ಬೆಳ್ತಂಗಡಿ : ಇಲ್ಲಿನ ಉಜಿರೆಯ ರಥಬೀದಿಯಲ್ಲಿ ಮನೆ ಮುಂದೆಯೇ ಆಟವಾಡುತ್ತಿದ್ದ ಬಾಲಕನನ್ನು ಅಪಹರಿಸಿದ್ದ ದುಷ್ಕರ್ಮಿಗಳನ್ನು ಕೇವಲ 36 ಗಂಟೆಗಳಲ್ಲಿ ಪತ್ತೆ ಹಚ್ಚಿ, ಬಾಲಕನನ್ನು ರಕ್ಷಿಸಿದ ಪೊಲೀಸರಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಉಜಿರೆಯ ಉದ್ಯಮಿ ಬಿಜೊಯ್ ಅವರ ಪುತ್ರ, ಎಂಟರ ಹರೆಯದ ಬಾಲಕ ಅನುಭವ್ ನನ್ನು ಕೋಲಾರದಲ್ಲಿ ಸುರಕ್ಷಿತವಾಗಿ ಪತ್ತೆ ಹಚ್ಚಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಏಳು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರ ಬೆಳಗ್ಗೆ 5 ಗಂಟೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರ ವಿಶೇಷ ತಂಡ ಕೋಲಾರ ಜಿಲ್ಲೆಯ ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಗುವನ್ನು ಸುರಕ್ಷಿತವಾಗಿ ಪಾರು ಮಾಡಿದ್ದಾರೆ. ಆರೋಪಿಗಳನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುತ್ತದೆ. ಕೋಲಾರದಿಂದ ಆರೋಪಿಗಳನ್ನು ಬೆಳ್ತಂಗಡಿಗೆ ಕರೆ ತರಲು ವಿಶೇಷ ತನಿಖಾ ತಂಡ ಪ್ರಯಾಣ ಆರಂಭಿಸಿದೆ ಎಂದು ತಿಳಿದು ಬಂದಿದೆ.
ಕೋಲಾರದ ಮಾಲೂರು ತಾಲೂಕಿನ ಕೊರ್ನ ಹೊಸಹಳ್ಳಿ ಮಂಜುನಾಥ್ ಎಂಬಾತನ ಮನೆಯಲ್ಲಿ ಮಗುವನ್ನು ಬಚ್ಚಿಡಲಾಗಿತ್ತು. ಆತನ ಮೊಬೈಲ್ ಅನ್ನು ಉಪಯೋಗಿಸಿ ಅಪಹರಣಕಾರರು ಕರೆ ಮಾಡಿದ್ದಾರೆ. ಕೋಲಾರ ಎಸ್ಪಿ ಕಾರ್ತಿಕ್ ರೆಡ್ಡಿ ನೆರವಿನಿಂದ ಮಂಗಳೂರು ಪೊಲೀಸ್ ತಂಡ ಬಂಧನ ಕಾರ್ಯಾಚರಣೆ ನಡೆಸಿದೆ.
ಎಲೆಕ್ಟ್ರಾನಿಕ್ ಸಿಟಿಯ ಕೋಮಲ್, ಮಂಡ್ಯದ ಗಂಗಾಧರ್ ಸೇರಿದಂತೆ ನಾಲ್ವರು ಅಪಹರಣಕಾರರು ಎಂಬ ಮಾಹಿತಿಯಿದ್ದು, ಆರೋಪಿಗಳ ವಿಚಾರಣೆಯ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಬಹುದು.
ಸಿನಿಮೀಯ ರೀತಿಯಲ್ಲಿ ಅಪಹರಣಗೊಂಡ ಬಾಲಕನ ರಕ್ಷಣಾ ಕಾರ್ಯಾಚರಣೆಯೂ ಸಿನಿಮೀಯ ಮಾದರಿಯಲ್ಲೇ ಸುಖಾಂತ್ಯಗೊಂಡಿದೆ. ಬಾಲಕನನ್ನು ರಕ್ಷಿಸಿದ ಪೊಲೀಸರ ಸಾಧನೆಗೆ ಎಲ್ಲೆಡೆಯಿಂದ ಪ್ರಶಂಸೆಯ ಸುರಿಮಳೆ ಬರಲಾರಂಭಿಸಿದೆ.