, ಅಲ್ಪಸಂಖ್ಯಾತರ ಕಾರ್ಯಕ್ರಮ ರದ್ದು ಮಾಡಿರುವ ವಿಚಾರವನ್ನು ಅಲ್ಪಸಂಖ್ಯಾತ ಜನರಿಗೆ ತಿಳಿಸಿ, ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬುವಂತೆ ಜನರಲ್ಲಿ ಮನವಿ ಮಾಡುವ ಅಂಶಗಳು ಪ್ರಸ್ತಾಪವಾದವು ಎಂದು ಸಲೀಂ ಅಹ್ಮದ್ ತಿಳಿಸಿದರು.
ಮುಸ್ಲಿಂ ಮತ ವಿಭಜನೆಗೆ ಜೆಡಿಎಸ್, ಎಸ್ ಡಿಪಿಐ ಹಾಗೂ ಉವೈಸಿ ಪಕ್ಷ ಪ್ರಯತ್ನದ ಬಗ್ಗೆ ಕೇಳಿದಾಗ, ‘ಅಲ್ಪ ಸಂಖ್ಯಾತ ಮತದಾರರು ಪ್ರಬುದ್ಧರಾಗಿದ್ದಾರೆ. ಇಲ್ಲಿ ನೇರ ಸ್ಪರ್ಧೆ ಇರುವುದು ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ. ಕಳೆದ ಬಾರಿಯೂ ಅಲ್ಪಸಂಖ್ಯಾತರು ಕಾಂಗ್ರೆಸ್ ಪರವಾಗಿದ್ದು, ಈ ಬಾರಿಯೂ ಕಾಂಗ್ರೆಸ್ ಪರ ನಿಲ್ಲಲಿದೆ’ ಎಂದು ತಿಳಿಸಿದರು.
ಮುಸ್ಲಿಂ ಮುಖ್ಯಮಂತ್ರಿ ಬಗ್ಗೆ ಚರ್ಚೆ ಮಾಡಲಾಗಿದೆಯೇ ಎಂದು ಕೇಳಿದಾಗ, ‘ಅಂತಹ ಯಾವುದೇ ಚರ್ಚೆ ಇಂದಿನ ಸಭೆಯಲ್ಲಿ ಆಗಿಲ್ಲ. ನಮ್ಮ ಮೊದಲ ಗುರಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು, ಜನವಿರೋಧಿ ಸರ್ಕಾರ ಕಿತ್ತೊಗೆಯುವುದಾಗಿದೆ. ಮೊದಲು ಪಕ್ಷವನ್ನು ಅಧಿಕಾರಕ್ಕೆ ತಂದ ನಂತರ ನಮ್ಮ ಬೇಡಿಕೆಗಳನ್ನು ನಾವು ಪಕ್ಷ ಹಾಗೂ ಸರ್ಕಾರದ ಗಮನಕ್ಕೆ ತರುತ್ತೇವೆಂದು ತಿಳಿಸಿದರು.


ಪಕ್ಷ ಬಿಟ್ಟಿರುವ ಮುಸಲ್ಮಾನ ನಾಯಕರನ್ನು ಮತ್ತೆ ಕರೆತರುವ ಬಗ್ಗೆ ಚರ್ಚೆ ಆಯಿತೇ ಎಂದು ಕೇಳಿದಾಗ “ಈ ಬಗ್ಗೆ ಇಂದು ಚರ್ಚೆ ಮಾಡಿಲ್ಲ, ಮತದಾರರ ಹೆಸರು ಸೇರ್ಪಡೆ, ಪಕ್ಷ ಸಂಘಟನೆ ಹಾಗೂ ಸಮಾವೇಶ ಹಾಗೂ ಟಿಕೆಟ್ ವಿಚಾರವಾಗಿ ಮಾತ್ರ ಇಂದು ಚರ್ಚೆ ಮಾಡಿದ್ದೇವೆ’ ಎಂದರು.
ಮಹದಾಯಿ ವಿಚಾರವಾಗಿ ಒಂದು ಹೋರಾಟ ಸಾಕೇ ಎಂದು ಕೇಳಿದಾಗ, ‘ಈ ಸರ್ಕಾರಕ್ಕೆ ನಾಚಿಕೆಯಾಗಬೇಕು. ಕಾಂಗ್ರೆಸ್ ಈ ವಿಚಾರವಾಗಿ ನಿರಂತರ ಹೋರಾಟ ಮಾಡುತ್ತಾ ಬಂದಿದ್ದು, ಕಾರಜೋಳ ಅವರು ದಿನಬೆಳಗಾದರೇ ಬರಿ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದಾರೆ. ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರ ಈ ನಿಟ್ಚಿನಲ್ಲಿ ಕಾರ್ಯೋನ್ಮುಖವಾಗಿಲ್ಲ. ಬಿಜೆಪಿ ತಮ್ಮ ಪ್ರಣಾಳಿಕೆಯಲ್ಲಿ ಮಹದಾಯಿ, ಕೃಷ್ಣ, ಮೇಕೆದಾಟು ಯೋಜನೆಯನ್ನು ಅನುಷ್ಠಾನಕ್ಕೆ ತರುತ್ತೇವೆಂದು ಹೇಳಿದ್ದರು. ಈ ಯೋಜನೆಗಳ ಅನುಷ್ಠಾನಕ್ಕೆ ಇದುವರೆಗೂ ಯಾವುದೇ ರೀತಿ ತೀರ್ಮಾನ ಮಾಡಿಲ್ಲ. ನೀರಾವರಿಗೆ 1.50 ಲಕ್ಷ ಕೋಟಿ ನೀಡುವುದಾಗಿ ತಿಳಿಸಿದ್ದರು. ಚುನಾವಣೆಗೆ ಕೇವಲ 4 ತಿಂಗಳು ಬಾಕಿ ಇದ್ದು, ಇದರ ಬಗ್ಗೆ ಸರ್ಕಾರ ಉತ್ತರ ನೀಡಬೇಕು. ಅಧಿವೇಶನದಲ್ಲಿ ನಾವು ಈ ಬಗ್ಗೆ ಪ್ರಶ್ನೆ ಮಾಡುತ್ತೇವೆ. ನಾವು ಎಷ್ಟೇ ಹೋರಾಟ ಮಾಡಿದರೂ ಈ ಸರ್ಕಾರಕ್ಕೆ ಬದ್ಧತೆ ಇರಬೇಕಲ್ಲ’ ಎಂದು ಟೀಕಿಸಿದರು.
ಈ ಬಾರಿ ಮುಸಲ್ಮಾನ ಶಾಸಕರ ಸಂಖ್ಯೆ ಎರಡಂಕಿಗೆ ಹೋಗುತ್ತದೆಯೇ ಎಂದು ಕೇಳಿದಾಗ, ‘ಹಿಂದೆ ಹಲವು ಬಾರಿ 12ರಿಂದ 17 ಶಾಸಕರು ವಿಧಾನಸಭೆಗೆ ಆಯ್ಕೆಯಾಗಿದ್ದೆವು. ಈ ಬಾರಿಯೂ ಹೆಚ್ಚಿನ ಅಲ್ಪಸಂಖ್ಯಾತ ಶಾಸಕರು ಆಯ್ಕೆಯಾಗುವ ವಿಶ್ವಾಸವಿದೆ’ ಎಂದು ತಿಳಿಸಿದರು.

