✍️ರಾಶಿಫ್ ನಾಯರ್ಮೂಲೆ
ಪ್ರಪಂಚದಾದ್ಯಂತ ಜನ ಉಸಿರು ಬಿಗಿ ಹಿಡಿದು ಕಾಣುವ, ಅತಿ ಜನಪ್ರಿಯ ಕ್ರೀಡೆ ಫುಟ್ಬಾಲ್. ಸದ್ಯ ಏಷ್ಯಾ ಖಂಡದ ಕತಾರ್ ದೇಶಕ್ಕೆ ಈ ಬಾರಿಯ ಫಿಫಾ ವಿಶ್ವಕಪ್ ಫುಟ್ಬಾಲ್ – 2022 ಅನ್ನು ಆಯೋಜಿಸುವ ಅವಕಾಶ ದೊರಕಿದ್ದು, ಅತ್ಯಂತ ಯಶಸ್ವಿಯಾಗಿ ನಡೆಯುತ್ತಾ ಇದೆ. ಕ್ರೀಡೆ ಕತಾತ್’ನಲ್ಲಿ ನಡೆಯುತ್ತಿದೆಯಾದರೂ ಈ ಫುಟ್ಬಾಲ್ ಹಬ್ಬದ ಸಂಭ್ರಮ ಪ್ರಪಂಚದ ಮೂಲೆ ಮೂಲೆಗಳಲ್ಲೂ ಕಂಡು ಬರುತ್ತಿದೆ. ಈ ಸಂದರ್ಭದಲ್ಲಿ ಫುಟ್ಬಾಲ್ ನಡೆದು ಬಂದ ದಾರಿಯ ಬಗ್ಗೆ ಕಣ್ಣು ಹಾಯಿಸುವುದು ಉತ್ತಮ.
1872 ರಲ್ಲಿ ಯುಕೆಯಲ್ಲಿ ಇಂಗ್ಲೆಂಡ್ ವಿರುದ್ಧ ಸ್ಕಾಟ್ಲೆಂಡ್ ನಡುವೆ ನಡೆದ ಪಂದ್ಯವಾಗಿತ್ತು ಪ್ರಪ್ರಥಮ ಅಂತಾರಾಷ್ಟ್ರೀಯ ಫುಟ್ಬಾಲ್ ಪಂದ್ಯ. ಚೈನಾ ದೇಶದ ಗ್ರಾಮವೊಂದರಲ್ಲಿ ಕೈಯಲ್ಲಿ ಚರ್ಮದಿಂದ ರಚಿಸಿದ ಬಾಲನ್ನು ಕಾಲಲ್ಲಿ ತುಳಿಯುವ ಸೂಚೂ ಎಂಬ ಆಟದಿಂದ ಫುಟ್ಬಾಲ್ ಅಥವಾ ಸೋಕರ್ ಎಂಬ ಈ ಆಟ ಉದ್ಭವವಾಗಿತ್ತು.
1904ರಲ್ಲಿ ಫುಟ್ಬಾಲ್ ಆಟ ಸಮ್ಮರ್ ಒಲಿಂಪಿಕ್ಸ್’ನ ಭಾಗವಾದ ನಂತರ ಈ ಆಟ ವಿಶ್ವಕ್ಕೆ ವ್ಯಾಪಿಸಿತು. 1904ರಲ್ಲಿ ಒಲಿಂಪಿಕ್ಸ್’ನಲ್ಲಿ ಆಡಿದ್ದರೂ, ಅದೊಂದು ಮೆಡಲ್ ಸಿಗುವ ಸ್ಪರ್ಧೆ ಆಗಿರಲಿಲ್ಲ. ಕೇವಲ ಮನರಂಜನೆಗಾಗಿ ಆಡಿಸಲಾಗಿತ್ತು. ಇದಕ್ಕಿಂತಲೂ ನೂರು ವರ್ಷಗಳ ಹಿಂದೆಯೇ ಫುಟ್ಬಾಲ್ ಬ್ರಿಟಿಷ್ ಹೋಮ್ ಚಾಂಪಿಯನ್ ಶಿಪ್ ನಡೆಯುತ್ತಲಿತ್ತು.
1904ರಲ್ಲಿ ಫಿಫಾ ಎಂಬ ಸಂಘಟನೆ ಸ್ಥಾಪನೆಯಾದ ನಂತರ, ಪ್ರಪ್ರಥಮವಾಗಿ ಅದು 1906ರಲ್ಲಿ ಸ್ವಿಟ್ಜರ್ಲೆಂಡ್’ನಲ್ಲಿ ಒಂದು ಅಂತಾರಾಷ್ಟ್ರೀಯ ಫುಟ್ಬಾಲ್ ಪಂದ್ಯ ಆಯೋಜಿಸಿತ್ತಾದರೂ ಅದೊಂದು ವಿಫಲ ಪಂದ್ಯಾಟವಾಗಿತ್ತು. ಏಕೆಂದರೆ, ಆಗ ಕೇವಲ 9 ದೇಶಗಳು ಮಾತ್ರ ಫಿಫಾ ಸಂಘದಲ್ಲಿ ಹೆಸರು ನೋಂದಾಯಿಸಿದ್ದವು.
