ಗ್ರೂಪ್ ಹಂತದ ನಿರ್ಣಾಯಕ ಅಂತಿಮ ಪಂದ್ಯದಲ್ಲಿ ಪೋರ್ಚುಗಲ್ ತಂಡವನ್ನು ಮಣಿಸಿದ ದಕ್ಷಿಣ ಕೊರಿಯಾ, ಫಿಫಾ ವಿಶ್ವಕಪ್ ಟೂರ್ನಿಯ ಅಂತಿಮ 16ರ ಘಟ್ಟ ಪ್ರವೇಶಿಸಿದೆ.
ಕತಾರ್‌ನ ಎಜುಕೇಶನ್ ಸಿಟಿ ಸ್ಟೇಡಿಯಂನಲ್ಲಿ ನಡೆದ ʻಡೂ ಆರ್ ಡೈʼ ಪಂದ್ಯದಲ್ಲಿ ದಕ್ಷಿಣ ಕೊರಿಯಾ, ಕ್ರಿಸ್ಟಿಯಾನೊ ರೊನಾಲ್ಡೊ ಸಾರಥ್ಯದ ಪೋರ್ಚುಗಲ್ ತಂಡವನ್ನು 2-1 ಗೋಲುಗಳ ಅಂತರದಲ್ಲಿ ರೋಚಕವಾಗಿ ಮಣಿಸಿತು. ಈ ಗೆಲುವಿನೊಂದಿಗೆ ಕೊರಿಯಾ, ಗ್ರೂಪ್ Hನಿಂದ ಎರಡನೇ ತಂಡವಾಗಿ ಅಂತಿಮ 16ರ ಘಟ್ಟ ಪ್ರವೇಶಿಸಿತು.
ನಾಕೌಟ್ ಹಂತ ಪ್ರವೇಶಿಸಲು ಪೋರ್ಚುಗಳ್ ವಿರುದ್ಧದ ಪಂದ್ಯದಲ್ಲಿ ಕೊರಿಯಾಗೆ ಗೆಲುವು ಅನಿವಾರ್ಯವಾಗಿತ್ತು. ಪಂದ್ಯದ ಪೂರ್ಣಾವಧಿಯ 90 ನಿಮಿಷಗಳ ವೇಳೆ, ಊಭಯ ತಂಡಗಳು ತಲಾ 1 ಗೋಲು ಗಳಿಸಿ ಸಮಬಲ ಸಾಧಿಸಿದ್ದವು.
ಇದೇ ವೇಳೆ ಗ್ರೂಪ್ Hನ ಎರಡನೇ ಪಂದ್ಯದಲ್ಲಿ ಘಾನ ವಿರುದ್ಧದ ಪಂದ್ಯದಲ್ಲಿ 2-0 ಗೋಲುಗಳ ಮುನ್ನಡೆ ಸಾಧಿಸಿ, ಇನ್ನೇನು ನಾಕೌಟ್ ಹಂತ ಪವ್ರೇಶಿಸಿದ ಸಂಭ್ರಮಾಚರಣೆಗೆ ಸಿದ್ಧವಾಗಿತ್ತು. ಆದರೆ ಎಜುಕೇಶನ್ ಸಿಟಿ ಸ್ಟೇಡಿಯಂನಲ್ಲಿ ನೀಡಲಾದ 8 ನಿಮಿಷಗಳ ಹೆಚ್ಚುವರಿ ಸಮಯದ ಮೊದಲ ನಿಮಿಷದಲ್ಲೇ ಎಲ್ಲವೂ ಅದಲು ಬದಲಾಗಿತ್ತು. ಸಹ ಆಟಗಾರನ ಸಮಯೋಚಿತ ಮಿಂಚಿನ ಓಟದ ಮೂಲಕ ನೀಡಿದ ಪಾಸ್ ಪಡೆದ ಹ್ವಾಂಗ್ ಹೀ-ಚಾನ್ ಕೊರಿಯಾ ಪಾಲಿನ 2ನೇ ಗೋಲು ದಾಖಲಿಸಿದರು. ಕೊರಿಯಾ ಪಾಲಿಗೆ ಇದು ಕೇವಲ ಒಂದು ಗೋಲಿನ ಸಂಭ್ರಮ ಮಾತ್ರವಾಗಿರಲಿಲ್ಲ, ಬದಲಿಗೆ ಪ್ರತಿಷ್ಠಿತ ಕೂಟದ ಮುಂದಿನ ಹಂತಕ್ಕೇರಲು ತೆರೆದ ಹೆಬ್ಬಾಗಿಲಾಗಿತ್ತು.
ಅಲ್ ಜನೌಬ್ ಸ್ಟೇಡಿಯಂನಲ್ಲಿ ಏಕಕಾಲದಲ್ಲಿ ನಡೆದ 2ನೇ ಪಂದ್ಯದಲ್ಲಿ ತಾರಾ ಆಟಗಾರರನ್ನು ಹೊಂದಿದ್ದ ಉರುಗ್ವೆ, ಆಫ್ರಿಕನ್ ಶಕ್ತಿಯಾದ ಘಾನಾವನು 2-0 ಅಂತರದಲ್ಲಿ ಮಣಿಸಿತಾದರೂ, ಕೊರಿಯಾ ಕೊನೆಯ ಕ್ಷಣದಲ್ಲಿ ಗೋಲು ದಾಖಲಿಸಿದ್ದು, ಉರುಗ್ವೆ ಗೆಲುವಿನ ಸಂಭ್ರಮಕ್ಕೆ ತಣ್ಣೀರೆರಚಿತು.
ಗ್ರೂಪ್ Hನಲ್ಲಿ ಆಡಿದ ಮೂರು ಪಂದ್ಯಗಳಿಂದ ದಕ್ಷಿಣ ಕೊರಿಯಾ ಮತ್ತು ಉರುಗ್ವೆ ತಂಡಗಳು ತಲಾ 4 ಅಂಕಗಳಿತ್ತು. ಆದರೆ ಒಟ್ಟು ಗೋಲು ವತ್ಯಾಸದಲ್ಲಿ ಕೊರಿಯಾ ಮುಂದಿನ ಹಂತ ಪ್ರವೇಶಿಸಿತು.