ಚಿಕ್ಕಮಗಳೂರು: ಆಮ್ ಆದ್ಮಿ ಪಕ್ಷವು ಶೃಂಗೇರಿ ಕ್ಷೇತ್ರದಲ್ಲಿ ಸ್ವಚ್ಛ , ಭ್ರಷ್ಟಾಚಾರ ಮುಕ್ತ ಚುನಾವಣೆಗೆ ಆದ್ಯತೆ ನೀಡುತ್ತದೆ ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾ ಸಂಚಾಲಕರಾದಿ ಡಾ. ಸುಂದರಗೌಡ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಶೃಂಗೇರಿ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳು ಹಣ, ಹೆಂಡ ಇಲ್ಲದೆ ಚುನಾವಣೆ ನಡೆಸುವ ಬಗ್ಗೆ ಬಹಿರಂಗವಾಗಿ ಘೋಷಣೆ ಮಾಡಬೇಕು. ಇದಕ್ಕೆ ಆಮ್ ಆದ್ಮಿ ಪಕ್ಷವೂ ಕೈಜೋಡಿಸಲಿದೆ ಎಂದು ಹೇಳಿದರು.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೊಟ್ಯಾಂತರ ಆಸ್ತಿ ಮತ್ತು ಹಣ ಹೊಂದಿರುವವರು ಮಾತ್ರ ಚುನಾಯಿತರಾಗುತ್ತಿದ್ದು, ಉಳಿದವರು ಗುಲಾಮರಾಗಿ ಇರುವ ಪರಿಸ್ಥಿತಿಯಿದೆ. ದಿನಬಳಕೆಯ ವಸ್ತುಗಳು ಹಾಗೂ ಪೆಟ್ರೋಲ್, ಗ್ಯಾಸ್, ಬೆಲೆ ಗಗನಕ್ಕೆ ಏರಿದ್ದು, ಜನಸಾಮಾನ್ಯರ ಬದುಕೇ ದುಸ್ತರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಮ್ ಆದ್ಮಿ ಪಕ್ಷವು ಅಧಿಕಾರಕ್ಕೆ ಬಂದಲ್ಲಿ ಜನರ ತೆರಿಗೆ ಹಣವನ್ನು ಲೂಟಿ ಮಾಡಿದವರ ಸಂಪತ್ತು ಮುಟ್ಟುಗೊಲು ಹಾಕಿ, ಬಡವರಿಗೆ ಹಂಚುವ ಕೆಲಸ ಮಾಡಲಾಗುವುದು. ನಮ್ಮ ಪಕ್ಷ ಈಗಾಗಲೇ ದೆಹಲಿ, ಪಂಜಾಬ್, ಗುಜರಾತ್‌ನಲ್ಲಿ ಸಾಧನೆ ಮಾಡಿದ್ದು, ಮುಂಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲೂ ಸಾಧನೆ ಮಾಡಲಾಗುವುದು ಎಂದರು.
ಆಮ್ ಆದ್ಮಿಯು ಕೇವಲ ರಾಜಕೀಯ ಪಕ್ಷವಾಗಿರದೆ ಎಲ್ಲೆಡೆ ಸೇವಾ ಮನೋಭಾವನೆಯಿಂದ ಕಾರ್ಯನಿರ್ವಹಿಸುತ್ತಿದೆ. ಯುವಕರ ಕೈಗೆ ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ತಲುಪಿಸುವ ಮಹತ್ತರ ಕಾರ್ಯವನ್ನು ಮಾಡಲಾಗುತ್ತಿದೆ. ಶೃಂಗೇರಿ ಕ್ಷೇತ್ರದ ಒಟ್ಟು 254 ಬೂತ್‌ಗಳಲ್ಲಿಯೂ ಹಣ, ಹೆಂಡ ರಹಿತವಾಗಿ ಪ್ರಚಾರ ಮಾಡಿ ಭ್ರಷ್ಟಾಚಾರ ಇಲ್ಲದೆ ಯಾವ ರೀತಿ ಸೇವೆ ಮಾಡುತ್ತೇವೆ ಎಂದು ಅರಿವು ಮೂಡಿಸುತ್ತೇವೆ ಎಂದು ಹೇಳಿದರು.