ಸ್ಯಾನ್ ಫ್ರಾನ್ಸಿಕೋ : ಆಲೋಚನೆಗಳನ್ನು ಗ್ರಹಿಸಿ, ಕಂಪ್ಯೂಟರ್ ಹಾಗೂ ಮೊಬೈಲ್’ನೊಂದಿಗೆ ನೇರ ಸಂವಹನ ನಡೆಸಲು ಸಹಾಯ ಮಾಡುವಂತಹ ಚಿಪ್ ಒಂದನ್ನು ಮಾನವನ ಮೆದುಳಿಗೆ ಅಳವಡಿಸುವ ಕಾರ್ಯ ಇನ್ನು ಆರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಟ್ವಿಟ್ಟರ್ ಮುಖ್ಯಸ್ಥ ಎಲಾನ್ ಮಸ್ಕ್ ಹೇಳಿದ್ದಾರೆ.
ಎಲಾನ್ ಮಸ್ಕ್ ಒಡೆತನದ ‘ನ್ಯೂರಾಲಿಂಕ್’ ಎನ್ನುವ ಕಂಪನಿ ಇಂಥಹದ್ದೊಂದು ಸಾಧನ ತಯಾರಿಸಿದ್ದು, ಆಲೋಚನೆಗಳ ಮೂಲಕ ಮನುಷ್ಯರು ನೇರವಾಗಿ ಕಂಪ್ಯೂಟರ್ ಅಥವಾ ಮೊಬೈಲ್’ನೊಂದಿಗೆ ಸಂವಹನ ಮಾಡಬಹುದಾಗಿದೆ.
ಈ ಸಾಧನದ ಬಳಕೆಗೆ ಅನುಮತಿ ಕೋರಿ ಎಲ್ಲಾ ದಾಖಲೆಗಳನ್ನು ಎಫ್ ಡಿಎಗೆ (ಅಮೆರಿಕದ ಆಹಾರ ಹಾಗೂ ಔಷಧಿ ಪ್ರಾಧಿಕಾರ) ಸಲ್ಲಿಸಲಾಗಿದೆ. ಬಹುಶಃ ಇನ್ನು ಆರು ತಿಂಗಳಲ್ಲಿ ಮನುಷ್ಯರ ತಲೆಯಲ್ಲಿ ಮೊದಲ ಚಿಪ್ ಅಳವಡಿಕೆಯಾಗಲಿದೆ. ನಾನು ಕೂಡ ಈ ಚಿಪ್ ಅನ್ನು ಅಳವಡಿಸಿಕೊಳ್ಳುತ್ತೇನೆ ಎಂದು ಮಸ್ಕ್ ಹೇಳಿದ್ದಾರೆ.
ಈಗಾಗಲೇ ಪ್ರಾಣಿಗಳ ಮೇಲೆ ಈ ಪ್ರಯೋಗ ನಡೆಸಿದ್ದು, ನಾಣ್ಯ ಗಾತ್ರದ ಈ ಸಾಧನವನ್ನು ಮಂಗಗಳ ತಲೆ ಬುರುಡೆಯಲ್ಲಿ ಅಳವಡಿಸಲಾಗಿತ್ತು. ಅವುಗಳು ನ್ಯೂರಾಲಿಂಕ್ ಸಾಧನದ ಮೂಲಕ ವಿಡಿಯೋ ಗೇಮ್ ಆಡುವುದು ಕಂಡು ಬಂದಿತ್ತು.
ಇದೀಗ ಮಾನವನ ಮೇಲೆ ಪ್ರಯೋಗಕ್ಕೆ ಮುಂದಾಗಿದ್ದು, ಆರಂಭಿಕ ಹಂತದಲ್ಲಿ ಅಂಗವಿಕಲರ ಮೇಲೆ ಪ್ರಯೋಗ ಮಾಡಲಾಗುತ್ತದೆ. ಕೈಗಳ ಮೂಲಕ ಬಳಸುವುದಕ್ಕಿಂತ ವೇಗವಾಗಿ ಈ ಸಾಧನದ ಮೂಲಕ ಮೊಬೈಲ್ ಆಪರೇಟ್ ಮಾಡಬಹುದು ಎಂದು ಮಸ್ಕ್ ಹೇಳಿದ್ದಾರೆ.