ಫಿಫಾ ವಿಶ್ವಕಪ್ ಮೊದಲ ಸೆಮಿಫೈನಲ್ | 6ನೇ ಫೈನಲ್’ನತ್ತ ಅರ್ಜೆಂಟಿನಾ ಚಿತ್ತ

Prasthutha|

ಕತಾರ್’ನಲ್ಲಿ ನಡೆಯುತ್ತಿರುವ 22ನೇ ಆವೃತ್ತಿಯ ಫಿಫಾ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಹೋರಾಟಕ್ಕೆ ವೇದಿಕೆ ಸಜ್ಜಾಗಿದೆ. ಅರ್ಜೆಂಟಿನಾ-ಕ್ರೊವೇಷಿಯಾ, ಫ್ರಾನ್ಸ್- ಮೊರೊಕ್ಕೊ ತಂಡಗಳು ಅಂತಿಮ ನಾಲ್ಕರ ಘಟ್ಟದಲ್ಲಿ ಪರಸ್ಪರ ಎದುರಾಗಲಿವೆ. ಸೆಮಿಫೈನಲ್ನಲ್ಲಿ ಹೊರಬೀಳುವ ತಂಡಗಳು ಶನಿವಾರ 3ನೇ ಸ್ಥಾನಕ್ಕಾಗಿ ನಡೆಯುವ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
32 ತಂಡಗಳೊಂದಿಗೆ ನವೆಂಬರ್ 20ರಂದು ಅದ್ಧೂರಿ ಆರಂಭ ಪಡೆದಿದ್ದ ಟೂರ್ನಿಯಲ್ಲಿ ಇದೀಗ ಕೊನೆಯ 4 ತಂಡಗಳು ಸ್ಪರ್ಧಾ ಕಣದಲ್ಲುಳಿದಿವೆ. ಮಂಗಳವಾರ ತಡರಾತ್ರಿ ಲುಸೈಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ, ಕ್ರೊವೇಷಿಯಾ ಸವಾಲನ್ನು ಎದುರಿಸಲಿದೆ. ಎರಡನೇ ಸೆಮಿಫೈನಲ್ ಬುಧವಾರ ಅಲ್ ಬೈತ್ ಸ್ಟೇಡಿಯಂನಲ್ಲಿ ನಡೆಯಲಿದ್ದು, ಹಾಲಿ ಚಾಂಪಿಯನ್ ಫ್ರಾನ್ಸ್-ಮೊರೊಕ್ಕೊ ತಂಡಗಳು ಮುಖಾಮುಖಿಯಾಗಲಿವೆ.

- Advertisement -

92 ವರ್ಷಗಳ ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಅರ್ಜೆಂಟೀನಾ, ಎರಡು ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. 1978ರಲ್ಲಿ ಮೊದಲ ಬಾರಿಗೆ ಮತ್ತು 1986 ಮರಡೋನಾ ಸಾರಥ್ಯದಲ್ಲಿ ಚಿನ್ನದ ಟ್ರೋಫಿಗೆ ಮುತ್ತಿಕ್ಕಿತ್ತು. 1930, 1990 ಹಾಗೂ 2014 ರಲ್ಲಿ ರನ್ನರ್ ಅಪ್ ಆಗಿತ್ತು.

ಗ್ರೂಪ್ ಹಂತದ ಮೊದಲ ಪಂದ್ಯದಲ್ಲಿ ಸೌದಿ ಅರೇಬಿಯಾ ವಿರುದ್ಧ ಆಘಾತಕಾರಿ ಸೋಲು ಅನುಭವಿಸಿದ ಬಳಿಕ ದಿಟ್ಟ ಹೋರಾಟದ ಪ್ರದರ್ಶನ ನೀಡುತ್ತಿರುವ ಅರ್ಜೆಂಟಿನಾ, ಈ ಬಾರಿಯ ಚಾಂಪಿಯನ್ ಆಗುವ ನೆಚ್ಚಿನ ತಂಡ ಎನಿಸಿದೆ. ಅದರಲ್ಲೂ ದಿಗ್ಗಜ ಆಟಗಾರ ಲಿಯೊನೆಲ್ ಮೆಸ್ಸಿ ಪಾಲಿಗೆ ಇದು ಕೊನೆಯ ವಿಶ್ವಕಪ್ ಆಗಿರುವ ಕಾರಣ, ಈ ಬಾರಿ ಶತಾಯ ಗತಾಯ ಗಲ್ಲಲು ಪಣ ತೊಟ್ಟಿದೆ.

- Advertisement -

ಮತ್ತೊಂದೆಡೆ ಕೇವಲ 39 ಲಕ್ಷ ಜನಸಂಖ್ಯೆ ಹೊಂದಿರುವ ಕ್ರೊವೇಷಿಯಾ, ಸತತ ಎರಡನೇ ಬಾರಿಗೆ ಫಿಫಾ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದೆ. ಕಳೆದ ಬಾರಿ ಫೈನಲ್ ಫೈಟ್ ನಲ್ಲಿ ಫ್ರಾನ್ಸ್ ಎದುರು 2-4 ಗೋಲುಗಳ ಅಂತರದಲ್ಲಿ ಶರಣಾಗಿತ್ತು. ಹೀಗಾಗಿ ರಷ್ಯಾದಲ್ಲಿ ಕೈತಪ್ಪಿದ್ದ ಪಟ್ಟವನ್ನು ಈ ಬಾರಿ ಪಡೆದೇ ತೀರುವ ಉತ್ಸಾಹದಲ್ಲಿದೆ. ಸೆಮಿಪೈನಲ್ ಹಾದಿಯಲ್ಲಿ ಲೂಕಾ ಮಾಡ್ರಿಕ್ ಸಾರಥ್ಯದ ತಂಡ, ಬಲಿಷ್ಠ ಬ್ರೆಜಿಲ್, ಬೆಲ್ಜಿಯಂ ತಂಡಗಳನ್ನು ಹಿಂದಿಕ್ಕಿದೆ.



Join Whatsapp