1908ರಿಂದ ಒಲಿಂಪಿಕ್ಸ್’ನಲ್ಲಿ ಮೆಡಲ್ ಸಿಗುವ ಒಂದು ಸ್ಪರ್ಧೆಯಾಗಿ ಫುಟ್ಬಾಲ್ ಸೇರ್ಪಡೆಯಾಯಿತು. ಆದರೆ ಆಗ ಆಟಗಾರರ ವಯಸ್ಸಿನ ಮಿತಿ ಕೇವಲ 23 ಎಂದು ನಿಗದಿಪಡಿಸಲಾಗಿತ್ತು. 1928ರ ಒಲಿಂಪಿಕ್ಸ್’ ವರೆಗೂ ಪ್ರಾಯ 23 ಮಾತ್ರವಾಗಿತ್ತು. 1914ರ ಒಲಿಂಪಿಕ್ಸ್ ಸಂಧರ್ಭದಲ್ಲಿ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಕಮಿಟಿ ಜತೆ ಕರಾರು ರೂಪಿಸಿ, ಫಿಫಾ ಫುಟ್ಬಾಲ್ ನಿಯಂತ್ರಣದ ಜವಾಬ್ದಾರಿ ತಾನು ವಹಿಸಿಕೊಳ್ಳುತ್ತದೆ. ಈ ಮಧ್ಯೆ ಐಒಸಿ ಮತ್ತು ಫಿಫಾ ನಡುವೆ ಭಿನ್ನಾಭಿಪ್ರಾಯ ಮೂಡಿ 1932ರ ಅಮೇರಿಕಾದ ಲಾಸ್ ಏಂಜೆಲ್ಸ್’ನಲ್ಲಿ ನಡೆದ ಒಲಿಂಪಿಕ್ಸ್’ನಲ್ಲಿ ಫುಟ್ಬಾಲನ್ನು ಸೇರಿಸುವುದಿಲ್ಲ ಎಂಬ ತೀರ್ಮಾನ IOC ತೆಗೆದುಕೊಳ್ಳುತ್ತದೆ. ಇದರಿಂದ ನೊಂದ ಫಿಫಾ ಫುಟ್ಬಾಲ್’ಗೆ ಮಾತ್ರವಾಗಿ ಒಂದು ವಿಶ್ವಕಪ್ ರೂಪಿಸುವ ಬಗ್ಗೆ ಅಂದಿನ ಅಧ್ಯಕ್ಷ ಜೂಲ್ಸ್ ರಿಮಿಟ್ ತೀರ್ಮಾನ ತೆಗೆದುಕೊಳ್ಳುತ್ತಾರೆ. ಅದರಂತೆ 1930ರಲ್ಲಿ ಮೊದಲ ವಿಶ್ವಕಪ್ ನಡೆಸಲು ತೀರ್ಮಾನವಾಗುತ್ತದೆ.
ಇದಕ್ಕಾಗಿ ಗ್ರೀಕ್ ದೇವತೆಯ ರೂಪದಂತಿರುವ ಮೊದಲ ಫುಟ್ಬಾಲ್ ವಿಶ್ವಕಪನ್ನು ಇಟಲಿ ತಯಾರಿಸುತ್ತದೆ. ಆರಂಭದಲ್ಲಿ ಮೂರು ಬಾರಿ ಗೆಲ್ಲುವ ರಾಷ್ಟ್ರಕ್ಕೆ ಫಿಫಾ ಕಪ್ ಶಾಶ್ವತವಾಗಿ ಕೊಡುವ ನಿಯಮ ಇತ್ತು. ಬ್ರೆಝಿಲ್ ಮೂರು ಬಾರಿ ಗೆದ್ದಾಗ ಆ ಮೊದಲ ಕಪ್ ಅವರಿಗೆ ಕೊಡಲಾಗಿತ್ತು. ಆ ನಂತರ ಹೊಸ ಕಪ್ ನಿರ್ಮಿಸಲು ಐಡಿಯಾ ಕೇಳಿದಾಗ 57 ದೇಶಗಳು ಸ್ಪಂದಿಸಿದ್ದವು. ಅದರಿಂದ ಆಯ್ದು ನಿರ್ಮಿಸಿದ ಕಪ್ ಈಗಿನದ್ದಾಗಿದ್ದು ಗ್ಲೋಬ್’ ಅನ್ನು ಹಿಡಿದು ನಿಲ್ಲಿಸಿದ ರೂಪದಲ್ಲಿದೆ. ಸದ್ಯ ಈಗ ಫಿಫಾ ತನ್ನ ನಿಯಮ ಬದಲಿಸಿ, ಎಷ್ಟು ಬಾರಿ ಗೆದ್ದರೂ ಕಪ್ ಶಾಶ್ವತವಾಗಿ ಕೊಡುವುದಿಲ್ಲ ಎಂಬ ತೀರ್ಮಾನ ಕೈಗೊಂಡು ಅದರಂತೆ ಚಾಂಪಿಯನ್ ಆದವರಿಗೆ ಕಪನ್ನು ಹಸ್ತಾಂತರ ಮಾಡುವ ಪದ್ದತಿ ಜಾರಿಯಲ್ಲಿದೆ. ಮೊದಲ ಕಪ್ ಕೈವಶ ಮಾಡಿದ್ದ ಬ್ರೆಜಿಲ್, ಆ ಕಪ್ ಅನ್ನು ಉಳಿಸಿಕೊಂಡಿಲ್ಲ ಎಂಬುದು ವಿಪರ್ಯಾಸ. ಅದು ಕಳವು ಆಗಿದೆ ಎಂದು ಹೇಳಲಾಗಿದ್ದು, ಈಗ ಅದು ಎಲ್ಲಿದೆ ಎಂಬ ಮಾಹಿತಿಯೇ ಪ್ರಪಂಚಕ್ಕಿಲ್ಲ! ಬ್ರೆಝಿಲ್ ಇದುವರೆಗೆ 5 ಬಾರಿ ವಿಶ್ವ ಕಪ್ ಗೆದ್ದು ಅತಿ ಹೆಚ್ಚು ಬಾರಿ ಗೆದ್ದ ದಾಖಲೆ ಉಳಿಸಿಕೊಂಡಿದೆ.
