ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರುವುದು ಖಚಿತವಾಗುತ್ತಿದ್ದಂತೆಯೇ ‘ಆಪರೇಷನ್ ಕಮಲ’ದ ಭೀತಿ ಕೂಡ ಹೆಚ್ಚಾಗಿದೆ.
68 ಕ್ಷೇತ್ರಗಳ ವಿಧಾನಸಭೆಯಲ್ಲಿ ಅಧಿಕಾರ ಹಿಡಿಯಲು ಕನಿಷ್ಠ 35 ಸೀಟುಗಳ ಅಗತ್ಯವಿದೆ. ಗುರುವಾರ ಬೆಳಿಗ್ಗೆ ಆರಂಭವಾಗಿರುವ ಮತ ಎಣಿಕೆಯ ಮೊದಲ ಟ್ರೆಂಡ್, ಬಿಜೆಪಿ ಹಾಗೂ ಕಾಂಗ್ರೆಸ್ ಜಿದ್ದಾಜಿದ್ದಿಗೆ ಸಾಕ್ಷಿಯಾಗಿತ್ತು. ಮಧ್ಯಾಹ್ನದ ವೇಳೆಗೆ ಕಾಂಗ್ರೆಸ್ ಬಹುಮತದ ಸನಿಹಕ್ಕೆ ಬಂತು. ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತವಾಗುತ್ತಿದ್ದಂತೆ ಕಾಂಗ್ರೆಸ್ ಶಾಸಕರು ಕೈತಪ್ಪಿ ಹೋಗದಂತೆ ನೋಡಿಕೊಳ್ಳಲು ಪಕ್ಷದ ವರಿಷ್ಠರು ಮುಂದಾಗಿದ್ದಾರೆ. ಏಕೆಂದರೆ ಈ ಹಿಂದೆ ನಡೆದ ಹಲವು ವಿಧಾನಸಭಾ ಚುನಾವಣೆಗಳ ವೇಳೆ ಕಾಂಗ್ರೆಸ್ ಶಾಸಕರನ್ನು ಬಿಜೆಪಿ ಖರೀದಿಸಿತ್ತು. ಇದು ಇಲ್ಲಿ ಪುನರಾವರ್ತನೆಯಾಗದಂತೆ ಮೊದಲೇ ಕಾರ್ಯತಂತ್ರ ರೂಪಿಸಲು ಪಕ್ಷದ ವರಿಷ್ಠರು ಸೂಚನೆ ನೀಡಿದ್ದಾರೆ.
ನಿಖರ ಫಲಿತಾಂಶ ಹೊರಬರುವ ಮುನ್ನವೇ ಹೊಸ ಶಾಸಕರನ್ನು ಬಿಜೆಪಿ ತನ್ನ ಕಡೆಗೆ ಸೆಳೆದುಕೊಂಡು ಸರ್ಕಾರ ರಚಿಸುವ ಪ್ರಯತ್ನಕ್ಕೆ ಮುಂದಾಗಬಹುದು ಎಂಬ ಭಯ ಕೈ ಪಾಳೆಯವನ್ನು ಕಾಡತೊಡಗಿದೆ. ಇದಕ್ಕಾಗಿ ಗೆದ್ದ ಅಭ್ಯರ್ಥಿಗಳನ್ನು ಕೂಡಲೇ ಒಗ್ಗೂಡಿಸಿ ರಾಜಸ್ಥಾನಕ್ಕೆ ಸ್ಥಳಾಂತರಿಸಲು ಚಿಂತನೆ ನಡೆಸಿರುವುದಾಗಿ ವರದಿಯಾಗಿದೆ. ಸಂಪೂರ್ಣ ಫಲಿತಾಂಶ ಪ್ರಕಟವಾಗುವವರೆಗೂ ಕಾದರೆ, ಗೆದ್ದ ಶಾಸಕರು ಕೈತಪ್ಪಿ ಹೋಗಬಹುದು ಎಂಬ ಭೀತಿ ಕಾಂಗ್ರೆಸ್ ಪಕ್ಷವನ್ನು ಕಾಡುತ್ತಿದೆ.