ಮಹಾರಾಷ್ಟ್ರ ಗಡಿ ವಿವಾದದ ಬಗ್ಗೆ ಕೇಳಿದಾಗ, ‘ಇದು ದಪ್ಪ ಚರ್ಮದ ಸರ್ಕಾರ. ಮಹಾರಾಷ್ಟ್ರ ಸೇರಿದಂತೆ ತ್ರಿಬಲ್ ಬಿಜೆಪಿ ಇಂಜಿನ್ ಸರ್ಕಾರವಿದೆ. ಈ ವಿಚಾರವಾಗಿ ಸರ್ವಪಕ್ಷ ಸಭೆ ಕರೆಯಿರಿ ಎಂದರೂ ಕರೆದಿಲ್ಲ. ಸರ್ಕಾರ ಗಟ್ಟಿ ತೀರ್ಮಾನ ಕೈಗೊಳ್ಳಬೇಕು. ಈ ವಿಚಾರವನ್ನು ಅಧಿವೇಶನದಲ್ಲಿ ಚರ್ಚೆ ಮಾಡುತ್ತೇವೆ’ ಎಂದು ಹೇಳಿದರು.
ಕಾಂಗ್ರೆಸ್ ಮತ ವಿಭಜನೆಗೆ ಮುಸಲ್ಮಾನ ಸಮುದಾಯದ ಸ್ಟಾರ್ ಪ್ರಚಾರಕರು ಬರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಅಲ್ಪಸಂಖ್ಯಾತರು ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತದ ಮೇಲೆ ಮತಹಾಕುತ್ತಾರೆ. ಸಿಂದಗಿ, ಹಾನಗಲ್ ಚುನಾವಣೆ ಸಮಯದಲ್ಲೂ ಈ ಸ್ಟಾರ್ ಪ್ರಚಾರಕರು ಬಂದಿದ್ದರು. ಆದರೂ ಎಷ್ಟು ಮತಗಳನ್ನು ಪಡೆದರು. ಈ ಚುನಾವಣೆಯಲ್ಲಿ ನೇರ ಹಣಾಹಣಿ ಇರುವುದು ಕಾಂಗ್ರೆಸ್ ಹಾಗೂ ಬಿಜೆಪಿ ವಿರುದ್ಧ. ಇದು ಜಾತ್ಯತೀತ ಹಾಗೂ ಕೋಮುವಾದದ ವಿರುದ್ಧದ ಹೋರಾಟ. ಜನ ಈ ಸರ್ಕಾರದ ವಿರುದ್ಧ ಭ್ರಮನಿರಸನಾಗಿದ್ದಾರೆ ಎಂದು ತಿಳಿಸಿದರು.


ಪತ್ರಿಕಾಗೋಷ್ಠಿಯಲ್ಲಿ ಅಲ್ಪಸಂಖ್ಯಾತ ಘಟಕದ ಮುಖ್ಯಸ್ಥರಾದ ಜಬ್ಬಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಮೆಹರೋಜ್ ಖಾನ್, ಸಯೀದ್ ಅಹ್ಮದ್, ಮೆಹಬೂಬ್ ಪಾಷ. ರಾಮಚಂದ್ರಪ್ಪ ಹಾಗೂ ಮತ್ತಿತರರು ಉಪಸ್ಥಿತರಿದ್ದರು.



Join Whatsapp