ಮಂಡ್ಯ: ಜಾಮಿಯಾ ಮಸೀದಿ ಪ್ರಕರಣದಿಂದ ಕೋಮು ಸಂಘರ್ಷ ತಾರಕಕ್ಕೇರಿದ್ದು, ರಾತ್ರೋರಾತ್ರಿ ಸಂಘಪರಿವಾರದ ಕಾರ್ಯಕರ್ತರು ನಗರದ ಜಾಮಿಯಾ ಮಸೀದಿ ಮುಂದೆ ಧರಣಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ.
ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಜಾಮೀಯ ಮಸೀದಿಗೆ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ನವೆಂಬರ್ 4ರಂದು ಶ್ರೀರಂಗಪಟ್ಟಣದಲ್ಲಿ ಸಾವಿರಾರು ಹನುಮ ಮಾಲಾಧಾರಿಗಳ ಮಧ್ಯೆ ಯುವಕನೊಬ್ಬ ಗಂಜಾಮ್’ನಲ್ಲಿ ಮುಸ್ಲಿಂ ಮನೆಯೊಂದರ ಮೇಲಿದ್ದ ಹಸಿರು ಬಾವುಟ ಕಿತ್ತು ಹನುಮ ಧ್ವಜವನ್ನು ಹಾರಿಸಿದ್ದ. ಈ ಘಟನೆಗೆ ಸಂಬಂಧಿಸಿ ಮನೆಯ ಮಾಲೀಕ ನೀಡಿದ್ದ ದೂರಿನನ್ವಯ ಮಾಲಾಧಾರಿ ಯುವಕನನ್ನು ಪೊಲೀಸರು ಬಂಧಿಸಿ ಪಟ್ಟಣದ ಠಾಣೆಗೆ ಕರೆತಂದಿದ್ದರು.
ಈ ವೇಳೆ ಠಾಣೆಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಆರೋಪಿ ಯುವಕನೊಂದಿಗೆ ಮುಸ್ಲಿಮರ ತಂಟೆಗೆ ಹೋಗದಂತೆ ಎಚ್ಚರಿಕೆ ನೀಡಿ ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡಿ ಕಳಿಸಿದ್ದರು.
ಬೇಲ್ ಮೂಲಕ ಹೊರ ಬಂದ ಯುವಕ ತನಗೆ ಠಾಣೆಯಲ್ಲಿ ಪೊಲೀಸರು ಬೆದರಿಕೆ ಹಾಕಿದ್ದಾರೆಂದು ಸಂಘಪರಿವಾರದ ಮುಖಂಡರ ಬಳಿ ಹೇಳಿದ್ದಾನೆ. ಇದರಿಂದ ಕೆರಳಿದ ಸಂಘಪರಿವಾರದ ಕಾರ್ಯಕರ್ತರು ಪಟ್ಟಣದ ಪೊಲೀಸ್ ಠಾಣೆ ಮುಂದೆ ಧರಣಿ ಕುಳಿತು ತಮ್ಮ ಸಂಘಟನೆಯ ಯುವಕನನ್ನು ಬೆದರಿಸಿದ ಪೊಲೀಸ್ ಅಧಿಕಾರಿಯ ವಿರುದ್ದ ಪ್ರಕರಣ ದಾಖಲಿಸಿ ಅಮಾನತುಗೊಳಿಸುವಂತೆ ಆಗ್ರಹಿಸಿದ್ದಾರೆ.
ಈ ವೇಳೆ ಸ್ಥಳಕ್ಕೆ ಆಗಮಿಸಿದ ಎಸ್ ಪಿ ಗದರಿಸಿದ ಪೊಲೀಸ್ ಅಧಿಕಾರಿ ವಿರುದ್ಧ ಕ್ರಮ ಜರುಗಿಸುವ ಭರವಸೆ ನೀಡಿದ್ದಾರೆ.