1930ರ ಮೊದಲ ಫುಟ್ಬಾಲ್ ವಿಶ್ವಕಪ್’ಗೆ ಆತಿಥ್ಯ ವಹಿಸಲು ಹಲವು ಯೂರೋಪ್ ಮತ್ತು ದಕ್ಷಿಣ ಅಮೆರಿಕಾದ ದೇಶಗಳು ಮುಂದೆ ಬಂದರೂ ಅಂದು ಲಾಟಿನ್ ಅಮೆರಿಕಾದ ಉರುಗ್ವೆ ದೇಶವನ್ನು ಫಿಫಾ ಆಯ್ಕೆ ಮಾಡಿತ್ತು. ಇದಕ್ಕೆ ಇದ್ದ ಕಾರಣವೆಂದರೆ, 1924 ಮತ್ತು 1928ರ ಒಲಿಂಪಿಕ್ಸ್’ನಲ್ಲಿ ಫುಟ್ಬಾಲ್’ನಲ್ಲಿ ಗೋಲ್ಡ್ ಮೆಡಲ್ ಗಿಟ್ಟಿಸಿ ಚಾಂಪಿಯನ್ ಆಗಿದ್ದಿದ್ದು ಉರುಗ್ವೆಯಾಗಿತ್ತು ಮತ್ತು 1930 ಉರುಗ್ವೆಯ 100ನೆ ಸ್ವಾತಂತ್ರ್ಯೋತ್ಸವ ವರ್ಷ ಕೂಡಾ ಆಗಿತ್ತು. ಈ ಕಾರಣಗಳಿಂದಾಗಿ ಫುಟ್ಬಾಲ್ ವಿಶ್ವಕಪ್’ಗೆ ಆತಿಥ್ಯ ಉರುಗ್ವೆ ದೇಶಕ್ಕೆ ದೊರೆತಿತ್ತು.
ಕ್ವಾಲಿಫಿಕೇಶನ್ ರೌಂಡ್ ಇಲ್ಲದೇ ನಡೆದ ಒಂದೇ ಒಂದು ವಿಶ್ವಕಪ್ ಇದಾಗಿತ್ತು. 1930ರ ಮೊದಲ ವಿಶ್ವಕಪ್ ಪಂದ್ಯಾವಳಿಯಲ್ಲಿ 13 ದೇಶಗಳು ಮಾತ್ರ ಭಾಗವಹಿಸಿತ್ತು.
ಹೀಗೆ ಉರುಗ್ವೆಯಲ್ಲಿ 1930 ಜುಲೈ 13 ರಂದು ಮೆಕ್ಸಿಕೋ ಮತ್ತು ಫ್ರಾನ್ಸ್ ಮಧ್ಯೆ ಪ್ರಪ್ರಥಮ ವಿಶ್ವ ಕಪ್ ಪಂದ್ಯ ನಡೆಯುತ್ತದೆ. ಫ್ರಾನ್ಸಿನ ಲೂಸಿಯನ್ ಲೋರೆಂಟ್ ಎನ್ನುವ ಆಟಗಾರ ದಾಖಲಿಸಿದ ಗೋಲ್ ವಿಶ್ವಕಪ್ ಇತಿಹಾಸದ ಪ್ರಪ್ರಥಮ ಗೋಲ್. ಮೆಕ್ಸಿಕೊವನ್ನು 4-1 ರಿಂದ ಸೋಲಿಸಿ ವಿಶ್ವಕಪ್ ಚರಿತ್ರೆಯ ಪ್ರಪ್ರಥಮ ವಿಜಯ ಫ್ರಾನ್ಸ್ ತನ್ನದಾಗಿಸುತ್ತದೆ. ಆ ಪ್ರಥಮ ವಿಶ್ವಕಪ್ ಫೈನಲ್ ಪಂದ್ಯ ಅರ್ಜಂಟಿನಾ ಮತ್ತು ಉರುಗ್ವೆ ಮಧ್ಯೆ ನಡೆದು 4-2 ರಿಂದ ಅರ್ಜೆಂಟಿನಾವನ್ನು ಸೋಲಿಸಿ, ಉರುಗ್ವೆ ಮೊದಲ ಫಿಫಾ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮುತ್ತದೆ. ಇದೊಂದು ಅದ್ಭುತ ಯಶಸ್ಸು ಕಂಡ ಪಂದ್ಯಾಟವಾಗಿತ್ತು. ಅಂದಿನಿಂದ ಇಂದಿನವರೆಗೂ ಫಿಫಾ ಹಿಂದಿರುಗಿ ನೋಡಿಲ್ಲ. ತನ್ನ ಚೈತ್ಯ ಯಾತ್ರೆ ಮುಂದುವರೆಸುತ್ತಲೇ ಇದೆ!
1932 ರಲ್ಲಿ ಫುಟ್ಬಾಲ್ ಅನ್ನು ದೂರ ಇಟ್ಟಿದ್ದ ಒಲಿಂಪಿಕ್ಸ್ ಕಮಿಟಿ, ಫಿಫಾ ವಲ್ಡ್ ಕಪ್ ಜನಪ್ರಿಯತೆ ಅರಿತು 1936 ರಿಂದ ಮತ್ತೆ ಒಲಿಂಪಿಕ್ಸ್’ನಲ್ಲಿ ಸೇರಿಸಲು ತೀರ್ಮಾನ ಮಾಡುತ್ತದಾದರೂ, ಫಿಫಾ ವಿಶ್ವಕಪ್ ನಿಲ್ಲಿಸದೇ ಹಾಗೆಯೇ ಮುಂದುವರಿಸಲು ತೀರ್ಮಾನಿಸುತ್ತದೆ.
