ಫಿಫಾ ವಿಶ್ವಕಪ್‌ | ಅಂತಿಮ 8ರ ಘಟ್ಟದಲ್ಲಿ ಅರ್ಜೆಂಟೀನಾ- ನೆದರ್‌’ಲ್ಯಾಂಡ್ಸ್‌ ಮುಖಾಮುಖಿ, ಕ್ರೊವೇಷಿಯಾಗೆ ಬ್ರೆಜಿಲ್‌ ಸವಾಲು

Prasthutha|

ದೋಹಾ: ಕತಾರ್‌’ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ವಿಶ್ವಕಪ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌’ಗೆ ವೇದಿಕೆ ಸಜ್ಜಾಗಿದ್ದು, ಶುಕ್ರವಾರ ರಾತ್ರಿ ಎರಡು ಪಂದ್ಯಗಳು ನಡೆಯಲಿವೆ.

- Advertisement -

ರಾತ್ರಿ 8.30ಕ್ಕೆ ಆರಂಭವಾಗುವ ಮೊದಲ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್‌ ಬ್ರೆಜಿಲ್‌, ಕಳೆದ ಬಾರಿಯ ರನ್ನರ್‌ ಅಪ್‌ ಕ್ರೊವೇಷಿಯಾ ಸವಾಲನ್ನು ಎದುರಿಸಲಿದೆ. ಮಧ್ಯರಾತ್ರಿ ನಡೆಯುವ ಎರಡನೇ ಪಂದ್ಯದಲ್ಲಿ ಲಿಯೋನೆಲ್‌ ಮೆಸ್ಸಿ ಸಾರಥ್ಯದ ಅರ್ಜೆಂಟೀನಾ- ನೆದರ್‌’ಲ್ಯಾಂಡ್ಸ್‌ ತಂಡಗಳು ಮುಖಾಮುಖಿಯಾಗಲಿದೆ.

ಮೊದಲ ಪಂದ್ಯದಲ್ಲಿ ಮೇಲ್ನೋಟಕ್ಕೆ ಬ್ರೆಜಿಲ್‌ ಬಲಿಷ್ಠವಾಗಿದೆ. ಸ್ಟಾರ್‌ ಸ್ಟ್ರೈಕರ್‌ ನೇಮರ್‌, ಡಿಫೆಂಡರ್‌ ಅಲೆಕ್ಸ್‌ ಸ್ಯಾಂಡ್ರೋ ತಂಡಕ್ಕೆ ಮರಳಿದ್ದು ಪೂರ್ಣ ಸಾಮರ್ಥ್ಯದೊಂದಿಗೆ ಶುಕ್ರವಾರ ಕಣಕ್ಕಿಳಿಯಲಿದೆ. ಎದುರಾಳಿ ಕ್ರೊವೇಷಿಯಾ, ಬ್ರೆಜಿಲ್‌’ಗೆ ಸವಾಲೊಡ್ಡಬಲ್ಲ ತಂಡವನ್ನು ಹೊಂದಿಲ್ಲ. 2018ರ ಬ್ಯಾಲನ್‌ ಡಿಓರ್‌ ವಿಜೇತ ಲೂಕ ಮಾಡ್ರಿಚ್‌ ಮೇಲೆಯೇ ತಂಡ ಹೆಚ್ಚು ಅವಲಂಬಿತವಾಗಿದೆ. ಗ್ರೂಪ್‌ ಹಂತದಲ್ಲಿ ಕೇವಲ  ಕೆನಡಾ ವಿರುದ್ಧ ಮಾತ್ರ ಜಯ ಸಾಧಿಸಿದ್ದ ಕ್ರೊವೇಷಿಯಾ, ಉಳಿದ ಎರಡು ಪಂದ್ಯಗಳಲ್ಲಿ ಡ್ರಾ ಸಾಧಿಸಿತ್ತು. ಅಂತಿಮ 16 ಘಟ್ಟದಲ್ಲಿ ಪೆನಾಲ್ಟಿ ಶೂಟೌಟ್‌’ನಲ್ಲಿ ಜಪಾನ್‌ ತಂಡವನ್ನು ಮಣಿಸಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದೆ.

- Advertisement -

ಲುಸೈಲ್‌ ಸ್ಟೇಡಿಯಂನಲ್ಲಿ ತಡರಾತ್ರಿ ನಡೆಯುವ 2ನೇ ಪಂದ್ಯದಲ್ಲಿ ಅರ್ಜೆಂಟೀನಾಗೆ, ನೆದರ್‌’ಲ್ಯಾಂಡ್ಸ್‌ ಸವಾಲೊಡ್ಡಲಿದೆ. ಫುಟ್‌ಬಾಲ್‌ ಮಾಂತ್ರಿಕ ಲಿಯೋನೆಲ್‌ ಮೆಸ್ಸಿ ಆಡುತ್ತಿರುವ ವೃತ್ತಿ ಜೀವನದ ಕೊನೆಯ ವಿಶ್ವಕಪ್‌ ಎಂಬ ಕಾರಣದಿಂದಲೇ ಕತಾರ್‌ ವಿಶ್ವಕಪ್‌ ಹೆಚ್ಚು ಸುದ್ದಿಯಲ್ಲಿದೆ. ಟೂರ್ನಿಯಲ್ಲಿ ಇದುವರೆಗೂ ಆಡಿರುವ 4 ಪಂದ್ಯಗಳಲ್ಲಿ ಮೆಸ್ಸಿ 3 ಗೋಲು ಗಳಿಸಿದ್ದು, 1 ಅಸಿಸ್ಟ್‌ ಮಾಡಿದ್ದಾರೆ. ಮತ್ತೊಬ್ಬ ಅನುಭವಿ ಆಟಗಾರ ಏಂಜಲ್‌ ಡಿ ಮರಿಯಾ ಗಾಯದಿಂದ ಚೇತರಸಿಕೊಂಡಿದ್ದರೂ, ಇಂದಿನ ಪಂದ್ಯದಲ್ಲಿ ಆಡುವುದು ಇನ್ನೂ ಖಚಿತವಾಗಿಲ್ಲ.  

ಅರ್ಜೆಂಟೀನಾಗೆ, ನೆದರ್‌’ಲ್ಯಾಂಡ್ಸ್‌ ತಂಡಗಳು ಫಿಫಾ ವಿಶ್ವಕಪ್‌ ಟೂರ್ನಿಯಲ್ಲಿ ಇದುವರೆಗೂ 9 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ನೆದರ್‌’ಲ್ಯಾಂಡ್ಸ್‌ 4 ಮತ್ತು ಅರ್ಜೆಂಟೀನಾ 3 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. 2 ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿವೆ.



Join Whatsapp