ವಿದೇಶಿ ವಿದ್ಯಾರ್ಥಿನಿಯ ಘನತೆಗೆ ಭಂಗ: ಹೈದರಾಬಾದ್ ವಿವಿ ಪ್ರೊಫೆಸರ್ ಬಂಧನ

Prasthutha|

ಹೈದರಾಬಾದ್:   ವಿದೇಶಿ ವಿದ್ಯಾರ್ಥಿನಿಯ ಘನತೆಗೆ ಕುಂದುಂಟಾಗುವಂತೆ ನಡೆದುಕೊಂಡ ಹೈದರಾಬಾದ್ ವಿಶ್ವವಿದ್ಯಾನಿಲಯದ ಹಿರಿಯ ಪ್ರೊಫೆಸರ್ ಒಬ್ಬರನ್ನು ಸೈಬರಾಬಾದ್ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಕ್ಯಾಂಪಸ್ ನಲ್ಲಿ ವಿದ್ಯಾರ್ಥಿನಿಯರ ರಕ್ಷಣೆಯನ್ನು ಕೋರಿ ವಿದ್ಯಾರ್ಥಿಗಳು ಕ್ಯಾಂಪಸಿನಲ್ಲಿ ಪ್ರತಿಭಟನೆ ನಡೆಸಿದರು.

- Advertisement -

ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿಯು ಘಟನೆಯನ್ನು ಖಂಡಿಸಿದ್ದು, ಈಗಿನಿಂದಲೇ ಆರೋಪಿ ಪ್ರೊಫೆಸರನ್ನು ಅಮಾನತಿನಲ್ಲಿ ಇಡಲಾಗಿದೆ ಎಂದು ತಿಳಿಸಿದೆ.

ವಿಶ್ವವಿದ್ಯಾನಿಲಯದ ಆವರಣದಲ್ಲೇ ಇರುವ ಪ್ರೊಫೆಸರ್ ಮನೆಗೆ ಪಠ್ಯದ ಸಂಬಂಧ ಆಕೆಯನ್ನು ಕರೆಸಿದ ಪ್ರೊಫೆಸರ್ ಪುಸ್ತಕ ಹಂಚಿಕೊಳ್ಳುವ ಬಗ್ಗೆ ಮಾತನಾಡಿ, ಎರಡು ಗ್ಲಾಸುಗಳಿಗೆ ಮದ್ಯ ಹಾಕಿ ಕುಡಿಯಲು ಕರೆದು ಕೆಟ್ಟದಾಗಿ ಮಾತನಾಡಿದ್ದಾರೆ ಎಂದು ದೂರು ನೀಡಲಾಗಿದೆ.

- Advertisement -

ಆ ವಿದೇಶಿ ವಿದ್ಯಾರ್ಥಿನಿಗೆ ಆಕೆಯ ಮಾತೃ ಭಾಷೆಯ ಹೊರತಾಗಿ ಇಲ್ಲಿನ ಯಾವ ಭಾಷೆಯೂ ಗೊತ್ತಿಲ್ಲದಿರುವುದನ್ನು ಪ್ರೊಫೆಸರ್ ದುರುಪಯೋಗಿಸಿಕೊಳ್ಳಲು ನೋಡಿದರು ಎನ್ನಲಾಗಿದೆ. ವಿದ್ಯಾರ್ಥಿನಿ ದೂರು ಸಲ್ಲಿಸಿರುವುದಾಗಿ ಮಾದಾಪುರ್ ಉಪ ಪೋಲೀಸ್ ಆಯುಕ್ತರಾದ ಕೆ. ಶಿಲ್ಪವಲ್ಲಿ ತಿಳಿಸಿದ್ದಾರೆ.

“ಪುಸ್ತಕ ಕೊಡುವುದಾಗಿ ಕರೆದಿದ್ದಾರೆ. ಮದ್ಯ ಕುಡಿಯಲು ಆಹ್ವಾನಿಸಿದ್ದಾರೆ. ಆಕೆ ಪ್ರತಿಭಟಿಸಿದ್ದಾಳೆ. ಮನೆಯಲ್ಲಿ ಆಗ ಬೇರೆ ಯಾರೂ ಇಲ್ಲದ್ದರಿಂದ ಇದು ಹೆಣ್ಣಿನ ಘನತೆಗೆ ಕುಂದು ತರುವ ಪ್ರಯತ್ನವಾಗಿದೆ. ನಾವು ತನಿಖೆ ನಡೆಸುತ್ತಿದ್ದು, ಭಾರತೀಯ ದಂಡ ಸಂಹಿತೆಯ 354ನೇ ವಿಧಿಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ” ಎಂದು ಡಿಸಿಪಿ ತಿಳಿಸಿದರು.

ಲೈಂಗಿಕ ಶೋಷಣೆ ಎಂದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಆದರೆ ಪೊಲೀಸರು ಇದು ಲೈಂಗಿಕ ಶೋಷಣೆಯಾಗಲಿ, ಹಲ್ಲೆಯಾಗಲಿ ಅಲ್ಲ ಎಂದು ಹೇಳಿದ್ದಾರೆ.

ಎಷ್ಟು ಕರೆ ಮಾಡಿದರೂ ರಿಜಿಸ್ಟ್ರಾರ್ ಕರೆ ಸ್ವೀಕರಿಸಿಲ್ಲ. ನಾವು ಇಡೀ ರಾತ್ರಿ ವಿದ್ಯಾರ್ಥಿನಿಯ ಪರವಾಗಿ ವಿವಿ ಗೇಟಿನಲ್ಲಿ ಕುಳಿತಿದ್ದೆವು ಎಂದು ವಿದ್ಯಾರ್ಥಿ ಸಂಘಟನೆ ಪದಾಧಿಕಾರಿಗಳು ದೂರಿದ್ದಾರೆ.



Join Whatsapp