1934 ಮತ್ತು 1938ರ ವಿಶ್ವಕಪ್ ಯೂರೋಪ್’ನಲ್ಲಿ ನಡೆಸಲು ಫಿಫಾ ತೀರ್ಮಾನಿಸುತ್ತದೆ. 1934ರ ವಿಶ್ವಕಪ್’ನಿಂದ ಎಲ್ಲಾ ತಂಡದ ಬದಲು ಕೇವಲ 16 ತಂಡವನ್ನು ಮಾತ್ರ ಆಡಿಸಲು ತೀರ್ಮಾನಿಸಿ, ಆ 16 ತಂಡವನ್ನು ಆಯ್ಕೆ ಮಾಡಲು ಕ್ವಾಲಿಫಿಕೇಷನ್ ರೌಂಡ್ ಅನ್ನು ನಡೆಸಲು ತೀರ್ಮಾನಿಸಲಾಗುತ್ತದೆ.
1934ರ ವಿಶ್ವಕಪ್ ಇಟಲಿಯಲ್ಲಿ ಆಯೋಜನೆಗೊಳ್ಳುತ್ತದೆ. ಕ್ರಮಿಸಬೇಕಾದ ದೂರ ಪರಿಗಣಿಸಿ, ಹಿಂದಿನ ಚಾಂಪಿಯನ್ ಉರುಗ್ವೆ ಸಮೇತ ಹಲವು ಲಾಟಿನ್ ಅಮೇರಿಕನ್ ದೇಶಗಳು ಇದರಲ್ಲಿ ಭಾಗವಹಿಸುವುದಿಲ್ಲ. ಅಂದಿನ ಸಾರಿಗೆ ವ್ಯವಸ್ಥೆ ಅದಕ್ಕೆ ಕಾರಣ. ಇಟಲಿಯಲ್ಲಿ ಅಂದು ಫ್ಯಾಶಿಸ್ಟ್ ವ್ಯಕ್ತಿ ಮುಸಲೊನಿ ಆಳುತ್ತಿದ್ದ ಕಾರಣ ರಾಜಕೀಯ ಕರಿನೆರಳು ಕೂಡಾ ಪಂದ್ಯಾಟದ ಮೇಲೆ ಬಿದ್ದಿತ್ತು. ಫುಟ್ಬಾಲನ್ನು ಕೂಡಾ ಅವರ ಫ್ಯಾಶಿಸ್ಟ್ ಅಜೆಂಡಾಗೆ ಬಳಸಿದ್ದರು. ರೆಫರಿಗಳನ್ನು ಮತ್ತು ವಿರೋಧಿ ತಂಡದವರನ್ನು ಸೇರಿದಂತೆ ಹಲವರನ್ನು ಲಂಚ ಕೊಟ್ಟು ಮತ್ತು ಬೆದರಿಸಿ, ಅವರ ಪರ ಇರುವಂತೆ ಮಾಡಲಾಗಿತ್ತು. ಹೀಗೆ ಆ ಪಂದ್ಯವನ್ನು ಇಟಲಿ ಗೆದ್ದು, ಮುಸಲೊನಿ ತಾನೇ ಗೆದ್ದ ತರಹ ಫೋಸ್ ಕೊಟ್ಟಿದ್ದ ಎಂಬುದು ಇತಿಹಾಸದಲ್ಲಿ ದಾಖಲಾಗಿದೆ.
1938ರ ವಿಶ್ವಕಪ್ ಫ್ರಾನ್’ನಲ್ಲಿ ನಡೆಯಿತು. ಫೈನಲ್ ಪಂದ್ಯ ಇಟಲಿ ಮತ್ತು ಹಂಗೇರಿ ದೇಶಗಳ ಮಧ್ಯೆ ನಡೆಯುತ್ತದೆ. ಇದನ್ಜು ಕೂಡಾ ಗೆದ್ದೇ ತೀರಬೇಕೆಂದು ಶಪಥ ಮಾಡಿದ್ದ ಮುಸಲೊನಿ ತನ್ನ ಎಲ್ಲಾ ಆಟಗಾರರಿಗೆ ಟೆಲೆಗ್ರಾಮ್ ಸಂದೇಶ ಕಳಿಸಿ, “ಗೆಲ್ಲಿ ಅಥವಾ ಸಾಯಿರಿ ” ಎಂಬ ಒತ್ತಡ ಹೇರುತ್ತಾರೆ. ಭಾಗ್ಯಕ್ಕೆ ಇಟಲಿ ಆ ವಿಶ್ವಕಪ್ ಕೂಡಾ ಗೆಲ್ಲುತ್ತದೆ. ಎರಡನೇ ಮಹಾಯುದ್ಧದ ಕಾರ್ಮೋಡ ಆವಾಗಲೇ ಕವಿದಿದ್ದ ಪರಿಣಾಮವಾಗಿ, ಕ್ವಾಲಿಫೈ ಆದ ಎಲ್ಲಾ ದೇಶಗಳು ಅದರಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಎರಡನೇ ವಿಶ್ವಮಹಾಯುದ್ಧ ಕಾರಣ 1942 ಮತ್ತು 1946ರ ವಿಶ್ವಕಪ್ ನಡೆದಿರಲಿಲ್ಲ. 1945ರಲ್ಲಿ ಮಹಾಯುದ್ಧ ಮುಗಿದರೂ ಅದರ ನಾಶ ನಷ್ಟಗಳಿಂದ ರಾಷ್ಟ್ರಗಳು ಚೇತರಿಸುತ್ತಾ ಬರುತಿದ್ದರೂ, 1950ರ ಫುಟ್ಬಾಲ್ ವಿಶ್ವಕಪ್’ಗೆ ಆತಿಥ್ಯ ವಹಿಸಲು ಬಹುತೇಕ ದೇಶಗಳು ಹಿಂದೇಟು ಹಾಕಿದ್ದವು. ಆ ಸಂದರ್ಭದಲ್ಲಿ ಬ್ರೆಝಿಲ್ ಮುಂದೆ ಬಂದು 1950ರ ವಿಶ್ವಕಪ್ ಜವಾಬ್ದಾರಿಯನ್ನು ತಾನು ಸ್ವಯಂ ವಹಿಸಿಕೊಳ್ಳುತ್ತದೆ. ಆದರೆ, ಇದರಲ್ಲಿ ಕೂಡಾ ಕ್ವಾಲಿಫೈ ಆದ 16 ತಂಡಗಳಲ್ಲಿ ಹಲವು ದೇಶಗಳು ಆಟದಿಂದ ಹಿಂದೆ ಸರಿದವು. ಅದರಲ್ಲಿ ಮುಖ್ಯವಾಗಿ ಭಾರತ ಕೂಡಾ ಕ್ವಾಲಿಫೈ ಆಗಿ, ಆಟದಿಂದ ಹಿಂದೆ ಸರಿದಿತ್ತು ಎಂಬುದು ಉಲ್ಲೇಖಾರ್ಹ. ಬರಿಗಾಲಲ್ಲಿ (ಷೂ ಧರಿಸದೇ) ಆಡಲು ಫಿಫಾ ಒಪ್ಪದ ಕಾರಣ ಭಾರತ ಹಿಂದೆ ಸರಿದಿತ್ತು ಎಂಬುದು ಕುತೂಹಲಕರ ವಿಚಾರ. 1948 ರ ಒಲಿಂಪಿಕ್ಸ್’ನಲ್ಲಿ ಭಾರತ ಮೊದಲ ಬಾರಿಗೆ ಫುಟ್ಬಾಲ್ ಆಡಿತ್ತಾದರೂ, ಅದು ಬರಿಗಾಲಲ್ಲಿ ಆಡಿತ್ತು.
