ವಿದ್ಯಾರ್ಥಿವೇತನ ನಿಲ್ಲಿಸಿರುವುದು ಅಹಿಂದ ವರ್ಗದ ಮಕ್ಕಳ ಶಿಕ್ಷಣದ ಹಕ್ಕುಗಳನ್ನು ಕಸಿದುಕೊಳ್ಳುವ ತಂತ್ರ: ಅಬ್ದುಲ್ ಮಜೀದ್ ಮೈಸೂರು

Prasthutha|

ಬೆಂಗಳೂರು: 2022 – 23ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಒಂದರಿಂದ ಎಂಟನೇ ತರಗತಿಯ ಎಸ್.ಸಿ, ಎಸ್.ಟಿ, ಇತರೆ ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನವನ್ನು ಮೋದಿ ನೇತೃತ್ವದ ಬಿಜೆಪಿ ಸರ್ಕಾರ ರದ್ದು ಮಾಡಿರುವುದು ಹಂತ ಹಂತವಾಗಿ ಈ ವರ್ಗಗಳ ಶಿಕ್ಷಣದ ಸೌಲಭ್ಯ ಮತ್ತು ಹಕ್ಕುಗಳನ್ನು ಕಸಿಯುವ ತಂತ್ರದ ಭಾಗವಾಗಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪಕ್ಷದ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ತಿಳಿಸಿದ್ದಾರೆ.

- Advertisement -

ಜಗತ್ತಿನಲ್ಲಿಯೇ ಶಿಕ್ಷಣಕ್ಕೆ ಅತ್ಯಂತ ಕಡಿಮೆ ಅನುದಾನ ಒದಗಿಸುವ ದೇಶಗಳ ಪಟ್ಟಿಯಲ್ಲಿ ಭಾರತವು ಒಂದು. ಸರ್ಕಾರವೇ ನಿಯೋಜನೆ ಮಾಡಿದ ಎನ್’ಇಪಿ ಶಿಕ್ಷಣಕ್ಕೆ ಜಿಡಿಪಿಯ ಕನಿಷ್ಠ 6% ಅನ್ನು ವ್ಯಯಿಸಬೇಕು ಎಂದು ಶಿಫಾರಸ್ಸು ಮಾಡಿದೆ. ಆದರೆ ಅದರ ಅರ್ಧದಷ್ಟನ್ನು ಕೂಡ ಈ ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಒದಗಿಸುತ್ತಿಲ್ಲ ಎಂದು ಅವರು ಆರೋಪಿಸಿದರು. 2019-20 ರಲ್ಲಿ 2.8%, 2020-21 ರಲ್ಲಿ 3.1% ಮತ್ತು 2021-22 ರಲ್ಲಿಯೂ 3.1% ರಷ್ಟು ಮಾತ್ರ ಶಿಕ್ಷಣಕ್ಕೆ ಮೀಸಲಿಡಲಾಗಿದೆ. ಅಷ್ಟು ಸಾಲದು ಎಂಬಂತೆ ಈಗ ಅವಶ್ಯಕತೆ ಇರುವ ಮಕ್ಕಳಿಗೆ ಅನ್ಯಾಯ ಮಾಡಿ ಓದುವ ಮಕ್ಕಳ ವಿದ್ಯಾರ್ಥಿವೇತನವನ್ನು ಕಸಿದುಕೊಳ್ಳುತ್ತಿರುವುದನ್ನು ಎಸ್‌ಡಿಪಿಐ ಪಕ್ಷ ತೀವ್ರವಾಗಿ ವಿರೋಧಿಸುತ್ತದೆ ಎಂದು ಮಜೀದ್  ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಮ್ಮ ಸುಳ್ಳುಗಳನ್ನು ಪ್ರಚಾರ ಮಾಡಲು ಸಾವಿರಾರು ಕೋಟಿ ವ್ಯಯಿಸುವ ಮೋದಿ ಸರ್ಕಾರ ಈ ರೀತಿ ದ್ರೋಹಕ್ಕೆ ಕೈ ಹಾಕದೆ ತಕ್ಷಣ ಎಲ್ಲ ವರ್ಗಗಳ ಮಕ್ಕಳ ವಿದ್ಯಾರ್ಥಿ ವೇತನವನ್ನು ಬಿಡುಗಡೆ ಮಾಡಬೇಕು ಎಂದು ಮಜೀದ್   ತಮ್ಮ ಹೇಳಿಕೆ ಮೂಲಕ ಒತ್ತಾಯ ಮಾಡಿದ್ದಾರೆ.



Join Whatsapp