►ಮೃತದೇಹವನ್ನು ಮಾಜಿ ಮುಖ್ಯಮಂತ್ರಿಯವರ ಮುಂದಿಟ್ಟು ನ್ಯಾಯ ಕೊಡಿಸುವಂತೆ ಮನವಿ
ತುಮಕೂರು: ಆಸ್ಪತ್ರೆಯೊಂದರಲ್ಲಿ ವೈದ್ಯರಿಲ್ಲದೆ ಬಾಲಕ ಸಾವಿಗೀಡಾಗಿದ್ದು, ಶವವನ್ನು ಕುಟುಂಬಸ್ಥರು ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿಯವರ ಮುಂದಿಟ್ಟು ನ್ಯಾಯ ಕೊಡಿಸುವಂತೆ ಮನವಿ ಮಾಡಿಕೊಂಡ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.
ಮಧುಗಿರಿ ತಾಲೂಕಿನ ಕೊಡಿಗೆನಹಳ್ಳಿಯಲ್ಲಿ ಈ ಪ್ರಕರಣ ನಡೆದಿದೆ. ಕೊಡಿಗೆನಹಳ್ಳಿ ನಿವಾಸಿ ಶೌಕತ್ ಎಂಬವರ ಪುತ್ರ ಸಾದೀಕ್ ಸಾವಿಗೀಡಾದ ಬಾಲಕ. ಬೆಳಗ್ಗೆ ಶಾಲೆಗೆ ಹೋಗಿದ್ದ ಬಾಲಕ ಮನೆಗೆ ಬಂದಾಗ ನೀರಿನ ಸಂಪ್ಗೆ ಬಿದ್ದು ಅಸ್ವಸ್ಥನಾಗಿದ್ದ. ಕೂಡಲೇ ಈತನನ್ನು ಕೊಡಿಗೆನಹಳ್ಳಿ ಆಸ್ಪತ್ರೆಗೆ ಕುಟುಂಬಸ್ಥರು ಕರೆತಂದಿದ್ದರು. ಆದರೆ ಆಸ್ಪತ್ರೆಯಲ್ಲಿ ಆ ಸಮಯದಲ್ಲಿ ವೈದ್ಯರಿಲ್ಲದೆ ಚಿಕಿತ್ಸೆ ಸಿಗದ್ದರಿಂದ ಬಾಲಕ ಮೃತಪಟ್ಟಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಅಲ್ಲದೆ ಪಂಚರತ್ನ ಯಾತ್ರೆಯಲ್ಲಿದ್ದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಬಳಿಗೆ ಬಾಲಕನ ಶವ ತಂದಿರಿಸಿ, ನ್ಯಾಯ ಕೊಡಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಕುಮಾರಸ್ವಾಮಿ, ಸ್ಥಳದಲ್ಲೇ ಸಿಎಂ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ಗೆ ಕರೆ ಮಾಡಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಡಿಎಚ್ಒ ವಿರುದ್ಧ ಕ್ರಮಕೈಗೊಳ್ಳುವಂತೆ ಹೇಳಿದ್ದಲ್ಲದೆ, ವೈದ್ಯರ ವಿರುದ್ಧ ಕೊಡಿಗೆನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವಂತೆ ಕುಟುಂಬಸ್ಥರಿಗೆ ಸೂಚನೆ ನೀಡಿದ್ದಾರೆ.