1950ರ ವಿಶ್ವಕಪ್’ನಲ್ಲಿ ಇಂಗ್ಲೆಂಡ್ ಮೊದಲ ಬಾರಿಗೆ ಭಾಗವಹಿಸಿತ್ತಾದರೂ ಅದು ಹೀನಾಯವಾಗಿ ಸೋತಿತ್ತು. ನಾವು ಆಳ್ವಿಕೆ ಮಾಡಿದ್ದ ನಮ್ಮ ಗುಲಾಮಿ ದೇಶಗಳು ಆಯೋಜಿಸುವ ಪಂದ್ಯಕ್ಕೆ ನಾವು ಆಡಲ್ಲ ಅಂತ ಜಂಭ ಕೊಚ್ಚಿಕೊಂಡಿದ್ದ ಇಂಗ್ಲೆಂಡ್, ವಿಶ್ವಕಪ್’ಗೆ ದೊರೆತ ಜನಪ್ರಿಯತೆಗೆ ಸೋತು ಆಡುವ ನಿರ್ಧಾರಕೈಗೊಂಡಿತ್ತು. 1950ರ ವಿಶ್ವಕಪ್’ನಲ್ಲಿ ಹೋಷ್ಟ್ ಆಗಿದ್ದ ಬ್ರೆಝಿಲ್ ಕೂಡಾ ಸೋತು ಹೋಗಿತ್ತು. ಫೈನಲ್ ಪಂದ್ಯದಲ್ಲಿ ಬ್ರೆಝಿಲ್ ಮತ್ತು ಉರುಗ್ವೆ ಮುಖಾಮುಖಿಯಾಗಿದ್ದು, ಎರಡು ಲಕ್ಷ ಜನ ಫೈನಲ್ ನೋಡಲು ಮೈದಾನದಲ್ಲಿ ಸೇರಿದ್ದರು! ಅದರಲ್ಲಿ ಉರುಗ್ವೆ 2-1 ರಿಂದ ಬ್ರೆಝಿಲ್ ತಂಡವನ್ನು ಸೋಲಿಸಿ, ವಿಶ್ವ ಚಾಂಪಿಯನ್ ಆಯಿತು. ಲಕ್ಷಾಂತರ ಜನ ಮಾರಾಕಾನ ಮೈದಾನದಲ್ಲಿ ಸೇರಿ, ತಮ್ಮ ದೇಶ ಬ್ರೆಝಿಲನ್ನು ಬೆಂಬಲಿಸಿದರೂ ಸೋಲು ಕಂಡ ಈ ಘಟನೆಯನ್ನು ಮಾರಕಾನಾ ದುರಂತ ಅಂತ ಇತಿಹಾಸದಲ್ಲಿ ಗುರುತಿಸಲಾಗಿದೆ.
ಫುಟ್ಬಾಲ್ ತನ್ನ ಜನಪ್ರಿಯತೆ ಹೆಚ್ಚಿಸುತ್ತಾ ಹೋದಂತೆ, 1950ರ ನಂತರ ಯಾವುದೇ ವಿಶ್ವಕಪ್ ಪಂದ್ಯಾವಳಿಯಲ್ಲಿ ಕೂಡಾ ಕ್ವಾಲಿಫೈ ಆದ ತಂಡಗಳು ಆಟದಿಂದ ಹಿಂದೆ ಸರಿದ ಘಟನೆ ನಡೆದಿಲ್ಲ ಎಂಬುದು ಗಮನಾರ್ಹ. 1954ರ ವಿಶ್ಬಕಪ್ ಸ್ವಿಟ್ಜರ್ಲೆಂಡ್ ನಲ್ಲಿ ನಡೆದು, ಫೈನಲ್ ಪಂದ್ಯದಲ್ಲಿ ಹಂಗೇರಿಯನ್ನು ಸೋಲಿಸಿ ಜರ್ಮನಿ ವಿಶ್ವ ಚಾಂಪಿಯನ್ ಆಯಿತು. 1958ರಲ್ಲಿ ಬ್ರೆಝಿಲ್ ಸ್ವೀಡನನ್ನು ಫೈನಲ್ ಪಂದ್ಯದಲ್ಲಿ ಸೋಲಿಸಿ ವಿಶ್ವ ಚಾಂಪಿಯನ್ ಪಟ್ಟಕ್ಕೆ ಏರುತ್ತದೆ. ಅಂದು ಆತಿಥ್ಯ ವಹಿಸಿದ್ದ ದೇಶ ಸ್ವೀಡನ್ ಆಗಿತ್ತು.
