ಮಂಗಳೂರು: ಅರ್ಹರಿದ್ದು, ಇನ್ನೂ ಸೇರ್ಪಡೆಯಾಗದ ಮತದಾರರನ್ನು ಮತದಾರರ ಪಟ್ಟಿಗೆ ಕೂಡಲೇ ಸೇರಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಡಿ.3ರ ಶನಿವಾರ ನಗರದ ನಗರದ ಜಿಲ್ಲಾ ಪಂಚಾಯತ್‍ನ ನೇತ್ರಾವತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ-2023 ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತೃತೀಯ ಲಿಂಗಿಗಳು, ಬುಡಕಟ್ಟು ಜನಾಂಗದ ನಾಗರೀಕರು, ಯುವ ಮತದಾರರು ಸೇರಿದಂತೆ ಇನ್ನೂ ಹಲವು ವರ್ಗದ ಅರ್ಹರು ಮತದಾರರ ಪಟ್ಟಿಯಿಂದ ಹೊರಗುಳಿದಿದ್ದಾರೆ, ಅಂತಹವರನ್ನು ಹುಡುಕಿ ಆದಷ್ಟು ಬೇಗ ಅವರ ಹೆಸರುಗಳನ್ನು ಸೇರ್ಪಡೆಗೊಳಿಸುವುದು ಮತದಾರರ ಸಾಕ್ಷರತಾ ಸಂಘದ ಕರ್ತವ್ಯ ಎಂದರು.
ಸಧ್ಯ ಜಿಲ್ಲೆಯಲ್ಲಿ ಯುವ ಮತದಾರರ ಅನುಪಾತ ಕಡಿಮೆಯಿದೆ, ಅರ್ಹ ಯುವಕರಿಗೆ ಮತದಾನದ ಮಹತ್ವದ ಅರಿವು ಮತ್ತು ಜಾಗೃತಿ ಮೂಡಿಸುವ ಕೆಲಸವಾಗಬೇಕು, ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಲು ಅಲೆದಾಡುವ ಅಗತ್ಯವಿಲ್ಲ ವೋಟರ್ ಹೆಲ್ಪ್ ಲೈನ್ ಆಪ್ ಅಥವಾ ನ್ಯಾಷನಲ್ ವೋಟರ್ ಸರ್ವಿಸ್ ಪೋರ್ಟಲ್ ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದಾಗಿದ್ದು ಇವುಗಳ ಬಗ್ಗೆ ವ್ಯಾಪಕ ಪ್ರಚಾರ ಮಾಡುವಂತೆ ಕರೆ ನೀಡಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಜಯಣ್ಣ, ಕಾಲೇಜು ಶಿಕ್ಷಣದ ವಿಶೇಷ ಅಧಿಕಾರಿ ದೇವಿಪ್ರಸಾದ್, ಸಂಪನ್ಮೂಲ ವ್ಯಕ್ತಿ ಪ್ರಮಿಳಾ ರಾವ್, ವಿಶ್ವವಿದ್ಯಾಲಯ ಕಾಲೇಜು ಮಂಗಳೂರಿನ ಪ್ರಾಧ್ಯಾಪಕಿ ಭಾರತಿ ಪಿಲಾರ್ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.