ಬೈಕ್ ಓವರ್ ಟೇಕ್ ಮಾಡಿದ್ದಕ್ಕೆ ದಲಿತ ಯುವಕನಿಗೆ ಥಳಿತ: ಅವಮಾನ ತಾಳಲಾರದೆ ಆತ್ಮಹತ್ಯೆ

Prasthutha|

ಕೋಲಾರ: ಬೈಕ್ ಓವರ್ ಟೇಕ್ ಮಾಡಿದ್ದಾನೆ ಎಂದು ಆರೋಪಿಸಿ ದಲಿತ ಯುವಕನನ್ನು ಮರಕ್ಕೆ ಕಟ್ಟಿ ಥಳಿಸಿದ್ದು, ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಬೇವಹಳ್ಳಿ ಗ್ರಾಮದಲ್ಲಿ ನಡೆದಿದೆ.

- Advertisement -

ಪರಿಶಿಷ್ಟ ಜಾತಿಯ(ಎಸ್.ಸಿ) ಉದಯ್ ಕಿರಣ್ (25) ಮೃತ ಯುವಕನಾಗಿದ್ದು, ದೌರ್ಜನ್ಯವೆಸಗಿದ ಆರೋಪದಲ್ಲಿ ಒಕ್ಕಲಿಗ ಸಮುದಾಯದ ಪೆತ್ತಾಂಡ್ಲಹಳ್ಳಿಯ ರಾಜು, ಶಿವರಾಜ್, ಗೋಪಾಲಕೃಷ್ಣಪ್ಪ ಹಾಗೂ ಮುನಿವೆಂಕಟಪ್ಪ ವಿರುದ್ಧ ದೌರ್ಜನ್ಯ ತಡೆ ಕಾಯ್ದೆ ಮತ್ತು ಐಪಿಸಿ ಸೆಕ್ಷನ್ 341, 34, 504, 306 ಮತ್ತು 323ರ ಅಡಿಯಲ್ಲಿ ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್ ಹಿಂದಿಕ್ಕಿದ ಕಾರಣ ಜಗಳ ತೆಗೆದ ಆರೋಪಿಗಳು ಹಲ್ಲೆ ನಡೆಸಿ ಉದಯ್’ನ ಬೈಕ್ ಮತ್ತು ಮೊಬೈಲ್ ಕಿತ್ತುಕೊಂಡು ಹೋಗಿದ್ದರು. ಅವನ್ನು ವಾಪಸ್ ಕೇಳಲು ಆತ ಪೆತ್ತಾಂಡ್ಲಹಳ್ಳಿಗೆ ಹೋಗಿದ್ದ. ಈ ಸಂದರ್ಭದಲ್ಲಿ ಆರೋಪಿಗಳು ಉದಯ್ ಕಿರಣ್’ನನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಿ, ಜಾತಿ ನಿಂದನೆ ಮಾಡಿದ್ದರು ಎಂದು ಮೃತನ ಮಾವ ದೂರಿನಲ್ಲಿ ತಿಳಿಸಿದ್ದಾರೆ.

- Advertisement -

ಆರೋಪಿಗಳೆಲ್ಲರೂ ಸಂಬಂಧಿಗಳಾಗಿದ್ದು, ತಲೆ ಮರೆಸಿಕೊಂಡಿದ್ದಾರೆ.



Join Whatsapp