ಅದಾಗಲೇ ಫುಟ್ಬಾಲ್ ಪಂದ್ಯ ಜನಪ್ರಿಯತೆಯ ಉತ್ತುಂಗಕ್ಕೆ ತಲುಪಿತ್ತು. ಆ ಕಾಲಘಟ್ಟದಲ್ಲಿ ಟೆಲಿವಿಷನ್ ಬಂದ ನಂತರ, ಆಟದ ಜನಪ್ರಿಯತೆ ಮಿತಿ ಮೀರಿತು. ಆ ಕಾರಣಕ್ಕೆ ಕ್ವಾಲಿಫಿಕೇಷನ್ ರೌಂಡ್ ‘ನಲ್ಲಿ ಭಾಗವಹಿಸುವ ದೇಶಗಳ ಸಂಖೈ ಹೆಚ್ಚುತ್ತಾ ಹೋದುದನ್ನು ಕಾಣಬಹುದು. 1962 ರಲ್ಲಿ 56 ದೇಶಗಳು ಕ್ವಾಲಿಫಿಕೇಷನ್ ರೌಂಡಿಗೆ ಬಂದರೆ, 1966ರಲ್ಲಿ 74 ದೇಶಗಳು ಕ್ವಾಲಿಫಿಕೇಷನ್’ಗಾಗಿ ಭಾಗವಹಿಸಿತ್ತು.! ಎರಡನೇ ಮಹಾ ಯುದ್ಧ ನಡೆದ ಬಳಿಕ ಶೀತಲ ಸಮರದ ಅವಧಿಯಲ್ಲಿ ಹಲವು ದೇಶಗಳು ಸ್ವಾತಂತ್ರ್ಯ ಪಡೆದ ಕಾರಣ, ಅವರು ತಮ್ಮ ದೇಶದ ಗ್ಲೋರಿಗಾಗಿ, ಫುಟ್ಬಾಲ್ ಪಂದ್ಯಕ್ಕೆ ಹೆಚ್ಚು ಆಕರ್ಷಿತರಾದರು ಮತ್ತು ಅದನ್ನು ಬಳಸಿಕೊಂಡರು.
1960ರ ನಂತರ ಫುಟ್ಬಾಲ್ ಇತಿಹಾಸದಲ್ಲಿ ಒಂದು ಹೊಸ ಯುಗ ಆರಂಭವಾಯಿತು. ಆ ಫುಟ್ಬಾಲ್ ಯುಗ ಸೃಷ್ಟಿಸಿದವರು ಮತ್ಯಾರೂ ಅಲ್ಲ. ಐದು ಬಾರಿ ವಿಶ್ವ ಚಾಂಪಿಯನ್ ಆದ ಬ್ರೆಝಿಲ್!. ಪೆಲೆ, ಗರಿಂಜ ನಿಲ್ಟನ್ ಮುಂತಾದ ಜಗತ್ತು ಕಂಡ ಅತ್ಯುತ್ತಮ ಫುಟ್ಬಾಲ್ ಆಟಗಾರರ ಒಂದು ಲೈನ್ ಅಪ್ ಅನ್ನು ಬ್ರೆಝಿಲ್ ರೂಪಿಸುತ್ತಾ ಹೋಯಿತು. ಇಂದೂ ಕೂಡ ಆ ಲೈನ್ ಅಪ್ ಮುಂದುವರೆದಿದ್ದು ನೈಮರ್ ಈಗ ಸದ್ಯದ ಅವರ ಫುಟ್ಬಾಲ್ ತಾರೆಯಾಗಿ ಮಿಂಚುತ್ತಿದ್ದಾರೆ.
1958ರ ವಿಶ್ವ ಚಾಂಪಿಯನ್ ಆಗಿದ್ದ ಬ್ರೆಝಿಲ್ 1962ರಲ್ಲಿ ಚಿಲಿಯಲ್ಲಿ ನಡೆದ ಪಂದ್ಯದಲ್ಲಿ Czechia ದೇಶವನ್ನು ಮತ್ತು 1970ರಲ್ಲಿ ಮೆಕ್ಸಿಕೋದಲ್ಲಿ ನಡೆದ ಪಂದ್ಯದಲ್ಲಿ ಇಟಲಿಯನ್ನು ಸೋಲಿಸಿ ಮೂರು ಬಾರಿ ವಿಶ್ವಕಪ್ ಗೆದ್ದು, ಅಂದು ಇದ್ದ ನಿಯಮದಂತೆ ವಿಶ್ವಕಪ್ ಶಾಶ್ವತವಾಗಿ ತಮ್ಮ ಸ್ವಂತವಾಗಿ ಮಾಡುತ್ತಾರೆ. ಮಧ್ಯೆ 1966ರಲ್ಲಿ ಇಂಗ್ಲೆಂಡ್ ಜರ್ಮನಿಯನ್ನು ಸೋಲಿಸಿ ವಿಶ್ವ ಚಾಂಪಿಯನ್ ಆಗಿತ್ತು ಎಂಬುದು ಗಮನಾರ್ಹ.
1960-70ರ ದಶಕಗಳಲ್ಲಿ ಫುಟ್ಬಾಲ್ ಕ್ರೀಡೆ, ಪ್ರಪಂಚದಲ್ಲೇ ಅತೀ ಹೆಚ್ವು ಜನಪ್ರಿಯತೆ ಗಳಿಸುವ ಮುಖಾಂತರ, ಫಿಫಾ ವಲ್ಡ್ ಕಪ್ ಪಂದ್ಯಾಟದ ಕ್ವಾಲಿಫೈ ರೌಂಡಿಗೆ ಬರುವ ದೇಶಗಳ ಸಂಖ್ಯೆ ಹೆಚ್ಚುತ್ತಾ ಹೋದ ಹಾಗೆ 16 ತಂಡಗಳಿಗೆ ಮಾತ್ರ ಅವಕಾಶ ನೀಡಿದ್ದ ಫಿಫಾ, ಹೆಚ್ಚು ದೇಶಗಳನ್ನು ಆಡಿಸಲು ನಿರ್ಬಂಧಿತವಾಗುತ್ತದೆ. ಫಿಫಾ ಆ ಸಂಖ್ಯೆಯನ್ನು 1982ರಲ್ಲಿ 24 ಆಗಿಯೂ 1998ರಲ್ಲಿ 32 ಆಗಿಯೂ ಹೆಚ್ಚಿಸಿತು. ಸದ್ಯ ಈಗ ವಿಶ್ವಕಪ್ ಪಂದ್ಯಾಟದಲ್ಲಿ ಭಾಗವಹಿಸಲು 32 ದೇಶಗಳಿಗೆ ಅವಕಾಶವಿದೆ. 2026ರಿಂದ ಇದರ ಸಂಖ್ಯೆ 48 ಮಾಡಲು ಈಗಾಗಾಲೇ ಫಿಫಾ ನಿರ್ಧರಿಸಿಯಾಗಿದೆ. 2002ರ ನಂತರ ನೋಡುವುದಾದರೆ, ಪ್ರತಿ ವಿಶ್ವಕಪ್ ಕ್ವಾಲಿಫಿಕೇಷನ್’ಗಾಗಿ ಸುಮಾರು 200ರಷ್ಟು ದೇಶಗಳು ಮುಂದೆ ಬರುತ್ತಿರುವುದನ್ನು ಕಾಣಬಹುದು. ಫುಟ್ಬಾಲ್ ಜನಪ್ರಿಯತೆ ವಿಪರೀತ ಹೆಚ್ಚಾಗಿತ್ತಿರುವುದಕ್ಕೆ ಜ್ವಲಂತ ಉದಾಹರಣೆ ಇದು.
ಮೊದಲು ಯೂರೋಪ್ ಮತ್ತು ಅಮೆರಿಕನ್ ದೇಶಗಳೇ ವಿಶ್ವಕಪ್’ಗೆ ಆತಿಥ್ಯ ವಹಿಸಿತ್ತಾದರೂ, 2002ರಲ್ಲಿ ಇದು ಬದಲಾಯಿತು. ಮೊದಲ ಬಾರಿಗೆ ಏಷ್ಯಾದ ದೇಶವೊಂದು ಫುಟ್ಬಾಲಿಗೆ ಆತಿಥ್ಯ ನೀಡಿತ್ತು. ಸೌತ್ ಕೊರಿಯಾ ಮತ್ತು ಜಪಾನ್ ಒಟ್ಟು ಸೇರಿ 2002 ರ ವಿಶ್ವಕಪ್ ಅನ್ನು ಯಶಸ್ವಿಯಾಗಿ ಆಯೋಜಿಸಿದ್ದವು. 2010ರಲ್ಲಿ ದಕ್ಷಿಣ ಆಫ್ರಿಕಾ ಆತಿಥ್ಯ ವಹಿಸುವ ಮುಖಾಂತರ ಅದು ಆಫ್ರಿಕನ್ ಕಾಂಟಿನೆಂಟಿಗೆ ಕೂಡಾ ವ್ಯಾಪಿಸಿತು! ಈಗ ಮತ್ತೆ ಏಷ್ಯನ್ ದೇಶಕ್ಕೆ ಆ ಸರದಿ ಸಿಕ್ಕಿದೆ!!
ಒಟ್ಟು ಇದುವರೆಗೆ 21 ಫುಟ್ಬಾಲ್ ವಿಶ್ವಕಪ್ ನಡೆದಿವೆ. ಅದರಲ್ಲಿ ಒಟ್ಟು 8 ದೇಶಗಳಿಗೆ ವಿಶ್ವ ಚಾಂಪಿಯನ್ ಆಗಲು ಸಾಧ್ಯವಾಗಿದೆ. ಬ್ರೆಝಿಲ್ 5 ಸಲ ವಿಶ್ವ ಚಾಂಪಿಯನ್ ಆದರೆ, ಜರ್ಮನಿ ಮತ್ತು ಇಟಲಿ ತಲಾ ನಾಲ್ಕು ಸಲ ವಿಶ್ವ ಚಾಂಪಿಯನ್ ಆಗಿವೆ. ಉರುಗ್ವೆ, ಫ್ರಾನ್ಸ್ ಮತ್ತು ಅರ್ಜೆಂಟಿನಾ ತಲಾ ಎರಡೆರಡು ಸಲ ಹಾಗೂ ಇಂಗ್ಲೆಂಡ್ ಮತ್ತು ಸ್ಪೇನ್ ತಲಾ ಒಂದೊಂದು ಸಲ ವಿಶ್ವ ಚಾಂಪಿಯನ್ ಆಗಿದ್ದಾರೆ. 1974 ರ ವೆಸ್ಟ್ ಜರ್ಮನಿಯಲ್ಲಿ ನಡೆದ ವಿಶ್ವಕಪ್ ಫೈನಲ್’ನಲ್ಲಿ ಜರ್ಮನಿ ನೆದರ್ಲೆಂಡನ್ನು ಸೋಲಿಸಿ ಚಾಂಪಿಯನ್ ಆಗಿತ್ತು.
1978ರ ಅರ್ಜೆಂಟಿನಾದಲ್ಲಿ ನಡೆದ ಪಂದ್ಯಾವಳಿಯಲ್ಲಿ ನೆದರ್ಲೆಂಡ್ ಅನ್ನು ಫೈನಲ್’ ನಲ್ಲಿ ಸೋಲಿಸಿ ಅರ್ಜೆಂಟಿನಾ ಚಾಂಪಿಯನ್ ಆಯಿತು. 1982ರ ಸ್ಪೇನಲ್ಲಿ ನಡೆದ ಪಂದ್ಯಾವಳಿಯಲ್ಲಿ ಜರ್ಮನಿಯನ್ನು ಸೋಲಿಸಿ ಇಟಲಿ ಚಾಂಪಿಯನ್ ಆಯಿತು. 1986ರಲ್ಲಿ ಮೆಕ್ಸಿಕೋದಲ್ಲಿ ನಡೆದ ಪಂದ್ಯಾವಳಿಯ ಫೈನಲ್’ನಲ್ಲಿ ಜರ್ಮನಿಯನ್ನು ಸೋಲಿಸಿ ಅರ್ಜೆಂಟಿನಾ ಚಾಂಪಿಯನ್ ಆಯಿತು. 1990ರಲ್ಲಿ ಇಟಲಿಯಲ್ಲಿ ನಡೆದ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಅರ್ಜೆಂಟಿನಾವನ್ನು ಸೋಲಿಸಿ ಜರ್ಮನಿ ಚಾಂಪಿಯನ್ ಆದರೆ 1994ರಲ್ಲಿ USA ನಲ್ಲಿ ನಡೆದ ವಿಶ್ವಕಪ್ ಫೈನಲ್ಸ್ ಇಟಲಿ ಮತ್ತು ಬ್ರೆಝಿಲ್ ನಡುವೆ ನಡೆದು ಬ್ರೆಝಿಲ್ ಚಾಂಪಿಯನ್ ಆಯಿತು. 1998ರಲ್ಲಿ ಫ್ರಾನ್ಸ್’ನಲ್ಲಿ ನಡೆದ ವಿಶ್ವಕಪ್ ಫೈನಲ್’ನಲ್ಲಿ ಬ್ರೆಝಿಲ್ ಅನ್ನು ಸೋಲಿಸಿ ಫ್ರಾನ್ಸ್ ಚಾಂಪಿಯನ್ ಆಯಿತು. 2002ರಲ್ಲಿ ದಕ್ಷಿಣ ಕೊರಿಯಾದಲ್ಲಿ ಪಂದ್ಯ ನಡೆದು ಬ್ರೆಝಿಲ್ ಜರ್ಮನಿಯನ್ನು ಫೈನಲ್’ನಲ್ಲಿ ಸೋಲಿಸಿ ಚಾಂಪಿಯನ್ ಆಯಿತು. 2006ರ ಜರ್ಮನಿಯಲ್ಲಿ ನಡೆದ ಪಂದ್ಯಾವಳಿಯಲ್ಲಿ ಫ್ರಾನ್ಸ್’ ಅನ್ನು ಸೋಲಿಸಿ ಇಟಲಿ ಚಾಂಪಿಯನ್ ಆಯಿತು. 2010 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ವಿಶ್ವಕಪ್ ನಡೆದು, ಫೈನಲ್’ನಲ್ಲಿ ನೆದರ್ಲೆಂಡನ್ನು ಸ್ಪೇನ್ ಸೋಲಿಸಿ ಚಾಂಪಿಯನ್ ಆಯಿತು. 2014 ರಲ್ಲಿ ಬ್ರೆಝಿಲ್ ವಿಶ್ವಕಪ್ ಆತಿಥ್ಯ ವಹಿಸಿತ್ತು. ಫೈನಲ್ ಪಂದ್ಯದಲ್ಲಿ ಜರ್ಮನಿ ಅರ್ಜೆಂಟಿನಾವನ್ನು ಸೋಲಿಸಿ ಚಾಂಪಿಯನ್ ಪಟ್ಟ ಪಡೆಯಿತು. 2018ರ ಕೊನೆಯ ವಿಶ್ವಕಪ್ ರಷ್ಯಾದಲ್ಲಿ ನಡೆಯಿತು. ಫೈನಲ್’ನಲ್ಲಿ ಕ್ರೊಯೆಷಿಯಾವನ್ನು ಫ್ರಾನ್ಸ್ ಸೋಲಿಸಿ ಸದ್ಯ ಈಗ ಹಾಲಿ ಚಾಂಪಿಯನ್ ಆಗಿದೆ.
ವಿಶ್ವಕಪ್ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ಗೋಲ್ ಗಳಿಸುವ ಆಟಗಾರನಿಗೆ ಮ್ಯಾನ್ ಆಫ್ ದ ಸೀರೀಸ್ ಆಗಿ ‘ಗೋಲ್ಡನ್ ಬೂಟ್ ಅವಾರ್ಡ್’ ಕೊಡಲಾಗುತ್ತದೆ
ಈಗ ನಡೆಯುತ್ತಿರುವ ಕತಾರ್ ವಿಶ್ವಕಪ್ ಪಂದ್ಯಾವಳಿಯಲ್ಲಿ ಇದುವರೆಗೆ ಫ್ರಾನ್ಸ್’ನ ಎಂಬಾಪೆ 3 ಗೋಲು ಗಳಿಸಿ ಗೋಲ್ಡನ್ ಬೂಟ್ ಗೆ ಕಣ್ಣಿಟ್ಟಿದ್ದಾರೆ. ಕೊನೆಯ 2018 ರ ವಿಶ್ವಕಪಲ್ಲಿ ಇಂಗ್ಲೆಂಡ್ ತಂಡದ ಕ್ಯಾಪ್ಟನ್ ಹೆರ್ರಿ ಕಾನೆ ಗೋಲ್ಡನ್ ಬೂಟ್ ಪಡೆದಿದ್ದರು.